3 ವೈದ್ಯರು, 26 ದಾದಿಯರಿಗೆ ಕೊರೋನ ಸೋಂಕು: ಮುಂಬೈಯ ಖಾಸಗಿ ಆಸ್ಪತ್ರೆ ಬಂದ್
Update: 2020-04-06 10:54 GMT
ಮುಂಬೈ: ಮುಂಬೈಯ ಖ್ಯಾತ ಖಾಸಗಿ ಆಸ್ಪತ್ರೆಯ ಮೂವರು ವೈದ್ಯರು ಹಾಗೂ 26 ದಾದಿಯರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟ ನಂತರ ಆಸ್ಪತ್ರೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ಕೊರೋನ ಸೋಂಕು ಇಷ್ಟು ವೇಗವಾಗಿ ಹೇಗೆ ಹರಡಿದೆ ಎಂದು ತಿಳಿಯುವ ಸಲುವಾಗಿ ತನಿಖೆಗೆ ಆದೇಶಿಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲಾ ರೋಗಿಗಳ ಕೊರೋನ ಪರೀಕ್ಷೆ ಎರಡು ಬಾರಿ ನೆಗೆಟಿವ್ ಬರುವ ತನಕ ಆಸ್ಪತ್ರೆಯೊಳಗೆ ಹಾಗೂ ಅಲ್ಲಿಂದ ಹೊರಗೆ ಹೋಗಲು ಯಾರಿಗೂ ಅನುಮತಿಯಿಲ್ಲ. ಆಸ್ಪತ್ರೆಯಲ್ಲಿರುವ 270ಕ್ಕೂ ಅಧಿಕ ರೋಗಿಗಳು ಹಾಗೂ ದಾದಿಯರು ಕೊರೋನ ಪರೀಕ್ಷೆಗೊಳಗಾಗಲಿದ್ದಾರೆ.
ಆಸ್ಪತ್ರೆಯ ಹೊರ ರೋಗಿ ವಿಭಾಗ ಹಾಗೂ ತುರ್ತು ಸೇವೆಗಳ ವಿಭಾಗ ಕೂಡ ಬಂದ್ ಆಗಿದೆ. ಆಸ್ಪತ್ರೆಯ ಕ್ಯಾಂಟೀನ್ ಮೂಲಕ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರವೊದಗಿಸಲಾಗುವುದು.