ಪರ್ಯಾಯ ರಾಜಕೀಯ ಸಂಸ್ಕೃತಿ ಕಟ್ಟುವುದು ಇವತ್ತಿನ ತುರ್ತು-ಸುಗತ ಶ್ರೀನಿವಾಸರಾಜು

Update: 2020-03-16 10:50 GMT

ಕೇಂದ್ರ ಸರಕಾರ ಎರಡು ನ್ಯೂಸ್ ಚಾನೆಲ್‌ಗಳಿಗೆ ನಿಷೇಧ ಹೇರುವುದು, ಕರ್ನಾಟಕದಲ್ಲಿ ವಿಧಾನಸಭಾ ಸ್ಪೀಕರ್ ಸದನಕ್ಕೆ ಮಾಧ್ಯಮಗಳನ್ನು ನಿರ್ಬಂಧಿಸುವುದು, ಪತ್ರಿಕೋದ್ಯಮ ಪ್ರಭುತ್ವದ ಪರವಾಗಿರುವುದು, ಸೋಶಿಯಲ್ ಮೀಡಿಯಾಗಳ ಕಾಲದಲ್ಲಿ ಸುಳ್ಳು ಸುದ್ದಿಗಳೇ ವಿಜೃಂಭಿಸುವುದು. ಒಟ್ಟಾರೆ ಪತ್ರಿಕೋದ್ಯಮ ಎತ್ತ ಸಾಗುತ್ತಿದೆ? ಸಮಾಜಮುಖಿಯಾಗಿದ್ದ ಪತ್ರಿಕೋದ್ಯಮ ಏಕರೂಪವಾಗಿದ್ದು ಹೇಗೆ ಮತ್ತು ಏಕೆ? ಅದೇ ಅತಿಯಾಗಿ, ಅದೇ ಪತ್ರಿಕೋದ್ಯಮವಾಗಿರುವುದರ ಅಪಾಯಗಳೇನು, ಪರಿಹಾರವೇನು ಈ ಎಲ್ಲವುಗಳ ಸುತ್ತ ಕನ್ನಡ ಮತ್ತು ಇಂಗ್ಲಿಷ್-ಎರಡೂ ಭಾಷೆಗಳ, ದೃಶ್ಯ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳೆರಡಲ್ಲೂ ಕೆಲಸ ಮಾಡಿ ಅಪಾರ ಅನುಭವವಿರುವ, ಹಿರಿಯ ಪತ್ರಕರ್ತರಾದ ಸುಗತ ಶ್ರೀನಿವಾಸರಾಜು ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

 ಇತ್ತೀಚೆಗೆ ನಡೆದ ದಿಲ್ಲಿ ಹಿಂಸಾಚಾರದ ವೇಳೆ ಆಕ್ಷೇಪಾರ್ಹ ಸುದ್ದಿ ಪ್ರಸಾರದ ನೆಪದಲ್ಲಿ ಏಶ್ಯನೆಟ್ ನ್ಯೂಸ್ ಮತ್ತು ಮೀಡಿಯಾ ವನ್ ಮಲಯಾಳಂ ಚಾನೆಲ್‌ಗೆ ಕೇಂದ್ರ ಸರಕಾರ ನಿಷೇಧ ವಿಧಿಸಿದ್ದು ಎಷ್ಟು ಸರಿ?

ಮಾಧ್ಯಮ ಸಂಸ್ಥೆಗಳ ಮೇಲಿನ ನಿಷೇಧಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಯಾವ ಕಾರಣಕ್ಕೆ ಎಂಬುದು ಮುಖ್ಯ. ಹಿಂಸೆಯನ್ನು ತೋರಿಸುವಾಗ, ಬಳಸಿದ ಭಾಷೆ, ತೋರಿಸಿದ ದೃಶ್ಯಗಳು ಪ್ರಚೋದನಾಕಾರಿಯಾಗಿದ್ದು, ಮತ್ತಷ್ಟು ಹಿಂಸೆಗೆ ಪ್ರೇರೇಪಿಸುವಂತಿದ್ದರೆ ನಿಷೇಧಿಸಬಹುದು. ಆದರೆ ಕೇಂದ್ರ ಸರಕಾರ ಎಲ್ಲವನ್ನೂ ಬಿಟ್ಟು ಈ ಎರಡು ಮಾಧ್ಯಮ ಸಂಸ್ಥೆಗಳ ಮೇಲೆ ನಿಷೇಧ ಹೇರಿದ್ದು ಗುಮಾನಿಗೆ ಎಡೆಮಾಡಿಕೊಟ್ಟಿತು. ಜನರಿಂದ ವಿರೋಧ ವ್ಯಕ್ತವಾಯಿತು. ಎಚ್ಚೆತ್ತ ಕೇಂದ್ರ ಸರಕಾರ ನಿಷೇಧವನ್ನು ಹಿಂದೆಗೆದುಕೊಂಡಿತು.

