ಕೋವಿಡ್ ಲಸಿಕೆಯನ್ನು ಭಾರತಕ್ಕೆ ಬೇಗ ಒದಗಿಸುವುದಾಗಿ ಟ್ರಂಪ್ ಹೇಳಿದ್ದಾರೆಂಬ ರಾಹುಲ್ ಕಂವಲ್ ಹೇಳಿಕೆ ಸುಳ್ಳು

Update: 2020-04-14 14:00 GMT
Photo: Twitter(@rahulkanwal)

ಹೊಸದಿಲ್ಲಿ: ಅಮೆರಿಕಾದಲ್ಲಿ ಹೆಚ್ಚುತ್ತಿರುವ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಹೈಡ್ರೋಕ್ಸಿಕ್ಲೊರೊಖ್ವೀನ್ ಔಷಧಿಯನ್ನು ರಫ್ತುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿರುವುದರಿಂದ ಅಮೆರಿಕಾದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕೋವಿಡ್-19 ವಿರುದ್ಧದ ಲಸಿಕೆಯನ್ನು ಭಾರತಕ್ಕೆ ಆರಂಭದಲ್ಲಿಯೇ ಒದಗಿಸುವ ಸಾಧ್ಯತೆಯಿದೆಯೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆಂದು 'ಇಂಡಿಯಾ ಟುಡೇ' ವಾಹಿನಿಯ ನ್ಯೂಸ್ ಡೈರೆಕ್ಟರ್ ರಾಹುಲ್ ಕಂವಲ್ ಇತ್ತೀಚೆಗೆ ಹೇಳಿಕೊಂಡಿದ್ದರಲ್ಲದೆ ಟ್ರಂಪ್ ಅವರು 'ಫಾಕ್ಸ್ ನ್ಯೂಸ್‍'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತಂತೆ ಹೇಳಿದ್ದರೆಂದೂ ತಿಳಿಸಿದ್ದರು. ಈ ಕುರಿತಂತೆ ರಾಹುಲ್ ಕನ್ವಲ್ ಟ್ವೀಟ್ ಮಾಡಿದ್ದರಲ್ಲದೆ "ಇದೇ ಕಾರಣಕ್ಕೆ ಕೋವಿಡ್-19 ವಿರುದ್ಧ ಜತೆಯಾಗಿ ಹೋರಾಡಬೇಕಾಗಿದೆ. ಸಹಾಯ ಮಾಡುವುದರಿಂದ ಹಿಡಿದು ಸಹಾಯ ಅಗತ್ಯದ ತನಕ ನಾವು ಯಾವಾಗ ಹೋಗಬಹುದೆಂದು ತಿಳಿಯುವುದು ಸಾಧ್ಯವಿಲ್ಲ,'' ಎಂದೂ ಅವರ ಟ್ವೀಟ್‍ನಲ್ಲಿ ಬರೆದಿದ್ದರು.

ಭಾರತವು ಹೈಡ್ರೋಕ್ಸಿಕ್ಲೊರೊಖ್ವೀನ್ ಔಷಧಿಯ ರಫ್ತು ನಿಷೇಧಿಸಿದ ಬೆನ್ನಲ್ಲೇ ಈ ಔಷಧಿಗೆ ಬೇಡಿಕೆಯಿಟ್ಟಿದ್ದ ಟ್ರಂಪ್, ಭಾರತ ಒಪ್ಪದೇ ಇದ್ದರೆ 'ಪ್ರತೀಕಾರ' ಕ್ರಮ ಸಾಧ್ಯತೆಯ ಕುರಿತೂ ಸುಳಿವು ನೀಡಿದ್ದರು.

ವಾಸ್ತವವೇನು? : ರಾಹುಲ್ ಕನ್ವಲ್ ಹೇಳಿದಂತೆ ಟ್ರಂಪ್ ಅವರ ಫಾಕ್ಸ್ ನ್ಯೂಸ್ ಸಂದರ್ಶನವನ್ನು altnews.in ಜಾಲಾಡಿದೆ. ಆದರೆ ಆ ಸಂದರ್ಶನದಲ್ಲಿ ಎಲ್ಲಿಯೂ ಟ್ರಂಪ್ ಅವರು ಭಾರತಕ್ಕೆ ಕೋವಿಡ್-19 ಲಸಿಕೆಯನ್ನು ಆರಂಭದಲ್ಲಿಯೇ ಒದಗಿಸುವ ಕುರಿತಂತೆ ಹೇಳಿಲ್ಲ. ಅವರು ಲಸಿಕೆಯ ಕುರಿತಂತೆ ಸಂದರ್ಶನದಲ್ಲಿ ಮಾತನಾಡಿದ್ದು ಹೀಗಿತ್ತು "ನಿಮಗೆ ಗೊತ್ತು ನಾವು ಲಸಿಕೆ ತಯಾರಿಸುತ್ತಿದ್ದೇವೆ. ಜಾನ್ಸನ್ ಎಂಡ್ ಜಾನ್ಸನ್- ಅವರು ಅದನ್ನು ಪರೀಕ್ಷಿಸಬೇಕಿದೆ. ಮಿಲಿಯಗಟ್ಟಲೆ ಜನರಿಗೆ ಲಸಿಕೆ ನೀಡಬೇಕಿರುವಾಗ ಅದು ಸುರಕ್ಷಿತವಾಗಿರಬೇಕು. ಆದರೆ ಈ ಹೈಡ್ರೋಕ್ಸಿಕ್ಲೊರೋಖ್ವಿನ್ ದಶಕಗಳಿಂದ ಇದೆ, ಅದು ಪರಿಣಾಮಕಾರಿ, ಮುಖ್ಯವಾಗಿ ಈ ಔಷಧಿ ಸೇವಿಸುವ ಮಲೇರಿಯಾ ಬಾಧಿತ ದೇಶಗಳವರಿಗೆ ಕೊರೋನ ವೈರಸ್ ಸಮಸ್ಯೆ ಎದುರಾಗಿಲ್ಲ,'' ಎಂದಷ್ಟೇ ಟ್ರಂಪ್ ಹೇಳಿದ್ದರು.

ಟ್ರಂಪ್ ನಿಜವಾಗಿಯೂ ಭಾರತಕ್ಕೆ ಲಸಿಕೆಯನ್ನು ಆರಂಭದಲ್ಲಿಯೇ ಒದಗಿಸುವುದಾಗಿ ಹೇಳಿದ್ದರೆ ಅದಕ್ಕೆ ಇಲ್ಲಿ ಸಾಕಷ್ಟು ಪ್ರಚಾರವೂ ದೊರಕುತ್ತಿತ್ತು. ವಾಸ್ತವವೆಂದರೆ ರಾಹುಲ್ ಕಂವಲ್ ಅವರು ಕೆಲಸ ಮಾಡುವ 'ಇಂಡಿಯಾ ಟುಡೇ' ಕೂಡ ಈ ಸುದ್ದಿ ಪ್ರಸಾರ ಮಾಡಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News