‘ಕೊರೋನ ಕೊಲ್ಲೋಣ’ ಎಂದರು ಗುರುವಣ್ಣ..!

Update: 2020-04-11 17:16 GMT

ಗುರುಕಿರಣ್ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ. ಒಂದು ಕಾಲದಲ್ಲಿ ಉಪೇಂದ್ರ, ಶಿವರಾಜ್ ಕುಮಾರ್ ಮೊದಲಾದ ಸ್ಟಾರ್ ನಟರಿಂದ ಹಿಡಿದು ಬೆಳೆದು ಬರುತ್ತಿದ್ದಂತಹ ಸುದೀಪ್, ದರ್ಶನ್, ವಿಜಯ್‌ರಾಘವೇಂದ್ರ ಮೊದಲಾದ ಕಲಾವಿದರಿಗೆ ಸಂಗೀತದಲ್ಲೇ ಅಭಿಮಾನಿಗಳನ್ನು ಆಕರ್ಷಿಸಲು ಕಾರಣವಾದ ವ್ಯಕ್ತಿ. ಅವರ ಮತ್ತು ಉಪೇಂದ್ರ ಅವರ ಯಶಸ್ವಿ ಕಾಂಬಿನೇಶನ್ ಕನ್ನಡದ ಪಾಲಿಗೆ ರವಿಚಂದ್ರನ್ ಮತ್ತು ಹಂಸಲೇಖ ಅವರ ಬಳಿಕ ಮತ್ತೊಂದು ಹೊಸ ಕಾಂಬಿನೇಶನನ್ನೇ ತೋರಿಸಿಕೊಟ್ಟಿತು. ಈ ಜೋಡಿಯ ವಿಜಯ ಪಥ‘ಐ ಲವ್ ಯೂ’ ಚಿತ್ರದ ಮೂಲಕವೂ ಮುಂದುವರಿದು ಪ್ರಸ್ತುತ ‘ಬುದ್ಧಿವಂತ ಪಾರ್ಟ್ ಸೆಕೆಂಡ್’ ತನಕ ತಲುಪಿದೆ. ಇದರ ನಡುವೆ ‘ಲಾಕ್‌ಡೌನ್’ ಅವರನ್ನು ಕೂಡ ವೃತ್ತಿಯಿಂದ ಕ್ಷಣಕಾಲ ವಿರಮಿಸುವಂತೆ ಮಾಡಿದೆ. ಆದರೆ ಸೃಜನಶೀಲ ವ್ಯಕ್ತಿಗಳು ಸುಮ್ಮನಿರುತ್ತಾರೆಯೇ? ಕೊರೋನ ಕುರಿತಾದ ಗೀತೆಗೆ ತಾವೇ ಸಂಗೀತ ನೀಡಿ ಹೊರತರಲು ಸಿದ್ಧತೆ ನಡೆಸಿದ್ದಾರೆ. ಕನ್ನಡದ ಕೊರೋನ ಹಾಡುಗಳಲ್ಲೇ ವಿಭಿನ್ನ ಸ್ಥಾನ ಪಡೆಯಬಹುದಾದ ಈ ಗೀತೆಯ ವಿಶೇಷತೆಗಳ ಬಗ್ಗೆ ಗುರುಕಿರಣ್ ಅವರು ‘ವಾರ್ತಾಭಾರತಿ’ಯೊಂದಿಗೆ ಆಡಿರುವ ಮಾತುಗಳನ್ನು ಇಲ್ಲಿ ಪ್ರಶ್ನೋತ್ತರ ರೂಪದಲ್ಲಿ ನೀಡಲಾಗಿದೆ.