 ಮಾಧ್ಯಮಗಳ ಮೇಲಿನ ನಿಷೇಧಕ್ಕೆ ಸಹಜವಾಗಿಯೇ ವ್ಯಕ್ತವಾಗಬೇಕಿದ್ದ ವಿರೋಧ ವ್ಯಕ್ತವಾಗಲಿಲ್ಲ, ಏಕೆ?

ಕೇಂದ್ರ ಸರಕಾರ ನಿಷೇಧಿಸಿದ್ದು ಕೇರಳದ ಎರಡು ಚಾನೆಲ್‌ಗಳನ್ನು.ಕೇರಳಕ್ಕೂ ದೇಶದ ಇತರೆಡೆಗೂ ಬಹಳ ವ್ಯತ್ಯಾಸವಿದೆ. ನಾನು ಅಲ್ಲಿಯೂ, ಸಂಪಾದಕನಾಗಿ ಕೆಲಸ ಮಾಡಿರುವುದರಿಂದ, ಅಲ್ಲಿನ ಮಾಧ್ಯಮ ಲೋಕವನ್ನು ಹತ್ತಿರದಿಂದ ಬಲ್ಲವನಾಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ದೇಶದ ಮಾಧ್ಯಮ ಕ್ಷೇತ್ರ ಹೆಚ್ಚೂಕಡಿಮೆ ಏಕರೂಪ-ಅಂದರೆ ಪ್ರಭುತ್ವದ ಪರ-ಬಹುಸಂಖ್ಯಾತರ ಪರ-ಒಂದು ಧರ್ಮದ ಪರವಾಗಿರುವುದನ್ನು ಕಾಣಬಹುದಾಗಿದೆ. ಆ ಹಿಡಿತಕ್ಕೆ ಸಿಕ್ಕದಿರುವುದು ಕೇರಳ ರಾಜ್ಯ ಮತ್ತು ಆ ರಾಜ್ಯದ ಮಾಧ್ಯಮ ಕ್ಷೇತ್ರ. ಕೇರಳ ರಾಜ್ಯವನ್ನು ಬಿಜೆಪಿ ಮತ್ತು ಆರೆಸ್ಸೆಸ್ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವ, ಅಯ್ಯಪ್ಪದೇಗುಲಕ್ಕೆ ಮಹಿಳೆಯರ ನಿರ್ಬಂಧಗಳಂತಹ ವಿಷಯಗಳನ್ನಿಟ್ಟುಕೊಂಡು ಕಣಕ್ಕಿಳಿದಿತ್ತು. ಆ ಬೆಂಕಿಗೆ ಬೇಕಾದ ಉಪ್ಪು-ತುಪ್ಪವನ್ನು ಸುರಿದಿತ್ತು. ಆದರೆ ಕೇರಳದಲ್ಲಿ ಅವರ ಬೇಳೆ ಬೇಯಲಿಲ್ಲ. ಆ ಸಿಟ್ಟನ್ನು ಮೊನ್ನಿನ ದಿಲ್ಲಿ ಹಿಂಸಾಚಾರದ ವೇಳೆ, ಮಾಧ್ಯಮ ಸಂಸ್ಥೆಗಳಿಗೆ ನಿಷೇಧ ಹೇರುವ ಮೂಲಕ ಸದೆಬಡಿಯಲು ಹವಣಿಸಿದರು ಎಂಬ ಗುಮಾನಿ ಈಗ ಎಲ್ಲಾ ಕಡೆ ಹರಡಿದೆ. ಕೇರಳ ರಾಜ್ಯದ ಜನರು ಸುಶಿಕ್ಷಿತರು. ಅವರಿಗೆ ರಾಜಕೀಯ ಸಂಸ್ಕೃತಿ ಇದೆ. ಮಾಧ್ಯಮಗಳು ಹೊಸಗಾಲಕ್ಕೆ ತೆರೆದುಕೊಂಡಿವೆ. ಬದಲಾವಣೆಗೆ ಒಡ್ಡಿಕೊಂಡಿವೆ. ಪತ್ರಕರ್ತರಿಗೆ ಒಂದು ಓರಿಯಂಟೇಷನ್ ಇದೆ. ಎಡವೋ, ಬಲವೋ ಅಥವಾ ನಡುವೋ-ಸ್ಪಷ್ಟತೆ ಇದೆ. ನಂಬಿದ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಒಂದು ರೀತಿಯಲ್ಲಿ ಕೇರಳ, ಬಿಜೆಪಿ-ಆರೆಸ್ಸೆಸ್ ಹಿಡಿತಕ್ಕೆ ಸಿಗದೆ ಸ್ವತಂತ್ರವಾಗಿದೆ. ಪಕ್ಕದಲ್ಲಿಯೇ ಇದ್ದರೂ ಅಮೆರಿಕದ ಹಿಡಿತಕ್ಕೆ ಸಿಗದ ಕ್ಯೂಬಾ ಥರ. ಆದರೆ ಕರ್ನಾಟಕ ಕೇರಳದಂತೆ ಅಲ್ಲ, ಅದೇ ಇಲ್ಲಿಯ ಸಮಸ್ಯೆ.

