ಕೊರೋನ ಬಗ್ಗೆ ತಪ್ಪು ಮಾಹಿತಿ: ಫಾರ್ವರ್ಡ್ ಸಂದೇಶಗಳಿಗೆ ಹೊಸ ಮಿತಿ ಹೇರಿದ ವಾಟ್ಸ್ಯಾಪ್
ಹೊಸದಿಲ್ಲಿ : ಕೊರೋನ ವೈರಸ್ ಕುರಿತು ತಪ್ಪು ಮಾಹಿತಿ ಹರಡದಂತೆ ಮಾಡುವ ಉದ್ದೇಶದಿಂದ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶಗಳನ್ನು ಒಮ್ಮೆ ಒಂದು ಚಾಟ್‍ಗೆ ಮಾತ್ರ ಕಳುಹಿಸುವ ನಿಟ್ಟಿನಲ್ಲಿ ವಾಟ್ಸ್ಯಾಪ್ ಮಿತಿ ಹೇರಿದೆ.
ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶೇರ್ ಮಾಡಲಾದ ಸಂದೇಶಗಳನ್ನೂ ವಾಟ್ಸ್ಯಾಪ್ ಹೈಲೈಟ್ ಮಾಡುತ್ತಿದೆ. ಫಾರ್ವರ್ಡ್ ಸಂದೇಶಗಳನ್ನು ಪರಾಮರ್ಶಿಸಲು ಬಳಕೆದಾರರಿಗೆ ಅನುಕೂಲ ಕಲ್ಪಿಸುವ ಫೀಚರ್ ಅಳವಡಿಸುವ ಕುರಿತಂತೆಯೂ ವಾಟ್ಸ್ಯಾಪ್ ಯೋಚಿಸುತ್ತಿದೆ.
ವಾಟ್ಸ್ಯಾಪ್ ಲೇಟೆಸ್ಟ್ ಅಪ್ಡೇಟ್ ಏಕಕಾಲಕ್ಕೆ ಫಾರ್ವರ್ಡ್ ಸಂದೇಶಗಳನ್ನು ಒಂದು ಚಾಟ್ ಗೆ ಮಾತ್ರ ಕಳುಹಿಸುವಂತೆ ಮಾಡಿದೆ. ಅತೀ ಹೆಚ್ಚು ಫಾರ್ವರ್ಡ್ ಸಂದೇಶಗಳ ವಿಚಾರದಲ್ಲಿ ವಾಟ್ಸ್ಯಾಪ್ ಸ್ಕ್ರೀನ್ ನಲ್ಲಿ ಮೇಲ್ಭಾಗದಲ್ಲಿ ಡಬಲ್ ಟಿಕ್ ಕಾಣಿಸುತ್ತದೆ.
ವಾಟ್ಸ್ಯಾಪ್ ಈಗಾಗಲೇ ಕೊರೋನ ವೈರಸ್ ಇನ್ಫಾಮೇರ್ಶನ್ ಹಬ್ ಆರಂಭಿಸಿದೆಯಲ್ಲದೆ ಸತ್ಯ ಶೋಧನಾ ಸೇವೆಗಳಿಗೆ 10 ಲಕ್ಷ ಡಾಲರ್ ದೇಣಿಗೆಯನ್ನೂ ನೀಡಿದೆ. ಭಾರತ ಸರಕಾರ ಹಾಗೂ ದೇಶದ ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಕೋವಿಡ್ 19 ವಾಟ್ಸ್ಯಾಪ್ ಚ್ಯಾಟ್ ಬಾಟ್ ಗಳನ್ನೂ ಆರಂಭಿಸಿದೆ.