‘ಲಾಕ್‌ಡೌನ್’ ಪರಿಸ್ಥಿತಿಯಿಂದಾಗಿ ನಿಮಗೆ ಆಗಿರುವ ಪ್ರಮುಖ ಬದಲಾವಣೆ ಏನು?
ಮನೆಯೊಳಗೆ ಕುಳಿತುಕೊಳ್ಳುವುದು ನನಗೆ ಹೊಸದೇನಲ್ಲ. ಯಾಕೆಂದರೆ ನನ್ನ ಮ್ಯೂಸಿಕ್ ಸ್ಟುಡಿಯೊ ಇರುವುದೇ ಮನೆಯಲ್ಲಿ! ಆದರೆ ಚಿತ್ರೋದ್ಯಮಕ್ಕೆ ತುಂಬ ಹೊಡೆತ ಬಿದ್ದಿದೆ. ನನ್ನ ಪ್ರಕಾರ ‘ಲಾಕ್‌ಡೌನ್’ ಮುಗಿದ ಮೇಲೆ ಕೂಡ ಸುಮಾರು 3 ತಿಂಗಳ ಕಾಲ ಚಿತ್ರ ಮಂದಿರ ಮತ್ತು ಶೋಗಳಿಗೆ ಜನ ಬರಲಾರರು ಎಂದು ನನ್ನ ಅನಿಸಿಕೆ. ನಾನು ಒಪ್ಪಿಕೊಂಡಿದ್ದಂತಹ 3 ಶೋಗಳು ಪೋಸ್ಟ್ ಫೋನ್ ಆಗಿವೆ. ಬೆಂಗಳೂರಿನಲ್ಲಿ ಎರಡು ಮ್ಯೂಸಿಕಲ್ ನೈಟ್ಸ್ ಸೇರಿದಂತೆ ಕೋಲಾರದ ಒಂದು ಕಾರ್ಯಕ್ರಮ ಕೂಡ ಮುಂದೆ ಹಾಕಲಾಗಿದೆ. ಒಂದು ವಿದೇಶಿ ಕಾರ್ಯಕ್ರಮದ ಮಾತು ಕತೆ ಕೂಡ ನಡೆದಿತ್ತು. ಅದು ಸಪ್ಟೆಂಬರ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅದು ಕೂಡ ಕ್ಯಾನ್ಸಲ್ ಆಯಿತು. ಅದರಲ್ಲಿ ವಿಜಯ್ ಪ್ರಕಾಶ್ ಕೂಡ ಇದ್ದರು. 3 ವಾರಗಳ ಟೂರ್ ಹಮ್ಮಿಕೊಳ್ಳಲಾಗಿತ್ತು. ಅದನ್ನೆಲ್ಲ ಚಿಂತಿಸಿ ಉಪಯೋಗವಿಲ್ಲ. ಮೊದಲು ಎಲ್ಲರ ಆರೋಗ್ಯ ಸುಧಾರಿಸಿಕೊಳ್ಳಲಿ ಎನ್ನುವುದು ಪ್ರಥಮ ಆದ್ಯತೆ. ಹಾಗೆ ಮನೆಯಲ್ಲೇ ಕುಳಿತು ಕೊರೋನ ಕುರಿತಾದ ಗೀತೆಯೊಂದನ್ನು ತಯಾರು ಮಾಡಿದ್ದೇನೆ.

ನಿಮ್ಮ ಕೊರೋನ ಗೀತೆ ಉಳಿದವುಗಳಿಗಿಂತ ಹೇಗೆ ವಿಭಿನ್ನ?
 ನಾನು ಇದನ್ನು ನನ್ನ ಯಾವುದೇ ಸಿನೆಮಾ ಗೀತೆಯ ಟ್ಯೂನಲ್ಲಿ ಮಾಡಿಲ್ಲ. ಒರಿಜಿನಲ್ಲಾಗಿ ನಾನೇ ಟ್ಯೂನ್ ಕಂಪೋಸ್ ಮಾಡಿ, ನಾನೇ ಸಾಹಿತ್ಯ ಬರೆದು, ನಾನೇ ಹಾಡಿ, ಮಿಕ್ಸ್ ಮಾಡಿ, ನಾನೇ ಮಾಸ್ಟರಿಂಗ್ ಮಾಡಿ, ನಾನೇ ರೆಕಾರ್ಡ್ ಮಾಡಿ ನಾನೇ ಅಭಿನಯಿಸಿದ್ದೇನೆ. ಇದಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಬಾಲಿವುಡ್ ನಟ ಜಾಕಿಶ್ರಾಫ್ ಸೇರಿದಂತೆ ಹಲವು ಗಣ್ಯರ ಶುಭಾಶಯಗಳು ಬಂದಿವೆ. ಸಾಧ್ಯವಾದರೆ ಅವುಗಳನ್ನು ಕೂಡ ವೀಡಿಯೊದಲ್ಲಿ ಸೇರಿಸುವ ಪ್ರಯತ್ನ ನಡೆಸಿದ್ದೇನೆ. ‘ಕೊರೋನ.. ಕೊಲ್ಲೋಣ’ ಎನ್ನುವ ಪದಗಳು ಹಾಡಿನ ಪಲ್ಲವಿಯಲ್ಲಿವೆ. ಇದನ್ನು ವೈರಸ್ ವಿರುದ್ಧ ಹೋರಾಡುತ್ತಿರುವ ನಮ್ಮ ಪ್ರಧಾನಿ ಸೇರಿದಂತೆ ಆಡಳಿತ ವರ್ಗ ಮತ್ತು ಪೊಲೀಸ್ ಇಲಾಖೆ ಹಾಗೂ ಪ್ರಮುಖವಾಗಿ ವೈದ್ಯರಿಗೆ ಸಮರ್ಪಿಸುತ್ತಿದ್ದೇನೆ. ಅಂದಹಾಗೆ ಇದೊಂದು ಕಂಗ್ಲಿಷ್ ಹಾಡು ಎಂದು ಹೇಳಬಹುದು. ಒಟ್ಟಿನಲ್ಲಿ ಹಾಡಿನ ಮೂಲಕ ಎನರ್ಜಿ ಮತ್ತು ಜಾಗೃತಿ ಎರಡು ಕೂಡ ಮೂಡಿಸುವುದಷ್ಟೇ ನನ್ನ ಅಂತಿಮ ಉದ್ದೇಶ.

