ಕೋವಿಡ್-19 ವೆರಾಣುವಿಗೆ ಔಷಧಿ ಲಭ್ಯವಾಗುವ ಸಾಧ್ಯತೆಗಳು ಹತ್ತಿರವಿದೆ

Update: 2020-03-22 18:22 GMT

ಕೋವಿಡ್-19 ವೈರಾಣು ಕೊರೋನ ವೈರಸ್ ಕುಟುಂಬಕ್ಕೆ ಸೇರಿದೆ. ಕೊರೋನ ವೈರಾಣುಗಳ ಹೊರ ಮೈಮೇಲೆ ಚೂಪಾದ ವಿಸ್ತರಣೆಗಳಿರುತ್ತವೆ. (ಇವುಗಳು ಇರುವ ಕಾರಣದಿಂದ ಕೊರೋನ ವೈರಾಣು ಕಿರೀಟದಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಹೆಸರು. ಕೊರೋನ ಎಂದರೆ ಗ್ರೀಕ್ ಭಾಷೆಯಲ್ಲಿ ಕಿರೀಟ ಎಂದರ್ಥ). ಈ ಚೂಪಾದ ವಿಸ್ತರಣೆಗಳ ಮೂಲಕ ಜೀವಕೋಶಗಳಿಗೆ ಮೊದಲು ಅಂಟಿಕೊಳ್ಳುವ ಕೋವಿಡ್-19 ವೈರಾಣು, ಆನಂತರ ತನ್ನ ಕಿಣ್ವದ ಸಹಾಯದಿಂದ ರಕ್ಷಣಾವ್ಯವಸ್ಥೆಯ ಮೇಲೆ ದಾಳಿ ನಡೆಸಿ ಜೀವಕೋಶದ ಒಳಗೆ ಪ್ರವೇಶಿಸುತ್ತದೆ. ಈ ವೈರಾಣುಗಳಿಗಿರುವ ಅಂಟಿಕೊಳ್ಳುವ ಸೌಲಭ್ಯ ಅವುಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ತಂದುಕೊಡುತ್ತವೆ.

ವಿಶ್ವದ ಬಹುತೇಕ ಎಲ್ಲಾ ದೇಶಗಳನ್ನು ಪೀಡಿಸುತ್ತಿರುವ ಕೊರೋನ ಅಥವಾ ಕೋವಿಡ್-19ರ ಸೋಂಕಿಗೆ ಔಷಧಿ ಲಭ್ಯವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಕುರಿತು ಸೈನ್ಸ್ ಜರ್ನಲ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಜರ್ಮನಿಯ ಲ್ಯುಬೆಕ್ ವಿಶ್ವವಿದ್ಯಾನಿಲಯದವರಾದ ರಾಲ್ಫ್ ಹಿಲ್‌ಜೆನ್‌ಫೀಲ್ಡ್ ಅವರು ತಮ್ಮ ತಂಡದೊಂದಿಗೆ ಮಾಡಿದ್ದ ಪ್ರಯೋಗವನ್ನು ಆಧರಿಸಿ ಈ ಲೇಖನವನ್ನು ಪ್ರಕಟಿಸಿದ್ದಾರೆ. ಈ ವಿಜ್ಞಾನಿಗಳು ಎಚ್‌ಐವಿ ವೈರಾಣುವನ್ನು ನಿಭಾಯಿಸಲು ಬಳಸುವ ಔಷಧಿಗಳ ತಂತ್ರವನ್ನು ಅನುಸರಿಸಿ ಈ ಹೊಸ ಔಷಧಿಯನ್ನು ಅನ್ವೇಷಿಸಿದ್ದಾರೆ.