 ಕರ್ನಾಟಕ ವಿಧಾನಸಭಾ ಸ್ಪೀಕರ್, ಅಧಿವೇಶನಕ್ಕೆ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳ ಕ್ಯಾಮರಾಗಳಿಗೆ ನಿರ್ಬಂಧ ಹೇರಿ, ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾದರು. ವಿರೋಧವೇ ವ್ಯಕ್ತವಾಗಲಿಲ್ಲವಲ್ಲ?

   ಒಂದಷ್ಟು ಪತ್ರಕರ್ತರು, ಬುದ್ಧಿಜೀವಿ ಚಿಂತಕರು ಮತ್ತು ರಾಜಕಾರಣಿಗಳು ತಾತ್ವಿಕವಾಗಿ, ನೈತಿಕವಾಗಿ ಇದು ಸರಿಯಲ್ಲ, ಅಭಿವ್ಯಕ್ತಿ ಸ್ವಾತಂತ್ರದ ಹರಣ ಎಂದು ಪ್ರತಿಭಟಿಸುತ್ತಾರೆ. ನನ್ನ ಪ್ರಕಾರ ಅದೂ ಕೂಡ ಟೋಕನ್ ಪ್ರೊಟೆಸ್ಟ್. ಪ್ರತಿಭಟನೆ ಮಾಡಬೇಕಾದರೂ, ಅದಕ್ಕೊಂದು ನೈತಿಕವಾದ ತಳಹದಿ ಇರಬೇಕು, ತತ್ವ-ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಅಂತಹವರು ಮಾಡಿದಾಗ, ಅದಕ್ಕೊಂದು ಬೆಲೆ ಬರುತ್ತದೆ. ಪತ್ರಕರ್ತರು ಕೆಲಸ ಮಾಡುವ ಸಂಸ್ಥೆಯ ಮರ್ಜಿಗೊಳಗಾಗಿ ಕೆಲಸ ಮಾಡಬೇಕಾಗಿರುವಾಗ, ಪತ್ರಿಕಾ ಸಂಸ್ಥೆಗಳು ಸರಕಾರಿ ಜಾಹೀರಾತಿಗಾಗಿ ರಾಜಕಾರಣಿಗಳ ಮುಂದೆ ನಡುಬಗ್ಗಿಸಿ ನಿಲ್ಲಬೇಕಾಗಿರುವಾಗ-ವಿರೋಧ, ಹೋರಾಟ ಸಾಧ್ಯವೇ? ಹಾಗೆಯೇ ಬುದ್ಧಿಜೀವಿಗಳು-ಅವರು ಎಡವೋ, ಬಲವೋ-ಸರಕಾರ ಕರೆದು ಕುರ್ಚಿ ಕೊಡಲಿ ಎಂದು ಕಾಯುವಂತಹ ವಾತಾವರಣದಲ್ಲಿ, ಅವರು ಪ್ರತಿಭಟನೆಗೆ ಮುಂದಾದರೆ, ಗಂಭೀರವಾಗಿ ಪರಿಗಣಿಸಲಾಗುತ್ತದೆಯೇ? ಹಾಗೆಯೇ ರಾಜಕಾರಣಿಗಳು ಕೂಡ, ಆಳುವ ಪಕ್ಷ ಮಾಡಿದರೆ, ವಿಪಕ್ಷ ವಿರೋಧಿಸುವುದು ಮಾಮೂಲಾಗಿಹೋಗಿದೆ.ಏನೋ ಒಂದು ಪೊಲಿಟಿಕಲ್ ಸ್ಟೇಟ್‌ಮೆಂಟ್, ಟೋಕನ್ ಪ್ರೊಟೆಸ್ಟ್ ಮಾಡಬೇಕು ಮಾಡ್ತರೆ ಅಲ್ಲಿಗೆ ಅವರ ಕೆಲಸ ಮುಗಿಯಿತು. ಯಾರಿಗೂ ಸೀರಿಯಸ್‌ನೆಸ್ ಇಲ್ಲ, ಆದರೆ ಇದೆಲ್ಲವನ್ನು ಮಾಡುತ್ತಿರುವ ಬಿಜೆಪಿಗೆ ಕ್ಲಿಯರ್ ಕಟ್ ಅಜೆಂಡಾ ಇದೆ. ಅಧಿಕಾರಕ್ಕೇರುತ್ತಾರೆ, ಚಲಾಯಿಸುತ್ತಾರೆ ಮತ್ತು ಸದಾ ಚಲಾವಣೆಯಲ್ಲಿಟ್ಟಿರುತ್ತಾರೆ.

