ಮುಂಬೈ: ಹಸಿವು ಮತ್ತು ಕೋವಿಡ್-19 ನಡುವೆ ಅತಂತ್ರರಾಗಿರುವ ವಲಸೆ ಕಾರ್ಮಿಕರು

Update: 2020-04-17 16:17 GMT

ಮುಂಬೈ,ಎ.17: ನಗರದಲ್ಲಿಯ ವಲಸೆ ಕಾರ್ಮಿಕರು ಮಾ.24 ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ತಮ್ಮ ಊರುಗಳಿಗೆ ಮರಳಲು ಕಾಯುತ್ತಿದ್ದಾರೆ.

ಕೆಲವರು ತಮ್ಮ ಊರುಗಳಿಗೆ ಪ್ರಯಾಣಿಸಿದ್ದರೆ, ಇತರರು ಎ.14ರಂದು ಲಾಕ್‌ಡೌನ್ ಅಂತ್ಯಗೊಳ್ಳುವುದನ್ನು ಕಾಯುತ್ತಿದ್ದರು.

ಇದೀಗ ಲಾಕ್‌ ಡೌನ್ ಮೇ 3ರವರೆಗೆ ವಿಸ್ತರಣೆಯಾಗಿದ್ದು ಅವರ ಕಾಯುವಿಕೆ ಇನ್ನಷ್ಟು ಸುದೀರ್ಘಗೊಂಡಿದೆ ಮತ್ತು ಅವಬಳಿಯಿದ್ದ ಹಣವೂ ಖಾಲಿಯಾಗುತ್ತಿದೆ. ತಾವು ಕೊರೋನ ವೈರಸ್‌ನಿಂದಲ್ಲ, ಹಸಿವೆಯಿಂದ ಸಾಯಲಿದ್ದೇವೆ ಎಂಬ ಭೀತಿ ಅವರನ್ನು ಆವರಿಸಿಕೊಂಡಿದೆ.

ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಬೃಜೇಶ್ ಕುಮಾರ್ ಸುಮಾರು ಆರೇಳು ತಿಂಗಳುಗಳ ಹಿಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದ. ಕೇಬಲ್ ಮೆಕ್ಯಾನಿಕ್ ಆಗಿರುವ ಆತ ದಿನಕ್ಕೆ 100-150 ರೂ.ಗಳಿಸುತ್ತಿದ್ದ. ನವವಿವಾಹಿತನಾಗಿರುವ ಆತ ತನ್ನ ಪತ್ನಿಯೊಡನೆ ಮಾಂಖುರ್ದ್ ಕೊಳೆಗೇರಿಯಲ್ಲಿ 8x8 ಅಡಿ ಅಳತೆಯ ಕೋಣೆಯಲ್ಲಿ ವಾಸವಿದ್ದಾನೆ. ಊರಿನಲ್ಲಿರುವ ಆತನ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಾಳೆ. ಆಕೆಯನ್ನು ಭೇಟಿಯಾಗಲು ಬಯಸಿದ್ದ ಆತ ಮಾ.25ರಂದು ರೈಲು ಟಿಕೆಟ್‌ನ್ನೂ ಕಾಯ್ದಿರಿಸಿದ್ದ. ಆದರೆ ಲಾಕ್‌ಡೌನ್‌ನಿಂದಾಗಿ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ತಾಯಿಯ ಸ್ಥಿತಿ ತುಂಬ ಬಿಗಡಾಯಿಸಿದೆ, ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂಬ ಅಳಲು ಬೃಜೇಶ್‌ನದು.

 ಇಂತಹ ಅತಂತ್ರ ಸ್ಥಿತಿಯಲ್ಲಿರುವುದು ಬೃಜೇಶ್ ಮಾತ್ರವಲ್ಲ. ಉ.ಪ್ರದೇಶ ಮೂಲದ ರಿಕ್ಷಾ ಚಾಲಕ ಸಂತೋಷ ಪಾಂಡೆ ಆರು ಜನರಿರುವ ತನ್ನ ಕುಟುಂಬದ ಜೊತೆ ಘಾಟ್‌ಕೋಪರ್‌ನಲ್ಲಿ ವಾಸವಿದ್ದಾನೆ. ಲಾಕ್‌ಡೌನ್‌ನಿಂದಾಗಿ ಅವರ ತುತ್ತಿನ ಚೀಲಗಳನ್ನು ತುಂಬಿಸಲೂ ಆತನಿಗೆ ಸಾಧ್ಯವಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಸ್ನೇಹಿತನೋರ್ವ ಸ್ವಲ್ಪ ಅಕ್ಕಿ ಮತ್ತು ಬೇಳೆ ಕೊಟ್ಟು ನೆರವಾಗಿದ್ದ. ಈಗ ಅದೂ ಖಾಲಿಯಾಗಿದೆ.

