ಲಾಕ್‌ಡೌನ್ ಎಫೆಕ್ಟ್: ಅವಧಿಗೆ ಮುನ್ನವೇ ಶಾಲಾ ಕಾಲೇಜು ಪುನಾರಂಭ?

Update: 2020-04-13 03:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.13: ದೇಶಾದ್ಯಂತ ಬೇಸಿಗೆ ರಜೆ ಹಿಂದೂಡುವ ಮೂಲಕ, ಕೊರೋನ ಸಾಂಕ್ರಾಮಿಕದಿಂದಾಗಿ 2020-21ನೇ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ದಿನಗಳು ನಷ್ಟವಾಗದಂತೆ ಮಾಡಲು ವೇಳಾಪಟ್ಟಿಯನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರವು ಶಾಲಾ ಶಿಕ್ಷಣ ಮಂಡಳಿ ಹಾಗೂ ಉನ್ನತ ಶಿಕ್ಷಣ ಮಂಡಳಿಗೆ ಕೋರುವ ಸಾಧ್ಯತೆ ಇದೆ ಎಂದು The Times Of India ವರದಿ ಮಾಡಿದೆ.

ಲಾಕ್‌ಡೌನ್ ಜಾರಿಯ ಕಾರಣದಿಂದ ಎಪ್ರಿಲ್ ಒಂದರಿಂದ ಬೇಸಿಗೆ ರಜೆ ಆರಂಭವಾಗಿದೆ ಎಂದು ಪರಿಗಣಿಸಿ, ಮೇ ಮಧ್ಯಭಾಗ ಅಥವಾ ಮೂರನೇ ವಾರದಲ್ಲಿ ಶಾಲೆಗಳ ಪುನರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಲಿದೆ ಎಂದು ಹೇಳಲಾಗಿದೆ.

ಅಂತೆಯೇ ಉನ್ನತ ಶಿಕ್ಷಣ ಸಂಸ್ಥೆಗಳು ತಕ್ಷಣದಿಂದ ಆನ್‌ಲೈನ್ ತರಗತಿಗಳನ್ನು ಅರಂಭಿಸುವಂತೆ ಹಾಗೂ ಬಾಕಿ ಇರುವ ಸೆಮಿಸ್ಟರ್/ ಯುನಿಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ನೀಡುವ ಸಂಬಂಧ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಸಮಿತಿ, ಸಚಿವಾಲಯಕ್ಕೆ ಸೋಮವಾರ ಶಿಫಾರಸು ಮಾಡಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಲಾಕ್‌ಡೌನ್ ಅವಧಿ ಮುಗಿದ ತಕ್ಷಣ ತರಗತಿಗಳ ಪುನರಾರಂಭಕ್ಕೆ ಮತ್ತು ಬಾಕಿ ಇರುವ ಪರೀಕ್ಷೆಗಳನ್ನು ನಡೆಸಲು ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಂಎಚ್‌ಆರ್‌ಡಿ ಸೂಚಿಸಲಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿ ಆರಂಭಿಸಿ, ಪ್ರಾಕ್ಟಿಕಲ್ ಭಾಗವನ್ನು ಮಾತ್ರ ಲಾಕ್‌ಡೌನ್ ಅವಧಿ ಕೊನೆಗೊಂಡ ಬಳಿಕ ಬೋಧಿಸಬೇಕು. ಅಂತೆಯೇ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆ ಬಗ್ಗೆಯೂ ಪರಿಶೀಲನೆ ನಡೆದಿದೆ. ಆದರೆ ಸರ್ಕಾರಿ ವಿವಿಗಳು ಮಾತ್ರ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿವೆ ಎಂದು ತಿಳಿದುಬಂದಿದೆ.

ಲಾಕ್‌ಡೌನ್ ಮತ್ತಷ್ಟು ವಿಸ್ತರಣೆಯಾದಲ್ಲಿ ಆನ್‌ಲೈನ್ ಪರೀಕ್ಷೆ ನಡೆಸುವ ಬಗ್ಗೆ ಹಲವು ಖಾಸಗಿ ವಿವಿಗಳು ಈಗಾಗಲೇ ಪರಿಶೀಲಿಸುತ್ತಿವೆ. ಮೇ ತಿಂಗಳ ಆರಂಭದಿಂದ ಲಾಕ್‌ಡೌನ್ ತೆರವಾದರೆ ಈಗಾಗಲೇ ಮುಂದೂಡಲ್ಪಟ್ಟಿರುವ ಜೆಇಇ ಮೈನ್ ಮತ್ತು ಅಡ್ವಾನ್ಸ್‌ಡ್, ನೀಟ್ ಹಾಗೂ ಯುಜಿಸಿ-ನೆಟ್ ಪರೀಕ್ಷೆಗಳನ್ನು ನೆಡೆಸಿ ಪ್ರವೇಶ ಪ್ರಕ್ರಿಯೆಯನ್ನು ಜುಲೈ- ಆಗಸ್ಟ್ ವೇಳೆಗೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News