ಮುಖ್ಯವಾಗಿ ಕರ್ನಾಟಕ ಹೊಸ ಪೊಲಿಟಿಕಲ್ ಕಲ್ಚರ್‌ಗೆ ತೆರೆದುಕೊಳ್ಳಲೇ ಇಲ್ಲ. ಆ ಹಾದಿಯಲ್ಲಿ ಲಂಕೇಶ್ ಪತ್ರಿಕೆ ಹೊಸ ಆಶಾಕಿರಣದಂತೆ ಕಂಡಿತ್ತು.ಲಂಕೇಶರು ಶ್ರಮವಹಿಸಿ ಕಟ್ಟಿ ಬೆಳೆಸಿದ ರಾಜಕೀಯ, ಸಾಮಾಜಿಕ ಸಂಸ್ಕೃತಿಯನ್ನು, ಅವರ ನಂತರದ ಪೀಳಿಗೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಬೇಕಾಗಿತ್ತು. ಆದರೆ ಆಗದೆ, ಅದಕ್ಕೆ ವಿರುದ್ಧವಾದ ಏಕರೂಪತೆ ಪತ್ರಿಕೋದ್ಯಮವನ್ನು ಆವರಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ಕನ್ನಡ ಪತ್ರಿಕೋದ್ಯಮ ನಾಸ್ಟಾಲ್ಜಿಯಾದಲ್ಲಿ-ಗತದ ವಿಜೃಂಭಣೆಯಲ್ಲಿ, ಅದೇ ಅಹಿಂದ, ಸಂಘಟನೆ, ಹೋರಾಟ, ಪ್ರಶಸ್ತಿಗಳಲ್ಲಿ ಬಿದ್ದು ನರಳುತ್ತಿದೆ.ಹೊಸ ದಾರಿ ಕಂಡುಕೊಂಡಿಲ್ಲ. ಚಲನಶೀಲತೆ ಇಲ್ಲ. ಸರಕಾರದ ನಿಯಂತ್ರಣಕ್ಕೆ ಅವರೇ ಒಳಗಾಗಲು ಹಾತೊರೆಯುವ ಸಂದರ್ಭದಲ್ಲಿ ಪ್ರತಿಭಟನೆ, ಹೋರಾಟವೂ ಸಾಧ್ಯವಾಗುವುದಿಲ್ಲ.

 ಪತ್ರಿಕೋದ್ಯಮವೂ ಉದ್ಯಮವಾಗಿರುವಾಗ, ಇಲ್ಲಿ ಸೇವೆ, ಸಿದ್ಧಾಂತ ಹುಡುಕುವುದು ಎಷ್ಟು ಸರಿ ಎಂಬ ವಾದವೂ ಇದೆ, ಈ ಬಗ್ಗೆ ಏನು ಹೇಳುತ್ತೀರಿ?