ಔಷಧಿಯ ಹಿಂದಿನ ತಂತ್ರ

ಯಾವುದೇ ವೈರಾಣು ಜೀವಕೋಶವೊಂದನ್ನು ಪ್ರವೇಶಿಸಲು ಆ ಜೀವಕೋಶದ ರಕ್ಷಣಾವಲಯವನ್ನು ಭೇದಿಸಬೇಕಿರುತ್ತದೆ. ಈ ರಕ್ಷಣಾಕವಚವನ್ನು ಭೇದಿಸಲು ವೈರಾಣು ಒಂದು ಕಿಣ್ವವನ್ನು (ಎನ್‌ಜೈಮ್) ಬಿಡುಗಡೆ ಮಾಡುತ್ತದೆ. ಒಮ್ಮೆ ಇದರ ಸಹಾಯದ ಮೂಲಕ ಜೀವಕೋಶದೊಳಗೆ ಪ್ರವೇಶ ಪಡೆದರೆ, ಆ ಜೀವಕೋಶವು ವೈರಾಣುವಿನ ಹೊಸ ತಾಣವಾಯಿತು ಎಂದರ್ಥ. ಸದರಿ ಕೋಶವನ್ನು ತನ್ನಂತೆ ಮಾಡಿಕೊಂಡು, ಮತ್ತೊಂದು ಕೋಶದ ಮೇಲೆ ದಾಳಿ ಮಾಡಲು ವೈರಾಣು ಮುನ್ನಡೆಯುತ್ತದೆ. ಕೋವಿಡ್-19 ವೈರಾಣು ಕೊರೋನ ವೈರಾಣು ಕುಟುಂಬಕ್ಕೆ ಸೇರಿದೆ. ಕೊರೋನ ವೈರಾಣುಗಳ ಹೊರ ಮೈಮೇಲೆ ಚೂಪಾದ ವಿಸ್ತರಣೆಗಳಿರುತ್ತವೆ. (ಇವುಗಳು ಇರುವ ಕಾರಣದಿಂದ ಕೊರೋನ ವೈರಾಣು ಕಿರೀಟದಂತೆ ಕಾಣುತ್ತದೆ. ಅದಕ್ಕಾಗಿಯೇ ಈ ಹೆಸರು. ಕೊರೋನ ಎಂದರೆ ಗ್ರೀಕ್ ಭಾಷೆಯಲ್ಲಿ ಕಿರೀಟ ಎಂದರ್ಥ). ಈ ಚೂಪಾದ ವಿಸ್ತರಣೆಗಳ ಮೂಲಕ ಜೀವಕೋಶಗಳಿಗೆ ಮೊದಲು ಅಂಟಿಕೊಳ್ಳುವ ಕೋವಿಡ್-19 ವೈರಾಣು, ಆನಂತರ ತನ್ನ ಕಿಣ್ವದ ಸಹಾಯದಿಂದ ರಕ್ಷಣಾವ್ಯವಸ್ಥೆಯ ಮೇಲೆ ದಾಳಿ ನಡೆಸಿ ಜೀವಕೋಶದ ಒಳಗೆ ಪ್ರವೇಶಿಸುತ್ತದೆ. ಈ ವೈರಾಣುಗಳಿಗಿರುವ ಅಂಟಿಕೊಳ್ಳುವ ಸೌಲಭ್ಯ ಅವುಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ತಂದುಕೊಡುತ್ತವೆ.

ರಾಲ್ಫ್ ಮತ್ತು ಅವರ ಸಹವಿಜ್ಞಾನಿಗಳ ತಂಡ ಈ ವೈರಾಣು ಬಿಡುಗಡೆ ಮಾಡುವ ಕಿಣ್ವವನ್ನೇ ನಿಷ್ಕ್ರಿಯಗೊಳಿಸುವ ಎರಡು ಬಗೆಯ ರಾಸಾನಿಯಕ ಸೂತ್ರಗಳನ್ನು ಸಂಶೋಧಿಸಿದೆ. ಚೀನಾದ ವಿಜ್ಞಾನಿಗಳು ಕೋವಿಡ್-19ರ ರಚನೆ(ಡಿಎನ್‌ಎ/ಆರ್‌ಎನ್‌ಎ)ಯನ್ನು ಅರ್ಥೈಸುವಲ್ಲಿ ಮಾಡಿದ ಆರಂಭಿಕ ಪ್ರಯತ್ನಗಳು ಮತ್ತು ನಂತರದ ದಿನಗಳಲ್ಲಿ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯ, ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ಕಾಯಿಲೆಗಳ ಅಧ್ಯಯನ ಸಂಸ್ಥೆ (ನಮ್ಮ ದೇಶದ ಪುಣೆಯಲ್ಲಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಈ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿದೆ) ಮುಂತಾದ ಸಂಸ್ಥೆಗಳು ಮತ್ತು ಅವುಗಳ ವಿಜ್ಞಾನಿಗಳ ಅವಿರತ ಪರಿಶ್ರಮದಿಂದ ಈ ಔಷಧಿಯ ಸಂಶೋಧನಾ ಕಾರ್ಯ ವೇಗದ ಪ್ರಗತಿಯನ್ನು ಸಾಧಿಸಲು ಅವಕಾಶವಾಗಿದೆ.

