ಶೋಚನೀಯ ಸರಕಾರಿ ಶಾಲೆಗಳು

Update: 2020-03-21 16:50 GMT

ದೇಶದ ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಶೋಚನೀಯ ಸ್ಥಿತಿಯನ್ನು ಈ ಸಮಿತಿ ಬೆರಳು ಮಾಡಿ ತೋರಿಸಿದೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಂಡಿಸಲಾದ ಸಮಿತಿಯ ವರದಿ ಪ್ರಕಾರ, ಭಾರತದ ಸರಕಾರಿ ಶಾಲೆಗಳ ಪೈಕಿ ಶೇ. ಐವತ್ತಾರರಷ್ಟು ಶಾಲೆಗಳಲ್ಲಿ ವಿದ್ಯುಚ್ಛಕ್ತಿ ಸೌಕರ್ಯವಿಲ್ಲ. ಮಣಿಪುರ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸರಕಾರಿ ಶಾಲೆಗಳ ಸ್ಥಿತಿ ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟದಲ್ಲಿದೆ. ಈ ರಾಜ್ಯಗಳಲ್ಲಿ ಶೇ.ಇಪ್ಪತ್ತರಷ್ಟು ಶಾಲೆಗಳಲ್ಲಿ ಮಾತ್ರ ವಿದ್ಯುದ್ದೀಪಗಳಿವೆ. ಶೇ.57ಕ್ಕೂ ಕಡಿಮೆ ಶಾಲೆಗಳು ಆಟದ ಮೈದಾನಗಳನ್ನು ಹೊಂದಿವೆ. ಒಡಿಶಾ ಮತ್ತು ಜಮ್ಮುಕಾಶ್ಮೀರಗಳಲ್ಲಿ ಸರಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ಶೋಚನಿಯ. ಈ ರಾಜ್ಯಗಳಲ್ಲಿ ಶೇ. 30ರಷ್ಟು ಶಾಲೆಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ. ದೇಶದ ಸರಕಾರಿ ಶಾಲೆಗಳ ಪೈಕಿ ಶೇ.40ರಷ್ಟು ಶಾಲೆಗಳ ಕಟ್ಟಡಗಳಿಗೆ ಪೌಳಿಗೋಡೆಗಳೇ ಇಲ್ಲ ಎನ್ನುತ್ತದೆ ಈ ವರದಿ.


ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ಮೂರು ವರ್ಷಗಳಾದರೂ ಶಿಕ್ಷಣ ಕ್ಷೇತ್ರ ಇನ್ನೂ ಅಲಕ್ಷಿತ ಕ್ಷೇತ್ರವೇ. ಧೋರಣೆ, ಅನುಷ್ಠಾನಗಳಲ್ಲಿ ಒಂದು ನಿರ್ದಿಷ್ಟ ರೂಪವನ್ನು ತಾಳದ ವಿಷಯವೆಂದರೆ ಶಿಕ್ಷಣ. ಪ್ರತಿಯೊಂದು ಹೊಸ ಸರಕಾರ ಬಂದಾಗಲೂ ಶಿಕ್ಷಣ ಕ್ಷೇತ್ರದ ಸುಧಾರಣೆಯ ಮಾತುಗಳು ಕೇಳಿಬರುತ್ತವೆ. ಆದರೆ ಅದು ಪತ್ರಿಕೆಗಳ ವರದಿಯಲ್ಲೇ ಉಳಿಯುತ್ತವೆ. ಮೋದಿಯವರ ಸರಕಾರವೂ ಇಂತಹದ್ದೊಂದು ಪ್ರಯತ್ನಕ್ಕೆ ಕೈಹಾಕಿತು. ಶಿಕ್ಷಣ ಕುರಿತಂತೆ ಅವರ ಸರಕಾರದ ಕರಡು ನೀತಿ ಪ್ರಕಟವಾಯಿತು. ಈ ಕರಡು ನೀತಿ ಕುರಿತು