ಮೊದಲು ಮೀಡಿಯಾಗಳಿಗೆ, ರೆವಿನ್ಯೂ ಜನರೇಟ್ ಮಾಡುವ ಮಾಡೆಲ್ ಏನಾಗಿರಬೇಕು ಎನ್ನುವುದರ ಬಗ್ಗೆ ಕ್ಲಿಯರ್ ಕಟ್ ಐಡಿಯಾ ಇರಬೇಕು.ಇದು ಕನ್ನಡ ಪತ್ರಿಕೋದ್ಯಮದ ಪ್ರಶ್ನೆಯೊಂದೇ ಅಲ್ಲ, ಜಾಗತಿಕ ಸಮಸ್ಯೆ. ನ್ಯೂಯಾರ್ಕ್ ಟೈಮ್ಸ್ ಕೂಡ ಏದುಸಿರುಬಿಡುತ್ತಿದೆ. ಈ ರೆವಿನ್ಯೂ ಜನರೇಟ್ ಮಾಡೆಲ್ ಅನ್ನು ಅಷ್ಟು ಸುಲಭವಾಗಿ ಸರಳೀಕರಿಸಿ ಹೇಳಲಾಗುವುದಿಲ್ಲ.

ಜನರೇ ಎಷ್ಟು ದಿನಾಂತ ಸಾಕಲಿಕ್ಕೆ ಆಗುತ್ತೆ. ನನ್ನ ಪ್ರಕಾರ ಪತ್ರಿಕೆಗಳೇ ಆಗಲಿ, ಟಿವಿಗಳೇ ಆಗಲಿ ಸರಕಾರಕ್ಕೆ ಆತುಕೊಳ್ಳುವುದು ಅಪಾಯಕಾರಿಯಲ್ಲ. ಒಂದು ಸರಕಾರ ಹೆಚ್ಚಿಗೆ ಅಂದರೆ ಐದು ವರ್ಷ ಇರುತ್ತೆ, ಹೋಗುತ್ತೆ. ಹಾಗೆಯೇ ಮಾಧ್ಯಮಗಳ ಒಲವು-ನಿಲುವು ಕೂಡ ಬದಲಾಗುತ್ತದೆ. ಆದರೆ ಅಪಾಯಕಾರಿಯಾಗಿರುವುದು, ಪತ್ರಿಕೋದ್ಯಮದಲ್ಲಿ ಕಂಡೂಕಾಣದಂತೆ ಜಾತಿ, ಧರ್ಮ, ಮಠ, ಸ್ವಾಮೀಜಿಗಳು ಸೇರಿಹೋಗಿರುವುದು. ಅವರ ಹಿಡನ್ ಅಜೆಂಡಾ ಮುನ್ನ್ನೆಲೆಗೆ ಬರುತ್ತಿರುವುದು. ಅದು ಬಹುಸಂಖ್ಯಾತ ಧರ್ಮದ ಪರವಾಗಿರುವುದರಿಂದ ಅದರ ಅಪಾಯ ಜನಕ್ಕೆ ಅರ್ಥವಾಗದಿರುವುದು. ಹಾಗೆಯೇ ಮಾಧ್ಯಮಗಳ ಉನ್ನತ ಸ್ಥಾನದಲ್ಲಿ ಆ ಜಾತಿ, ಧರ್ಮಕ್ಕೆ ಸೇರಿದ ಸಂಪಾದಕರೇ ಕೂತಿರುವುದು, ಪತ್ರಕರ್ತರೂ ಅದೇ ಬುದ್ಧಿ-ಭಾವ-ಬರಹಗಳಲ್ಲಿ ತೊಡಗಿಸಿಕೊಂಡಿರುವುದು. ಉದಾಹರಣೆಗೆ, ಕನ್ನಡದ ಒಂದು ಪತ್ರಿಕೆ ಬಹಿರಂಗವಾಗಿಯೇ ಲಿಂಗಾಯತರ ಪತ್ರಿಕೆ ಎಂದು ಹೇಳಿಕೊಳ್ಳುವುದು, ಹಿಂದೂಗಳ ಪರ ಎಂದು ಘೋಷಿಸಿಕೊಳ್ಳುವುದು, ಅಂತಹ ಸುದ್ದಿಗಳಿಗೇ ಹೆಚ್ಚು ಒತ್ತು ಕೊಡುವುದು ಏನನ್ನು ಸೂಚಿಸುತ್ತದೆ? ಇಲ್ಲಿ ನಾವು ಮಾಧ್ಯಮಗಳ ಪಾವಿತ್ರತೆಯ ಬಗ್ಗೆ, ಸೇವೆ-ಸಿದ್ಧಾಂತದ ಬಗ್ಗೆ ಮಾತನಾಡುವುದು ಭ್ರಮೆಯಂತೆ ಕಾಣುವುದು ಸಹಜವೇ.

