ಲಾಕ್ ಡೌನ್ ದಿನಗಳಲ್ಲಿ ವಾಟ್ಸ್ಯಾಪ್ ಸ್ಟೇಟಸ್ ವೀಡಿಯೋ ಅವಧಿ 15 ಸೆಕೆಂಡ್ ಗಳಿಗೆ ಸೀಮಿತ !
ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ತಡೆಗಟ್ಟುವ ಯತ್ನವಾಗಿ ಭಾರತದಾದ್ಯಂತ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ವಾಟ್ಸ್ಯಾಪ್ ಬಳಕೆಯೂ ಹೆಚ್ಚಾಗಿರುವುದರಿಂದ ಹಾಗೂ ಅಂತರ್ಜಾಲ ಬಳಕೆ ಪ್ರಮಾಣವೂ ಅತ್ಯಧಿಕವಾಗಿರುವುದರಿಂದ ಇಂಟರ್ನೆಟ್ ಬ್ಯಾಂಡ್ ವಿಡ್ತ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ಅಪ್‍ಲೋಡ್ ಮಾಡುವ ವೀಡಿಯೋಗಳ ಅವಧಿಯನ್ನು ಈ ಹಿಂದಿನ 30 ಸೆಕೆಂಡ್ ಬದಲು 15 ಸೆಕೆಂಡ್ ಗಳಿಗೆ ಸೀಮಿತಗೊಳಿಸಲಾಗಿದೆ.
ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ಅಪ್‍ಲೋಡ್ ಮಾಡಲಾಗಿರುವ ವೀಡಿಯೋಗಳು ಸರ್ವರ್ ನಲ್ಲಿ 24 ಗಂಟೆಗಳ ಕಾಲ ಅಸ್ತಿತ್ವದಲ್ಲಿರುವುದರಿಂದ ವೀಡಿಯೋಗಳ ಅವಧಿಯನ್ನು ಅರ್ಧದಷ್ಟು ಕಡಿತಗೊಳಿಸಲಾಗಿದೆ.
ಡಬ್ಲ್ಯುಎಬೇಟಾಇನ್ಫೋ ಎಂಬ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಬದಲಾವಣೆಯ ಕುರಿತಂತೆ ಮಾಹಿತಿ ನೀಡಲಾಗಿದೆ. ಈ ಬದಲಾವಣೆ ಒಂದು ತಾತ್ಕಾಲಿಕ ಕ್ರಮ, ಲಾಕ್ ಡೌನ್ ಅವಧಿ ಪೂರ್ಣಗೊಂಡ ನಂತರ ಹಿಂದಿನ ಮಾದರಿಯನ್ನೇ ಅನುಸರಿಸಲಾಗುವುದು ಎಂದು ತನ್ನ ಒಂದು ಪೋಸ್ಟ್ ನಲ್ಲಿ ಡಬ್ಲ್ಯುಎಬೇಟಾ ಇನ್ಫೋ ತಿಳಿಸಿದೆ.