ಎರಡು ಲಕ್ಷ ಮಂದಿ ಸಲಹೆಸೂಚನೆಗಳನ್ನು ನೀಡಿದ್ದಾರಂತೆ. ಅದು ಅಲ್ಲೇ ನಿಂತಂತಿದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿರುವ, ಚಾರಿತ್ರ್ಯವನ್ನು ರೂಪಿಸುವಲ್ಲಿ ಪಾಲುಗೊಳ್ಳಬೇಕಾಗಿರುವ, ಸೃಜನಶೀಲ ಪರಿಸರವನ್ನು ಸೃಷ್ಟಿಸುವುದರಲ್ಲಿ ಮುಖ್ಯ ಪಾತ್ರ ನಿರ್ವಹಿಸಬೇಕಾಗಿರುವ ಶಿಕ್ಷಣ ಕೊನೆಯ ಆದ್ಯತೆಯನ್ನು ಪಡೆದುಕೊಂಡಿರುವುದು ಈ ದೇಶದ ವಿಚಿತ್ರ. ಶಿಕ್ಷಣ ಇಲಾಖೆ ಎಂದರೆ ಸಂಬಳಕೊಡುವುದು, ವರ್ಗಮಾಡುವುದು ಎಂದಿಷ್ಟೇ ಅರ್ಥವನ್ನು ಪಡೆದುಕೊಂಡಿದೆ. ಈ ಮಾತುಗಳಿಗೆ ನಿದರ್ಶನವಾಗಿ ನಿಲ್ಲುತ್ತದೆ ಇತ್ತೀಚೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿಯೊಂದು ನೀಡಿರುವ ವರದಿ.

ದೇಶದ ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಶೋಚನೀಯ ಸ್ಥಿತಿಯನ್ನು ಈ ಸಮಿತಿ ಬೆರಳು ಮಾಡಿ ತೋರಿಸಿದೆ. ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಂಡಿಸಲಾದ ಸಮಿತಿಯ ವರದಿ ಪ್ರಕಾರ, ಭಾರತದ ಸರಕಾರಿ ಶಾಲೆಗಳ ಪೈಕಿ ಶೇ. ಐವತ್ತಾರರಷ್ಟು ಶಾಲೆಗಳಲ್ಲಿ ವಿದ್ಯುಚ್ಛಕ್ತಿ ಸೌಕರ್ಯವಿಲ್ಲ. ಮಣಿಪುರ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸರಕಾರಿ ಶಾಲೆಗಳ ಸ್ಥಿತಿ ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟದಲ್ಲಿದೆ. ಈ ರಾಜ್ಯಗಳಲ್ಲಿ ಶೇ.ಇಪ್ಪತ್ತರಷ್ಟು ಶಾಲೆಗಳಲ್ಲಿ ಮಾತ್ರ ವಿದ್ಯುದ್ದೀಪಗಳಿವೆ. ಶೇ.57ಕ್ಕೂ ಕಡಿಮೆ ಶಾಲೆಗಳು ಆಟದ ಮೈದಾನಗಳನ್ನು ಹೊಂದಿವೆ. ಒಡಿಶಾ ಮತ್ತು ಜಮ್ಮುಕಾಶ್ಮೀರಗಳಲ್ಲಿ ಸರಕಾರಿ ಶಾಲೆಗಳ ಪರಿಸ್ಥಿತಿ ಇನ್ನೂ ಶೋಚನಿಯ. ಈ ರಾಜ್ಯಗಳಲ್ಲಿ ಶೇ. 30ರಷ್ಟು ಶಾಲೆಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ. ದೇಶದ ಸರಕಾರಿ ಶಾಲೆಗಳ ಪೈಕಿ ಶೇ.40ರಷ್ಟು ಶಾಲೆಗಳ ಕಟ್ಟಡಗಳಿಗೆ ಪೌಳಿಗೋಡೆಗಳೇ ಇಲ್ಲ ಎನ್ನುತ್ತದೆ ಈ ವರದಿ.

ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯ ಈ ದುರವಸ್ಥೆ ಹಲವಾರು ಕಾರಣಗಳಿಂದಾಗಿ ಚಿಂತಾಜನಕವಾದುದು.
ಮೂಲಭೂತ ಸೌಲಭ್ಯಗಳ ಕೊರತೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಅವರ ಕಲಿಕಾ ಸಾಮರ್ಥ್ಯವನ್ನೂ ಕುಂಠಿತಗೊಳಿಸುತ್ತದೆ. ಸಾಮಾನ್ಯವಾಗಿ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳು ಹಲವಾರು ಸೌಲಭ್ಯಗಳಿಂದ ವಂಚಿತವಾದ ಸಮುದಾಯಗಳ ಬಡಮಕ್ಕಳು. ಅಪೌಷ್ಟಿಕತೆ ಮೊದಲಾದ ಕಾರಣಗಳಿಂದಾಗಿ ಈ ಮಕ್ಕಳ ಆರೋಗ್ಯ, ದೇಹಸ್ಥಿತಿ, ಬುದ್ಧಿ ಸಾಮರ್ಥ್ಯಗಳು ಕ್ಷೀಣವಾಗಿರುತ್ತದೆ. ದೀಪಗಳಿಲ್ಲದ ಕತ್ತಲ ಕೋಣೆಗಳಲ್ಲಿ ಕಲಿಯಬೇಕಾದ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿ ದೃಷ್ಟಿದೋಷ ಉಂಟಾದರೆ ಅಚ್ಚರಿಪಡಬೇಕಾಗಿಲ್ಲ. ವಿದ್ಯುತ್ ಸೌಕರ್ಯದ ಕೊರತೆಯಿಂದಾಗಿ ಈ ಮಕ್ಕಳು ಕಂಪ್ಯೂಟರ್ ಮೊದಲಾದ ಆಧುನಿಕ ಕಲಿಕಾ ಸಾಧನ ಮತ್ತು ಪರಿಕರಗಳಿಂದ ವಂಚಿತರು. ಈ ಸರಕಾರಿ ಶಾಲೆಗಳ ಮಕ್ಕಳು ಇತರ ಮಕ್ಕಳಿಗಿಂತ ಹಿಂದುಳಿಯುವುದು ಸಹಜ. ಇದರ ಪರಿಣಾಮವಾಗಿ ಸಮುದಾಯಗಳ ನಡುವೆ ಅಂತರ ಹೆಚ್ಚುತ್ತದೆ.

ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು, ಬುದ್ಧಿಶಕ್ತಿಗಳಿರುತ್ತವೆ. ಶಾಲೆಗಳಲ್ಲಿ ಮಕ್ಕಳು ಪಾಠಗಳನ್ನು ಕಲಿತು ಬುದ್ಧಿಶಕ್ತಿ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ದೇಹದಾರ್ಢ್ಯತೆಯನ್ನು ಬೆಳೆಸಿಕೊಳ್ಳಬೇಕಾದ್ದು ಅತ್ಯಗತ್ಯ. ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಓದಿನ ಜೊತೆಗೆ ಸಾಮಾನ್ಯ ಜ್ಞಾನ, ಕರಕೌಶಲಗಳನ್ನೂ ಕಲಿಸಬೇಕಾದ್ದು ಇಂದಿನ ಅಗತ್ಯವಾಗಿದೆ. ದೇಹದಾರ್ಢ್ಯತೆಗೆ ವ್ಯಾಯಾಮ, ಯೋಗಗಳನ್ನೂ ಕಲಿಸಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಇವೆಲ್ಲವೂ ಅತ್ಯಗತ್ಯ. ಆದರೆ ಇವುಗಳನ್ನು ಕಲಿಸಲು ಅಗತ್ಯವಾದ ಮೂಲ ಸೌಕರ್ಯಗಳು ಸರಕಾರಿ ಶಾಲೆಗಳಲ್ಲಿ ಇಲ್ಲ ಎಂದಲ್ಲಿ ಸಮಾಜದ ಕೆಲವೊಂದು ವರ್ಗದ ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳು ಸದಾಕಾಲ ಹಿಂದುಳಿದವರಾಗಿಯೇ ಇರುತ್ತಾರೆ.ಇದರಿಂದಾಗಿ ಸಮಾಜದಲ್ಲಿ ವರ್ಗಭೇದ ಮತ್ತು ಅಂತರಗಳು, ಅಸಮಾನತೆಗಳು ಹೆಚ್ಚುತ್ತಲೇ ಹೋಗುತ್ತವೆ.