ಔಷಧಿಯ ಕಾರ್ಯವಿಧಾನ

ಈ ಔಷಧಿಯಲ್ಲಿ ಬಳಕೆಯಾಗುವ ರಾಸಾಯನಿಕಗಳು ನೇರವಾಗಿ ಕೋವಿಡ್-19 ಬಿಡುಗಡೆ ಮಾಡುವ ಕಿಣ್ವವನ್ನು ಮಾತ್ರ ನಿಷ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿವೆ. ಉಳಿದ ಜೀವಕೋಶಗಳಿಗೆ ಯಾವುದೇ ರೀತಿಯ ತೊಂದರೆಯನ್ನು ಮಾಡುವುದಿಲ್ಲ. ಅಂದರೆ ಇವು ಕೋವಿಡ್-19ಕ್ಕೆ ಮಾತ್ರವೇ ವಿಷವೇ ಹೊರತು ಉಳಿದ ಜೀವಕೋಶಗಳಿಗೆ ಯಾವುದೇ ಗಂಭೀರ ತೊಂದರೆಯನ್ನು ಕೊಡುವುದಿಲ್ಲ. ಹೀಗೆ, ಕೋವಿಡ್-19ರ ಮೇಲೆ ದಾಳಿ ಮಾಡುವ ರಾಸಾಯನಿಕಗಳ ಅನ್ವೇಷಣೆಯಾದ ಮೇಲೆ ವಿಜ್ಞಾನಿಗಳು ಎರಡನೇ ಹಂತದ ಕಾರ್ಯದಲ್ಲಿ ಮಗ್ನರಾದರು. ಯಾವುದೇ ಔಷಧಿ ಶರೀರವನ್ನು ಪ್ರವೇಶಿಸಿದ ಮೇಲೆ ಎರಡು ಪ್ರಮುಖ ಹಂತಗಳು ವಿಜ್ಞಾನಿಗಳಿಗೆ ಮುಖ್ಯವಾಗುತ್ತವೆ: 1) ಶರೀರದಲ್ಲಿ ಔಷಧಿ ಎಷ್ಟು ಸಮಯ ಉಳಿದಿರುವ ಸಾಮರ್ಥ್ಯವನ್ನು ಹೊಂದಿರುತ್ತದೆ. 2) ಶರೀರದಿಂದ ಅದು ಯಾವಾಗ, ಯಾವ ಅಂಗದ ಸಹಾಯದಿಂದ ಹೇಗೆ ಹೊರಹಾಕಲ್ಪಡುತ್ತದೆ (ಅದರ ಜೀರ್ಣಕ್ರಿಯೆ ಹೇಗಾಗುತ್ತದೆ). ಈ ಜೀರ್ಣಕ್ರಿಯೆ ಬಹಳ ಮುಖ್ಯವಾದುದು. ಯಾವುದೇ ಔಷಧಿ (ಅದು ಶರೀರವನ್ನು ಪ್ರವೇಶಿಸಿದ ಮೇಲೆ ಆಹಾರ ಹೇಗೆ ಜೀರ್ಣವಾಗುತ್ತದೆಯೋ ಹಾಗೆ ಜೀರ್ಣವಾಗಲೇಬೇಕು. ಹೊಟ್ಟೆಯನ್ನು ಪ್ರವೇಶಿಸಿದ ನಂತರ ಜೀರ್ಣಗೊಂಡು ರಕ್ತವನ್ನು ಸೇರಿ, ರೋಗಾಣುಗಳ ಮೇಲೆ ಔಷಧಿ ದಾಳಿ ಮಾಡುತ್ತದೆ. ಇಂಜೆಕ್ಷನ್ ನೀಡಿದಾಗ ನೇರವಾಗಿ ರಕ್ತವನ್ನು ಸೇರುವ ಔಷಧಿ ಇದೇ ಕೆಲಸವನ್ನು ತ್ವರಿತವಾಗಿ ಮಾಡುತ್ತದೆ). ಯಾವುದೇ ಕಾರಣಕ್ಕೂ ಅದು ಹಾಗೆ ಉಳಿಯಲು ಬರುವುದಿಲ್ಲ. ಒಂದು ವೇಳೆ ಜೀರ್ಣವಾಗದೇ ಉಳಿದರೆ ಅದು ಅಪಾಯಕಾರಿ ಅಂಶವಾಗುತ್ತದೆ. (ಈ ಕಾರಣದಿಂದಲೇ ಯಾವುದೇ ಔಷಧಿಯನ್ನು ವೈದ್ಯರು ಹೇಳಿದ ಪ್ರಮಾಣದಲ್ಲೇ ಸ್ವೀಕರಿಸಬೇಕು. ಹೆಚ್ಚಾದರೆ ಜೀರ್ಣಾಂಗಗಳ ಕೆಟ್ಟ ಪರಿಣಾಮವಿರುತ್ತದೆ, ಕಡಿಮೆಯಾದರೆ ಅಗತ್ಯ ಪ್ರಮಾಣದಲ್ಲಿ ಔಷಧಿ ಲಭ್ಯವಾಗದ ಕಾರಣ, ಕಾಯಿಲೆ ವಾಸಿಯಾಗುವುದಿಲ್ಲ. -ಅನುವಾದಕ)

