ಕಾನೂನು ತಜ್ಞರು,ಸಾಹಿತಿಗಳು,ಕಲಾವಿದರು ಸೇರಿದಂತೆ 3,500 ಗಣ್ಯರಿಂದ ಉ.ಪ್ರದೇಶ ಸರಕಾರಕ್ಕೆ ತರಾಟೆ

Update: 2020-04-15 14:18 GMT

ಹೊಸದಿಲ್ಲಿ,ಎ.15: ಸುದ್ದಿ ಜಾಲತಾಣ ‘ದಿ ವೈರ್’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕಾಗಿ ಕಾನೂನು ತಜ್ಞರು,ವಿದ್ವಾಂಸರು,ಕಲಾವಿದರು ಮತ್ತು ಇತರ ಕ್ಷೇತ್ರಗಳವರು ಸೇರಿದಂತೆ ಸುಮಾರು 3,500 ಗಣ್ಯರು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದಾರೆ. ವರದರಾಜನ್ ವಿರುದ್ಧದ ಎಲ್ಲ ಕ್ರಿಮಿನಲ್ ಕ್ರಮಗಳನ್ನು ಕೈಬಿಡುವಂತೆ ಅವರು ಆಗ್ರಹಿಸಿದ್ದಾರೆ.

 ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿ ಎಂದು ಜಂಟಿ ಹೇಳಿಕೆಯಲ್ಲಿ ಬಣ್ಣಿಸಿರುವ ಈ ಗಣ್ಯರು,ಮಾಧ್ಯಮ ಸ್ವಾತಂತ್ರವನ್ನು ದಮನಿಸಲು ಕೋವಿಡ್-19 ಪಿಡುಗನ್ನು ನೆಪವಾಗಿ ಬಳಸದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.

ವೈದ್ಯಕೀಯ ತುರ್ತು ಸ್ಥಿತಿಯೊಂದು ವಸ್ತುತಃ ರಾಜಕೀಯ ತುರ್ತು ಸ್ಥಿತಿ ಹೇರಿಕೆಗೆ ನೆಪವಾಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ ಬಿ.ಲೋಕೂರ್,ಮದ್ರಾಸ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೆ.ಚಂದ್ರು,ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ಅಂಜನಾ ಪ್ರಕಾಶ,ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥರಾದ ಅಡ್ಮಿರಲ್ ರಾಮದಾಸ್ ಮತ್ತು ಅಡ್ಮಿರಲ್ ವಿಷ್ಣು ಭಾಗವತ್,ಮಾಜಿ ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ಅವರು ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

  ಕೋವಿಡ್-19 ಮತ್ತು ಧಾರ್ಮಿಕ ಕಾರ್ಯಕ್ರಮಗಳ ಕುರಿತು ವಾಸ್ತವಾಂಶಗಳಿಂದ ಕೂಡಿದ ವರದಿಗಾಗಿ ‘ದಿ ವೈರ್ ’ ಮತ್ತು ಅದರ ಸ್ಥಾಪಕ ಸಂಪಾದಕರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ದಾಖಲಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉ.ಪ್ರದೇಶ ಸರಕಾರ ಮತ್ತು ಪೊಲೀಸರ ಕ್ರಮದ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿರುವ ಹೇಳಿಕೆಯು,ವಿಶೇಷವಾಗಿ ಕೋವಿಡ್-19ರ ಈ ಸಂದರ್ಭದಲ್ಲಿ ಮಾಧ್ಯಮ ಸ್ವಾತಂತ್ರದ ಮೇಲಿನ ಈ ದಾಳಿಯು ವಾಕ್ ಸ್ವಾತಂತ್ರವನ್ನು ಮಾತ್ರವಲ್ಲ,ಸಾರ್ವಜನಿಕರ ಮಾಹಿತಿ ಹಕ್ಕನ್ನು ಸಹ ಅಪಾಯಕ್ಕೆ ತಳ್ಳಿದೆ ಎಂದಿದೆ.

ಕೋರೊನ ವೈರಸ್ ಸಾಂಕ್ರಾಮಿಕ ಪಿಡುಗಿಗೆ ಕೋಮು ಬಣ್ಣವನ್ನು ನೀಡದಂತೆಯೂ ಹೇಳಿಕೆಯಲ್ಲಿ ಮಾಧ್ಯಮಗಳಿಗೆ ಕರೆ ನೀಡಲಾಗಿದೆ.

’ದಿ ವೈರ್’ನಲ್ಲಿ ಪ್ರಕಟವಾಗಿದ್ದ ಲೇಖನ ಮತ್ತು ಯೋಗಿ ಆದಿತ್ಯನಾಥ ವಿರುದ್ಧ ವರದರಾಜನ್ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಈ ಎಫ್‌ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News