‘ಸರಕಾರದ ಆದೇಶ ಮತ್ತು ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲು ನಾವು ಸಿದ್ಧರಿದ್ದೇವೆ. ಆದರೆ ಜೀವಂತವಾಗಿದ್ದರೆ ಮಾತ್ರ ನಾವು ಹಾಗೆ ಮಾಡಬಲ್ಲೆವು. ನಾವು ಹಸಿವೆಯಿಂದ ಸಾಯುತ್ತೇವೆ. ಇಲ್ಲಿ ಆಹಾರ ಧಾನ್ಯಗಳನ್ನೂ ಒದಗಿಸಲಾಗುತ್ತಿಲ್ಲ. ನಮಗೆ ಆಹಾರ ಧಾನ್ಯಗಳನ್ನು ನೀಡಿ ಇಲ್ಲವೇ ನಮ್ಮನ್ನು ನಮ್ಮ ಗ್ರಾಮಗಳಿಗೆ ವಾಪಸ್ ಕಳುಹಿಸಿ ಎನ್ನುವುದು ಸರಕಾರಕ್ಕೆ ನನ್ನ ಏಕೈಕ ಕೋರಿಕೆ ’ಎನ್ನುತ್ತಾನೆ ಪಾಂಡೆ. ಈ ಹಿಂದೆ ವಲಸೆ ಕಾರ್ಮಿಕರಿಗೆ ಸಾಂತ್ವನ ಹೇಳಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ,ಈಗ ಇರುವಲ್ಲಿಯೇ ಇರುವಂತೆ ಅವರನ್ನು ಕೋರಿಕೊಂಡಿದ್ದರು. ಆಹಾರವನ್ನು ಒದಗಿಸುವುದಾಗಿ ಭರವಸೆಯನ್ನೂ ನೀಡಿದ್ದರು.

ಆದರೆ ಹೆಚ್ಚಿನ ವಲಸೆ ಕಾರ್ಮಿಕರು ಸಹನೆಯನ್ನು ಕಳೆದುಕೊಳ್ಳುತ್ತಿದ್ದಾರೆ.

“ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಬಳಿ ಆಹಾರ,ಹಣ ಮತ್ತು ಕೆಲಸ ಇಲ್ಲ. ನಾವು ಎಂಟು ಜನರು ಒಂದು ಕೋಣೆಯಲ್ಲಿದ್ದೇವೆ. ನಾನು ಅವರ ಹೊಟ್ಟೆಯನ್ನು ಹೊರೆಯಬೇಕು. ಆದರೆ ನಾನು ದುಡಿಯದಿದ್ದರೆ ಅವರೇನು ತಿನ್ನಬೇಕು” ಎಂದು ಉ.ಪ್ರದೇಶದ ಇನ್ನೋರ್ವ ವಲಸೆ ಕಾರ್ಮಿಕ ಕಮರುದ್ದೀನ್ ಪ್ರಶ್ನಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ವಿಸ್ತರಣೆಯನ್ನು ಪ್ರಕಟಿಸುವಾಗ ಎ.20ರ ನಂತರ ಕೊರೋನ ವೈರಸ್ ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳಲ್ಲಿ ಕೆಲವು ಕೈಗಾರಿಕೆಗಳು,ತಯಾರಿಕೆ ಚಟುವಟಿಕೆಗಳು ಮತ್ತು ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಈ ಕ್ರಮವು ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ಗಳನ್ನು ಒದಗಿಸಿ ಬಿಕ್ಕಟ್ಟನ್ನು ಸ್ವಲ್ಪಮಟ್ಟಿಗೆ ನೀಗಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News