ಅದೇ ವೇಳೆ, ಔಷಧಿಗಳು ಶರೀರದಲ್ಲಿ ಹೆಚ್ಚು ಸಮಯ ಉಳಿದರೆ, ಮತ್ತೆ ಮತ್ತೆ ಔಷಧಿಯನ್ನು ನೀಡುವುದು ತಪ್ಪುತ್ತದೆ. ಹಾಗಾಗಿ, ವಿಜ್ಞಾನಿಗಳು ಸ್ವಲ್ಪ ಹೆಚ್ಚು ಸಮಯವಿರುವ ಆದರೆ ಪೂರ್ಣವಾಗಿ ಜೀರ್ಣಗೊಳ್ಳುವ ರಾಸಾಯನಿಕವನ್ನು ಔಷಧಿಯಾಗಿ ಬಳಸುವ ಕಡೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಕೋವಿಡ್-19ಕ್ಕೆ ಪ್ರತಿಯಾಗಿ ಕಂಡುಹಿಡಿದಿರುವ ರಾಸಾಯನಿಕಗಳು (13a ಮತ್ತು 13b ಎನ್ನುವ ಹೆಸರನ್ನು ನೀಡಲಾಗಿದೆ) ಪ್ರಯೋಗದ ಹಂತದಲ್ಲಿ ಕೆಲವು ಉತ್ತಮ ವರ್ತನೆಗಳನ್ನು ತೋರಿವೆ. ಇವುಗಳ ಕಾರ್ಯಕ್ಷಮತೆಯನ್ನು ಅರಿಯಲು ಇಲಿಯ ಮೇಲೆ ಪ್ರಯೋಗಿಸಿ ನೋಡಲಾಗಿದೆ. 13b ರಾಸಾಯನಿಕವು ಇಲಿಯ ಶರೀರದಲ್ಲಿ ಸುಮಾರು ನಾಲ್ಕು ತಾಸು ಕ್ರಿಯಾಶೀಲವಾಗಿದೆ. ಶರೀರವನ್ನು ಪ್ರವೇಶಿಸಿದ 24 ಗಂಟೆಯೊಳಗೆ ಮೂತ್ರದ ಮೂಲಕ ಬಹುತೇಕ ಈ ರಾಸಾಯನಿಕವು ಜೀರ್ಣಗೊಂಡು ಹೊರಬಂದಿದೆ. 13b ರಾಸಾಯನಿಕವು ಬಹುತೇಕ ಇಷ್ಟೇ ಸಮಯ ಶರೀರದಲ್ಲಿ ಇದ್ದರೂ, ಮತ್ತೊಂದು ವಿಶೇಷವಾದ ವರ್ತನೆಯನ್ನು ತೋರಿದೆ. ಇದು ಇಲಿಯ ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದಲ್ಲಿ ಕ್ರಿಯಾಶೀಲವಾಗಿ ಉಳಿದುಕೊಂಡಿದೆ. ಕೋವಿಡ್-19 ವೈರಾಣುಗಳು ಶ್ವಾಸಕೋಶಕ್ಕೆ ದಾಳಿಯಿಡುವ ಕಾರಣ, ಈ ರಾಸಾಯನಿಕ ಶ್ವಾಸಕೋಶದಲ್ಲಿ ಇರುವುದು ಮುಖ್ಯವಾದ ಅನುಕೂಲವಾಗಿದೆ.