ಸರಕಾರಿ ಶಾಲೆಗಳಲ್ಲಿನ ಈ ದುರವಸ್ಥೆಗೆ ಮುಖ್ಯಕಾರಣ ಕೇಂದ್ರ ಹಾಗೂ ರಾಜ್ಯಗಳ ಆಯವ್ಯಯ ಮುಂಗಡಪತ್ರಗಳಲ್ಲಿ ಅವುಗಳ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯ. ಬಜೆಟ್‌ನಲ್ಲಿ ನಿಗದಿಮಾಡುವ ಅತ್ಯಲ್ಪಮೊತ್ತ ಸಂಬಳ ಸಾರಿಗೆಗಳಿಗೇ ಸರಿಹೋಗುತ್ತದೆ. ಇನ್ನೂ ಶಾಲಾ ಅಭಿವೃದ್ಧ್ದಿಗೆ ಹಣ ಎಲ್ಲಿಂದ ಬರಬೇಕು? ಸಂಸತ್ ಸಮಿತಿ ಈ ಅಂಶವನ್ನು ಎತ್ತಿ ಹೇಳಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಸರಕಾರ ಹೇಳುತ್ತದೆಯಾದರೂ ವಾಸ್ತವದಲ್ಲಿ ಪರಿಸ್ಥಿತಿ ತಿರುವುಮುರುವಾಗಿಯೇ ಇದೆ. ದೇಶದ ನಿವ್ವಳ ಉತ್ಪಾದನೆ(ಜಿ.ಡಿ.ಪಿ)ಯಲ್ಲಿ ಕೇಂದ್ರ ಸರಕಾರ ಶಿಕ್ಷಣಕ್ಕಾಗಿ ವ್ಯಯಮಾಡುತ್ತಿರುವುದು ಶೇ.ಮೂರರಷ್ಟು ಮಾತ್ರ. ಬಜೆಟ್‌ನಲ್ಲಿ ಶಿಕ್ಷಣದ ಬಾಬಿಗಾಗಿ ನಿಗದಿಪಡಿಸುವ ಅತಿಕಡಿಮೆ ಮೊತ್ತದಿಂದಾಗಿ ಶಾಲೆಗಳ ದುರಸ್ತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸಕಾರ್ಯಗಳು ನಿರಂತರವಾಗಿ ಹಿಂದೆ ಬಿದ್ದಿವೆ. ಈ ನಿಟ್ಟಿನಲ್ಲಿ ಸರಕಾರ ತುರ್ತಾಗಿ ತೀವ್ರ ಗಮನ ಹರಿಸಬೇಕಿದೆ ಎಂದಿರುವ ಸಂಸತ್ ಸ್ಥಾಯಿ ಸಮಿತಿ, ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮಾನವಸಂಪನ್ಮೂಲ ಸಚಿವಾಲಯದ ಜೊತೆಗೆ ಇತರ ಸಚಿವಾಲಯಗಳೂ ಕೈಜೋಡಿಸಬೇಕೆಂದು ಶಿಫಾರಸು ಮಾಡಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಂತಹ ಕಾರ್ಯಕ್ರಮಗಳನ್ನು ಸರಕಾರಿ ಶಾಲಾ ಕಟ್ಟಡಗಳ ದುರಸ್ತಿ, ಪೌಳಿಗೋಡೆ ನಿರ್ಮಾಣದಂತಹ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು. ನವ ಹಾಗೂ ಪುನರ್ ನವೀಕೃತ ಸಚಿವಾಲಯದ ಸೌರ ವಿದ್ಯುತ್ ಯೋಜನೆಗಳಡಿ ಸರಕಾರಿ ಶಾಲೆಗಳಿಗೆ ವಿದ್ಯುತ್ ಸೌಕರ್ಯ ಒದಗಿಸಬಹುದು ಎನ್ನುವ ಸಮಿತಿಯ ಶಿಫಾರಸುಗಳು ಕಾರ್ಯಸಾಧುವಾದುವು.

