ಎಲ್ಗಾರ್ ಪರಿಷದ್ ಪ್ರಕರಣ: ಅಂಬೇಡ್ಕರ್ ಜಯಂತಿಯಂದು ಆನಂದ್ ತೇಲ್ತುಂಬ್ಡೆ ಬಂಧನ

Update: 2020-04-14 11:37 GMT
ಆನಂದ್ ತೇಲ್ತುಂಬ್ಡೆ (Photo: Twitter)

ಮುಂಬೈ: 'ಎಲ್ಗಾರ್ ಪರಿಷದ್-ಮಾವೋವಾದಿ ನಂಟು' ಪ್ರಕರಣದಲ್ಲಿ ಖ್ಯಾತ ಹೋರಾಟಗಾರ ಹಾಗೂ ವಿದ್ವಾಂಸ ಆನಂದ್ ತೇಲ್ತುಂಬ್ಡೆ ಅವರು ಇಂದು ಇಲ್ಲಿನ ಕುಂಬಾಲ ಹಿಲ್ ಪ್ರದೇಶದಲ್ಲಿರುವ ರಾಷ್ಟ್ರೀಯ ತನಿಖಾ ಏಜನ್ಸಿ ಕಚೇರಿಯಲ್ಲಿ ಶರಣಾಗಿದ್ದು ನಂತರ ಅವರನ್ನು ಬಂಧಿಸಲಾಗಿದೆ. ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದೇ ಅವರನ್ನು ಬಂಧಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅವರು ಶರಣಾಗಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ತಮ್ಮ ಪತ್ನಿ ರಮಾ ತೇಲ್ತುಂಬ್ಡೆ ಮತ್ತು ಮೈದುನ ಹಾಗೂ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಜತೆ ಅವರು ಇಂದು ಎನ್‍ಐಎ ಕಚೇರಿಗೆ ಆಗಮಿಸಿದರು.

ಪ್ರಕರಣದ ಸಹ ಆರೋಪಿ ಹಾಗೂ ನಾಗರಿಕ ಹಕ್ಕು ಕಾರ್ಯಕರ್ತ ಗೌತಮ್ ನವ್ಲಖಾ ಕೂಡ ಇಂದು ದಿಲ್ಲಿಯಲ್ಲಿ ಎನ್‍ಐಎ ಮುಂದೆ ಶರಣಾಗಿದ್ದಾರೆ. ಅವರನ್ನು ಮುಂಬೈ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಗುವುದು. ತೇಲ್ತುಂಬ್ಡೆ ಹಾಗೂ ನವ್ಲಖಾ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಾರ್ಚ್ 17ರಂದು ತಿರಸ್ಕರಿಸಿತ್ತು.

ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ತೇಲ್ತುಂಬ್ಡೆ, ನವ್ಲಖಾ ಹಾಗೂ ಒಂಬತ್ತು ಮಂದಿ ಇತರ ಹೋರಾಟಗಾರರ ವಿರುದ್ಧ ಈ ಹಿಂದೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News