ಇದೆಲ್ಲದರ ಜೊತೆಗೆ, 13b ರಾಸಾಯನಿಕವನ್ನು ನೇರವಾಗಿ ಶ್ವಾಸಕೋಶಕ್ಕೆ ಹೋಗುವಂತೆ (ಇನ್‌ಹೇಲರ್ ಆಗಿ) ಮಾಡುವ ಪ್ರಯೋಗಗಳನ್ನು ಮಾಡಲಾಗಿದೆ. ಹೀಗೆ ನೇರವಾಗಿ ಉಸಿರಾಟದ ಮೂಲಕ ಶ್ವಾಸಕೋಶಕ್ಕೆ 13b ರಾಸಾಯನಿಕವನ್ನು ಔಷಧಿಯ ರೂಪದಲ್ಲಿ ನೀಡಿದಾಗ ಇಲಿಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಮೇಲು ನೋಟಕ್ಕೆ ಇಲಿಯ ಶರೀರದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಆಗಿರುವುದಿಲ್ಲ. ಹಾಗಾಗಿ, ಈ ರಾಸಾಯನಿಕವು ಬಹಳ ಪರಿಣಾಮಕಾರಿಯಾದ ಔಷಧವಾಗುವ ಅವಕಾಶವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ, ಅಗತ್ಯ ಅಧ್ಯಯನಗಳ ಮೂಲಕ ಈ ಔಷಧಿ ಜನರ ಬಳಕೆಗೆ ದೊರೆಯುವ ಅವಕಾಶವಂತೂ ದಟ್ಟವಾಗಿವೆ.

(ಓದುಗರ ಗಮನಕ್ಕೆ: ಔಷಧಿಯೊಂದು ಪ್ರಯೋಗಾಲಯದಿಂದ ಬಳಕೆಗೆ ದೊರೆಯಬೇಕಾದರೆ ಅನೇಕ ವೈಜ್ಞಾನಿಕ ಹಂತಗಳನ್ನು ಯಶಸ್ವಿಯಾಗಿ ಪೂರೈಸಬೇಕಿರುತ್ತದೆ. ಔಷಧಿಯ ದೂರಗಾಮಿ ಪರಿಣಾಮಗಳನ್ನು ಅರಿಯುವ ಕ್ರಿಯೆಗಳು ಸಂಕೀರ್ಣವಾದ ಮತ್ತು ಸಮಯವನ್ನು ಬೇಡುವ ಪ್ರಕ್ರಿಯೆಗಳಾಗಿರುತ್ತವೆ. ಔಷಧಿಯ ನಿರೀಕ್ಷಿತ ಅಡ್ಡ ಪರಿಣಾಮಕ್ಕಿಂತ ಅನುಕೂಲಕರ ಪರಿಣಾಮಗಳೇ ಹೆಚ್ಚು ಎನ್ನುವುದು ಸಂಪೂರ್ಣವಾಗಿ ಸ್ವೀಕೃತವಾದ ಮೇಲೆಯೇ, ಜನರ ಬಳಕೆಗೆ ಲಭ್ಯವಾಗಲು ಸಾಧ್ಯ. ಜೊತೆಗೆ ಕೋವಿಡ್-19 ವೈರಾಣು ತನ್ನ ಸ್ವರೂಪವನ್ನೇ ಬದಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಔಷಧಿ ಸಂಶೋಧಕರಿಗೆ ದೊಡ್ಡ ಸವಾಲಾಗಿದೆ. ಈ ಎಲ್ಲಾ ಕಾರಣಗಳಿಂದ, ಈಗಿನ ಸಂದರ್ಭದಲ್ಲಿ ಕೋವಿಡ್-19ರ ವಿರುದ್ಧ ಯಾವುದೇ ನೇರವಾದ ಔಷಧಿಗಳು ಇರುವುದಿಲ್ಲ. ಕೋವಿಡ್-19ರ ತೀವ್ರತೆಯನ್ನು ತಗ್ಗಿಸಲು ಸದ್ಯದಲ್ಲಿ ಅನುಸರಿಸುತ್ತಿರುವ ಮಾರ್ಗಗಳೇ ನಮಗೆ ಈಗಿರುವ ಪ್ರಮುಖ ದಾರಿಯಾಗಿವೆ. -ಅನುವಾದಕ)

- ಕೃಪೆ: thehindu.com

Writer - ಕನ್ನಡಕ್ಕೆ: ಸದಾನಂದ ಆರ್.

contributor

Editor - ಕನ್ನಡಕ್ಕೆ: ಸದಾನಂದ ಆರ್.

contributor

Similar News

ಜಗದಗಲ
ಜಗ ದಗಲ