 ಹಿಂದೆ ಪ್ರಭುತ್ವದ ವಿರುದ್ಧ ಕಟುವಾಗಿ ಬರೆದರೆ ಪೀತ ಪತ್ರಿಕೋದ್ಯಮ ಎನ್ನುತ್ತಿದ್ದರು. ಈಗ ಅದನ್ನೂ ಮೀರಿದ ಜೀತ ಪತ್ರಿಕೋದ್ಯಮ ಜಾರಿಯಲ್ಲಿದೆಯಲ್ಲ?

ಹೌದು, ಪತ್ರಿಕೋದ್ಯಮ ಇಂದು ಸರಕಾರದ ಲೌಡ್‌ಸ್ಪೀಕರ್ ಥರ ಕೆಲಸ ಮಾಡ್ತಿದೆ. ಅದು ಅನಿವಾರ್ಯವೂ ಆಗಿರಬಹುದು. ಸದ್ಯದ ಸ್ಥಿತಿಯಲ್ಲಿ ಟೆಲಿಗ್ರಾಫ್ ಒಂದೇ ಬಿಜೆಪಿ, ಆರೆಸ್ಸೆಸ್ ವಿರುದ್ಧವಾಗಿ, ಆಳುವ ಸರಕಾರದ ತಪ್ಪುಗಳನ್ನು ಎತ್ತಿ ತೋರಿಸುವ, ಕಟುವಾಗಿ ಟೀಕಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು. ಆದರೆ ಅವರದೇ ವೆಸ್ಟ್ ಬೆಂಗಾಲ್‌ನ ಬೆಂಗಾಲಿ ಎಡಿಷನ್, ಅಲ್ಲಿ ಸರಕಾರದ ಪರವಿದೆ.ಮತ್ತೊಂದು ಉದಾಹರಣೆ ಎಂದರೆ, ಎನ್‌ಡಿಟಿವಿಯ ಪ್ರಣಯ್ ರಾಯ್. ಬರೀ ನ್ಯೂಸ್ ಓರಿಯಂಟೆಡ್ ಆಗಿದ್ದ ಎನ್‌ಡಿಟಿವಿ ಕಾರ್ಪೊರೇಟ್ ಕಂಪೆನಿ ಥರ ವಿಸ್ತರಿಸಲು ಹೋಗಿ, ಹತ್ತಾರು ಚಾನೆಲ್‌ಗಳನ್ನು ಹುಟ್ಟುಹಾಕಿದರು. ಸ್ವಲ್ಪ ಬಿಜೆಪಿ, ಆರೆಸ್ಸೆಸ್ ವಿರುದ್ಧವಾಗಿಯೂ ಧ್ವನಿ ಎತ್ತರಿಸಿ ಸುದ್ದಿ ಮಾಡುತ್ತಿದ್ದರು.ಮಾಧ್ಯಮಗಳು ಕಾರ್ಪೊರೇಟ್, ಬ್ಯುಸಿನೆಸ್, ಪ್ರಾಫಿಟ್ ಎಂದು ಹೊರಳುತ್ತಿರುವಾಗಲೇ, ಕೇಂದ್ರ ಸರಕಾರ ಅವರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿತು. ಬಂಧನ, ಕೋರ್ಟು, ಜೈಲುಗಳ ಭೀತಿ ಹುಟ್ಟಿಸಿತು. ಬಾಯಿ ಮುಚ್ಚಿಸಿತು.