ಹಾಗಾದರೆ ಹಾಡನ್ನು ಕಂಗ್ಲಿಷ್ ಮಾಡಿರುವುದು ಉದ್ದೇಶಪೂರ್ವಕವೇ?
ಹೌದು. ಯಾಕೆಂದರೆ ಇದು ಸಾಂದರ್ಭಿಕ ಗೀತೆ. ವೈರಸ್ ಹೇಗೆ ಚೀನೀ ಹೆಸರಿದ್ದರೂ ಜಾಗತಿಕವಾಗಿ ಹಬ್ಬಿದೆಯೋ ಅದೇ ರೀತಿ ಈ ಗೀತೆ ಕೂಡ ನಮ್ಮ ದೇಶದಲ್ಲೇ ವ್ಯಾಪಿಸಬೇಕಾದ ಸಂದೇಶ ಹೊಂದಿದೆ. ವೇಗದಲ್ಲಿ ಎಲ್ಲಾ ಭಾಷೆಗಳ ಜನಗಳನ್ನು ಅರ್ಥಪೂರ್ಣವಾಗಿ ತಲುಪಬೇಕಾದರೆ ಸದ್ಯದ ಮಟ್ಟಿಗೆ ಇಂಗ್ಲಿಷ್ ಅನಿವಾರ್ಯ. ಹಾಗಾಗಿ ಇಂಗ್ಲಿಷ್ ಬಳಸಿದ್ದೇನೆ. ಹಾಗಂತ ಉದ್ದೇಶಪೂರ್ವಕವಾಗಿ ತುರುಕಿದ ಫೀಲ್ ನಿಮಗೆ ಹಾಡು ಆಲಿಸುವಾಗ ಬರುವುದಿಲ್ಲ. ಉದಾಹರಣೆಗೆ ‘ಕೊರೋನ.. ಕೊಲ್ಲೋಣ.. ಕೊರೋನ ವಿ ವಿಲ್ ಕಿಲ್ ಯು’ ಎಂದರೆ ಅದು ಸಹಜವಾದ ಪ್ರತಿಕ್ರಿಯೆಯಾಗಿ ಧ್ವನಿಸುತ್ತದೆ ಎಂದುಕೊಂಡಿದ್ದೇನೆ. ಪೂರ್ತಿ ಹಾಡನ್ನು ನಮ್ಮ ಮನೆಯೊಳಗೆ ಚಿತ್ರೀಕರಿಸಲಾಗಿದೆ. ಹಾಡು ಎರಡು ದಿನದೊಳಗೆ ನಿಮ್ಮ ಮುಂದಿರುತ್ತದೆ. ಆಗ ನಿಮಗೇ ಅರ್ಥವಾಗಬಹುದು ಎನ್ನುವ ಭರವಸೆ ನನಗಿದೆ.