ಕರ್ನಾಟಕದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ. ವಿಶೇಷವಾಗಿ ಗ್ರಾಮೀಣ ಕರ್ನಾಟಕದಲ್ಲಿ ಬಹುತೇಕ ಶಾಲಾ ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿವೆ. ಇನ್ನು ಶೌಚಾಲಯ, ವಾಚನಾಲಯ, ಆಟದ ಬಯಲುಗಳಂತಹ ಮೂಲಭೂತ ಸೌಕರ್ಯಗಳ ಕೊರತೆ ಕಣ್ಣಿಗೆ ಕಾಣುವಷ್ಟು ಢಾಳಾಗಿ ಗೋಚರಿಸುತ್ತದೆ. ಆದರೆ ಈ ವರ್ಷ ಕರ್ನಾಟಕ ಸರಕಾರ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ(2020-21) ನಿಗದಿಪಡಿಸಿರುವುದು ಕೇವಲ ನೂರು ಕೋಟಿ ರೂಪಾಯಿಗಳು. ಅದೂ ಪೂರ್ವ ಪ್ರಾಥಮಿಕ ಹಂತದ 276 ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು. ಉಳಿದ ಶಾಲೆಗಳ ಗತಿ ಏನೋ ತಿಳಿಯದು. ಈ ರೀತಿಯ ಕಣ್ಣೊರೆಸುವ ಕ್ರಮಗಳಿಂದ ಗ್ರಾಮೀಣ ಕರ್ನಾಟಕದ ಶಾಲೆಗಳ ಸ್ಥಿತಿ ಸುಧಾರಿಸದು. ಗ್ರಾಮೀಣ ಪ್ರದೇಶದಲ್ಲಿ ಜೀರ್ಣಾವಸ್ಥೆ ತಲುಪಿರುವ ಶಾಲೆಗಳ ಕಟ್ಟಡಗಳ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸರಕಾರ ಪ್ರತ್ಯೇಕವಾಗಿ ಯೋಜನೆಯೊಂದನ್ನು ರೂಪಿಸಿ ಹಣಕಾಸು ಒದಗಿಸುವುದು ಜರೂರಾಗಿ ಆಗಬೇಕಾಗಿದೆ. ಒಂದು ಸಣ್ಣ ಆಶಾಕಿರಣವೆಂದರೆ ಕೆಲವರು ವ್ಯಕ್ತಿಗಳು ಹಾಗೂ ಕೆಲವು ಸಂಸ್ಥೆಗಳು ಸರಕಾರಿ ಶಾಲೆಗಳ ಪುನುರುಜ್ಜೀವನದಲ್ಲಿ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಯಲ್ಲಿ ಆಸಕ್ತಿ ತೋರುತ್ತಿರುವುದು. ಕೆಲವರು ತಾವು ಓದಿದ ಶಾಲೆಯನ್ನು ಮರೆಯದೆ ಪ್ರೀತಿಅಭಿಮಾನಗಳಿಂದ ತಾವು ಓದಿದ ಶಾಲೆಯ ಜೀರ್ಣೋದ್ಧಾರಕ್ಕೆ ನೆರವಾಗಿರುವ ಉದಾಹರಣೆಗಳು ನಮ್ಮ ಕಣ್ಣೆದುರು ಇವೆ. ಅಂತೆಯೇ ಇನ್ಫೋಸಿಸ್ ಪ್ರತಿಷ್ಠಾನ, ಅಝೀಮ್ ಪ್ರೇಮ್ ಜೀ ಪ್ರತಿಷ್ಠಾನ, ಖಾನ್ ಅಕಾಡಮಿಯಂತಹ ಸಂಸ್ಥೆಗಳು ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದ ಶಿಕ್ಷಣ ಕ್ರಮದ ಸುಧಾರಣೆಯಲ್ಲಿ ಆಸಕ್ತಿವಹಿಸಿ ಸಕ್ರಿಯವಾಗಿ ಈ ನಿಟ್ಟಿನಲ್ಲಿ ನೆರವಾಗುತ್ತಿರುವುದು ಒಂದು ಸ್ವಾಗತಾರ್ಹವಾದ ಬೆಳವಣಿಗೆಯಾಗಿದೆ.