ಇದು ಒಂದು ರೀತಿ. ಇನ್ನು ನಮ್ಮ ಕನ್ನಡದ ಮಟ್ಟಿಗೆ ಹೇಳುವುದಾದರೆ, ಪತ್ರಿಕಾ ಸಂಸ್ಥೆಗಳೇ ಮುಂದಾಗಿ ಆಳುವ ಸರಕಾರದೊಂದಿಗೆ ಸ್ನೇಹದಿಂದಿರಲು ಕಾತರಿಸುತ್ತವೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಹಾತೊರೆಯುತ್ತವೆ. ಭೂಮಿ, ತೆರಿಗೆ ವಿನಾಯಿತಿ, ನ್ಯೂಸ್ ಪ್ರಿಂಟ್ ಸಬ್ಸಿಡಿ, ಜಾಹೀರಾತುಗಳ ಋಣಕ್ಕೆ ಬಿದ್ದು ಸುದ್ದಿಯನ್ನು ಸಾಯಿಸುತ್ತವೆ ಅಥವಾ ಎಷ್ಟು ಬೇಕೋ ಅಷ್ಟನ್ನು ಪ್ರಕಟಿಸುತ್ತವೆ. ಅವು ಆಳುವ ಸರಕಾರದ ಪರವಾಗಿ, ಜನರ ಆಶಯಕ್ಕೆ ವಿರುದ್ಧವಾಗಿ ಕಾಣುವುದು ಸಹಜ. ಇದು ಜೀತವೋ, ಅಲ್ಲವೋ ನಿರ್ಧಾರ ನಿಮಗೆ ಬಿಟ್ಟಿದ್ದು.ಆದರೆ ಅವರಾಗಿಯೇ ಆಯ್ಕೆ ಮಾಡಿಕೊಂಡ ಅನಿವಾರ್ಯ ಸ್ಥಿತಿ. ಇಲ್ಲಿ ನೀವು ಜನಪರ, ಸಾಮಾಜಿಕ ಹೊಣೆಗಾರಿಕೆ ಕಾಣಲು ಸಾಧ್ಯವೇ?

 ಒಂದು ಕಡೆ ಪ್ರಭುತ್ವವನ್ನು ಓಲೈಸುವ,ಮತ್ತೊಂದು ಕಡೆ ಸುಳ್ಳು ಸುದ್ದಿಗಳನ್ನೇ ಬಿತ್ತುವ ಕಾಲಘಟ್ಟದಲ್ಲಿ ನಾವಿದ್ದೇವೆ, ಹೇಗೆನಿಸುತ್ತಿದೆ?

ಪ್ರಭುತ್ವದ ಓಲೈಕೆ ಬಗ್ಗೆ ಮಾತನಾಡಿದ್ದೇನೆ. ಇನ್ನು ಸುಳ್ಳು ಸುದ್ದಿಗಳು. ಅವು ಹುಟ್ಟಲು ಕಾರಣಕರ್ತರು ಯಾರು? ಪತ್ರಿಕೋದ್ಯಮವೇ, ಪತ್ರಕರ್ತರೇ. ನಾವು ನೀವು ಕಂಡ ಪತ್ರಿಕೋದ್ಯಮದಲ್ಲಿ ಒಂದು ಸುದ್ದಿ ಬಂದರೆ, ಅದಕ್ಕೆ ಕಲ್ಚರಲ್ ವೆರಿಫಿಕೇಷನ್ ಅಂತ ಇತ್ತು. ಅದನ್ನು ನಾಲ್ಕಾರು ಜನ ನೋಡಿ, ಪರಿಶೀಲಿಸಿ, ತಿದ್ದಿ, ಸದೃಢಗೊಳಿಸಿ ಪ್ರಿಂಟ್‌ಗೆ ಕಳಿಸುವ ಒಂದು ಕ್ರಮವಿತ್ತು.ಅದು ಸಾಮೂಹಿಕ ಜವಾಬ್ದಾರಿಯುಳ್ಳ ಗುಣಮಟ್ಟದ ಪತ್ರಿಕೋದ್ಯಮ. ಈಗ ಪತ್ರಿಕಾ ಸಂಸ್ಥೆಗಳಲ್ಲಿ ಅದಿಲ್ಲ. ಕಣ್ಮರೆಯಾಗಿದೆ. ಬದಲಿಗೆ ರಾಜಕೀಯ ಪಕ್ಷಗಳು ಅವುಗಳ ಮಾಹಿತಿ ಶಾಖೆ(ಐಟಿ)ಗಳಿಂದ ಬರುವ ರೆಡಿಮೇಡ್ ಸುದ್ದಿಗಳನ್ನು ಅವಲಂಬಿಸುವಂತಾಗಿದೆ. ಜೊತೆಗೆ ಈಗ ಹುಟ್ಟಿಕೊಂಡಿರುವ ಪರ್ಯಾಯ ಪತ್ರಿಕೋದ್ಯಮ-ಸೋಶಿಯಲ್ ಮೀಡಿಯಾದಲ್ಲಿ ಬಂದದ್ದನ್ನು, ಅದು ವೈರಲ್ ಆದದ್ದನ್ನು ನಂಬುವಂತಾಗಿದೆ. ಅವು ಸುಳ್ಳೋ, ಸತ್ಯವೋ ಅಂತ ಕೂಡ ಯೋಚಿಸದೆ-ನಿಕಷಕ್ಕೆ ಒಡ್ಡದೆ ಪ್ರಕಟಿಸುವ ವ್ಯವಧಾನವಿಲ್ಲದ, ವೇಗೋತ್ಕರ್ಷದ ಕಾಲಘಟ್ಟದಲ್ಲಿ ನಾವಿದ್ದೇವೆ.