ನೀವು ಯಾಕೆ ‘ಪ್ರಜಾಕೀಯ’ ಸೇರಬಾರದು?
ಉಪೇಂದ್ರ ಮತ್ತು ನಾವು ಆರಂಭ ಕಾಲದಿಂದಲೇ ಸ್ನೇಹಿತರು. ಆದರೆ ಅದೊಂದೇ ಕಾರಣಕ್ಕಾಗಿ ನಾನು ಅವರ ಪ್ರಜಾಕೀಯಕ್ಕೆ ಸೇರುವುದು ಸರಿಯಲ್ಲ. ಉಪೇಂದ್ರ ಅವರು ಆರಂಭದಿಂದಲೇ ಅವರ ಎಲ್ಲಾ ಯೋಚನೆಗಳನ್ನು ನನ್ನೊಂದಿಗೆ ಕೂಡ ಹಂಚಿಕೊಂಡಿದ್ದರು. ಇವೆಲ್ಲಾ ಪ್ರಾಯೋಗಿಕವಾಗಿ ನಡೆಯುವುದು ಕಷ್ಟ ಎಂದು ತಣ್ಣೀರೆರಚಿದ ಮಂದಿಯಲ್ಲಿ ನಾನು ಕೂಡ ಒಬ್ಬ. ಆದರೆ ಅವರೇ ನನ್ನನ್ನು ಆಹ್ವಾನಿಸಿದ್ದರೂ ಸಹ ನಾನು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ ಅವರ ಸಿದ್ಧಾಂತದ ಪ್ರಕಾರ ಪ್ರಜಾಕೀಯ ಪಕ್ಷದ ಕಾರ್ಯಕರ್ತ ಅಥವಾ ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಸದಾ ಚುರುಕಾಗಿ ತನ್ನ ಕಾರ್ಯ ಕ್ಷೇತ್ರದಲ್ಲಿ ನೌಕರನಂತೆ ಕೆಲಸ ಮಾಡಬೇಕಿದೆ. ನನಗಿನ್ನು ಕೂಡ ಸಂಗೀತ ಕ್ಷೇತ್ರಕ್ಕೆ ಬಿಡುವು ಕೊಟ್ಟು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದಾದಷ್ಟು ಸಮಯವಿಲ್ಲ!. ಹಾಗಾಗಿ ಆರಂಭದಲ್ಲೇ ನಿರಾಕರಿಸಿದ್ದೇನೆ. ಆದರೆ ಉಪೇಂದ್ರ ಅವರ ಪ್ರಜಾಕೀಯದ ಕನಸು ನಮ್ಮ ರಾಜ್ಯದಲ್ಲಿ ಯಶಸ್ವಿಯಾದರೆ ಆಗ ಖುಷಿ ಪಡುವವರಲ್ಲಿ ನಾನು ಕೂಡ ಒಬ್ಬ.

ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳು ಯಾವುವು?
ಪ್ರಸ್ತುತ ಜಯರಾಮ್ ಭದ್ರಾವತಿ ನಿರ್ದೇಶನದಲ್ಲಿರುವ ‘ಬುದ್ಧಿವಂತ-2’ ಸಿನಿಮಾದ ಹಾಡುಗಳ ಕೆಲಸ ನಡೆದಿದೆ. ಅದರಲ್ಲಿ ನಾಲ್ಕು ಹಾಡುಗಳಿವೆ. ಈಗಾಗಲೇ ಮೂರು ಹಾಡುಗಳ ಟ್ಯೂನ್ ರೆಡಿಯಾಗಿವೆ. ಉಳಿದಂತೆ ವಸಿಷ್ಠ ಸಿಂಹ ಅಭಿನಯಿಸಿರುವ ಕಾಲಚಕ್ರ, ವಿನೋದ್ ಪ್ರಭಾಕರ್ ನಟನೆಯ ಫೈಟರ್ ಸಿನೆಮಾಗಳಿಗೆ ನಾನೇ ಸಂಗೀತ ನೀಡುತ್ತಿದ್ದೇನೆ. ಲಿಖಿತ್ ಶೆಟ್ಟಿ ಅಭಿನಯದ ಹೊಸ ಚಿತ್ರಕ್ಕೆ ಕೂಡ ನನ್ನದೇ ಸಂಗೀತ ನಿರ್ದೇಶನ ಇರಲಿದೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ನಾಯಕನಾಗಿ ತೆರೆಗೆ ಬರುತ್ತಿರುವ ‘ಘಾರ್ಗಾ’ ಚಿತ್ರಕ್ಕೂ ನಾನೇ ಸಂಗೀತ ನೀಡಿದ್ದೇನೆ. ‘ಧೂಮ್ ಎಗೈನ್’ ಎನ್ನುವ ಚಿತ್ರದ ಬಗ್ಗೆಯೂ ಮಾತುಕತೆ ನಡೆದಿವೆ. ಆಕರ್ಷಕ ಪ್ರಾಜೆಕ್ಟ್‌ಗಳಿಗೇನೂ ಕೊರತೆಯಿಲ್ಲ. ಆದರೆ ಎಲ್ಲಕ್ಕಿಂತ ಮೊದಲು ಕೊರೋನವನ್ನು ಕೊನೆಗಾಣಿಸುವ ಕೆಲಸ ಆಗಬೇಕಿದೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News