ಕರ್ನಾಟಕದ ಸರಕಾರಿ ಶಾಲೆಗಳಲ್ಲಿನ ಬೋಧನೆಯ ರೀತಿನೀತಿ ಮತ್ತು ಪಠ್ಯಕ್ರಮಗಳಲ್ಲಿ ಸುಧಾರಣೆ ಉಂಟುಮಾಡಲು ಈ ಸಂಸ್ಥೆಗಳು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾದುದು. ಮಕ್ಕಳಿಗೆ ಅತ್ಯಾಧುನಿಕ ರೀತಿಯಲ್ಲಿ ಕಲಿಸುವುದಕ್ಕೆ ಅಗತ್ಯವಾದ ತಂತ್ರಜ್ಞಾನವನ್ನೂ ಉಪಕರಣಗಳನ್ನೂ ಈ ಕೆಲವು ಸಂಸ್ಥೆಗಳು ಪೂರೈಸುತ್ತಿರುವುದು ಗ್ರಾಮೀಣ ಮಕ್ಕಳ ಶಿಕ್ಷಣ ಕ್ರಮದಲ್ಲಿ ಒಂದು ಪುರೋಗಾಮಿ ಹೆಜ್ಜೆಯೇ ಸರಿ. ಸರಕಾರಿ ಶಾಲೆಗಳ ಮಕ್ಕಳಿಗೆ ಕಲಿಕೆಯ ಹೊಸ ಅವಕಾಶಗಳನ್ನು ಕಲ್ಪಿಸಲು ಖಾಸಗಿ ಸಂಸ್ಥೆಗಳು ಮುಂದಾಗಿರುವ ಈ ದಿನಗಳಲ್ಲಿ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅವರ ಈ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. ಶಿಕ್ಷಣ ಕುರಿತಂತೆ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಸಡ್ಡೆಯ ಧೋರಣೆ ಇನ್ನಾದರೂ ಬದಲಾಗಬೇಕಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಣುವ ಕೃಪಣ ಮನೋಭಾವ ಹೋಗಬೇಕು. ಶಿಕ್ಷಣ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳು ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ನಿರಾಕರಿಸುವುದರಿಂದ ಆಗುವ ಹಾನಿ ದೊಡ್ಡದು. ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯವಷ್ಟೇ ಅಲ್ಲದೆ ರಾಷ್ಟ್ರದ ಅರ್ಥವ್ಯವಸ್ಥೆಯ ಮೇಲೂ ಈ ಹಾನಿ ಪರಿಣಾಮ ಬೀರಲಿದೆ ಎಂಬ ವಾಸ್ತವಿಕ ಅಂಶವನ್ನು ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಇಂದಿನ ನೇತಾರರು, ಸರಕಾರಗಳು ಜರೂರಾಗಿ ಮನಗಾಣ ಬೇಕಾಗಿದೆ. ಮಕ್ಕಳ ಶಿಕ್ಷಣದಲ್ಲಿ ಹಣ ತೊಡಗಿಸುವುದೆಂದರೆ ಭವ್ಯ ಭಾರತದ ಭವಿಷ್ಯದಲ್ಲಿ ಬಂಡವಾಳ ಹೂಡಿದಂತೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News