ಈಗ ಸುಳ್ಳು ಸುದ್ದಿಯ ಹಿಂದೆ ಬಿದ್ದು, ಅದು ಸುಳ್ಳೋ, ಸತ್ಯವೋ ಎಂದು ಹೇಳಲಿಕ್ಕಾಗಿಯೇ ಮತ್ತೊಂದು ಮಾದರಿಯ ಪತ್ರಿಕೋದ್ಯಮ ಹುಟ್ಟಿಕೊಂಡಿದೆ. ಆ ನಿಟ್ಟಿನಲ್ಲಿ ಆಲ್ಟ್ ನ್ಯೂಸ್ ವೆಬ್‌ಸೈಟ್ ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ, ಹೆಸರು ಮಾಡುತ್ತಿದೆ. ನಮ್ಮ ಪತ್ರಿಕೋದ್ಯಮ ಸರಿ ಇದ್ದರೆ, ಸಾಮಾಜಿಕ ಹೊಣೆಗಾರಿಕೆ ನಮ್ಮಲ್ಲಿದ್ದರೆ, ನಾವು ಜನಪರವಾಗಿದ್ದರೆ, ಈ ಸೋಶಿಯಲ್ ಮೀಡಿಯಾ, ಆಲ್ಟ್ ನ್ಯೂಸ್ ಇವುಗಳಿಗೆ ಜಾಗವೇ ಇರುತ್ತಿರಲಿಲ್ಲ. ನಾವೇ ಆ ಸುಳ್ಳು ಸುದ್ದಿಗೆ, ಅದರಿಂದಾಗುವ ಅನಾಹುತಕ್ಕೆ ಕಾರಣಕರ್ತರಾಗಿದ್ದೇವೆ. ಹಾಗಾಗಿ ನಾವು-ಅಂದರೆ ಪತ್ರಿಕೋದ್ಯಮ ಬದಲಾಗಬೇಕಾದ ಅನಿವಾರ್ಯತೆ ಇದೆ.

ಬದಲಾಗುವುದು ಎಂದರೆ ಏನು? ನಾನೊಬ್ಬನೇ ಬದಲಾಗುವುದಲ್ಲ, ಸಾಂಸ್ಥಿಕವಾಗಿ ಬದಲಾಗಬೇಕು. ಜನರನ್ನು ಜಾಗೃತರನ್ನಾಗಿ ಮಾಡಬೇಕು.ಜನರಲ್ಲಿ ರಾಜಕೀಯ ಸಂಸ್ಕೃತಿಯನ್ನು ಬೆಳೆಸಬೇಕು.ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸುವ ಮಟ್ಟಕ್ಕೆ ಜನರನ್ನು ಸಜ್ಜುಗೊಳಿಸಬೇಕು. ನೀವು ಎತ್ತುವ ಪ್ರಶ್ನೆಗಳು ಎಲ್ಲರ ಪ್ರಶ್ನೆಗಳಾಗಿರಬೇಕು. ನೀವು ತೆಗೆದುಕೊಳ್ಳುವ ನಿಲುವು ಎಲ್ಲರ ನಿಲುವಾಗಬೇಕು. ಎಲ್ಲರನ್ನು ಒಳಗೊಳ್ಳಬೇಕು. ನಾನೇಕೆ ಲಂಕೇಶರನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತೇನೆಂದರೆ, ಲಂಕೇಶ್ ಆ ಕೆಲಸ ಮಾಡಿದ್ದರು. ಆಗ, ಅವರು ಒಬ್ಬರೆ ಮಾಡಿದ್ದರು. ಈಗ, ಈ ದುರಿತ ಕಾಲದಲ್ಲಿ, ನಾವೆಲ್ಲರೂ ಒಟ್ಟಾಗಿ ಮಾಡಬೇಕಿದೆ.

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