ಲಾಕ್‌ಡೌನ್:ಎ.20ರಿಂದ ಇನ್ನಷ್ಟು ನಿರ್ಬಂಧಗಳು ಸಡಿಲ

Update: 2020-04-18 16:31 GMT

ಹೊಸದಿಲ್ಲಿ,ಎ.18: ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಕನಿಷ್ಠ ಪೀಡಿತವಾಗಿರುವ ಭಾಗಗಳಲ್ಲಿ ಎ.20ರಿಂದ ಕಾರ್ಯಾರಂಭಗೊಳ್ಳಲಿರುವ ವಾಣಿಜ್ಯ ಚಟುವಟಿಕೆಗಳು ಮತ್ತು ಸೇವೆಗಳ ಹೊಸ ಪಟ್ಟಿಯೊಂದನ್ನು ಕೇಂದ್ರ ಸರಕಾರವು ಶನಿವಾರ ಬಿಡುಗಡೆಗೊಳಿಸಿದೆ.

ಪರಿಷ್ಕೃತ ಪಟ್ಟಿಯು ಆಯುಷ್ ಸೇರಿದಂತೆ ಆರೋಗ್ಯ ಸೇವೆಗಳು, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು, ಸಾಗರ ಮತ್ತು ಒಳನಾಡು ಮೀನುಗಾರಿಕೆ,ಗರಿಷ್ಠ ಶೇ.50ರಷ್ಟು ಕಾರ್ಮಿಕರೊಂದಿಗೆ ಚಹಾ, ಕಾಫಿ ಮತ್ತು ರಬ್ಬರ್ ತೋಟಗಳ ಚಟುವಟಿಕೆಗಳು ಹಾಗೂ ಪಶು ಸಂಗೋಪನೆಯನ್ನು ಒಳಗೊಂಡಿದೆ.

ಹಣಕಾಸು ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳು,ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು,ಹೋಟೆಲ್‌ಗಳು ,ಹೋಮ್‌ಸ್ಟೇಗಳು ಮತ್ತು ಸಣ್ಣ ವಸತಿಗೃಹಗಳಂತಹ ವಾಣಿಜ್ಯಿಕ ಮತ್ತು ಖಾಸಗಿ ಉದ್ಯಮಗಳೂ ಪರಿಷ್ಕೃತ ಪಟ್ಟಿಯಲ್ಲಿವೆ.

 ಸಾರ್ವಜನಿಕರಿಗೆ ತೊಂದರೆಗಳನ್ನು ಕಡಿಮೆ ಮಾಡುವುದು ಈ ಚಟುವಟಿಕೆಗಳ ಉದ್ದೇಶವಾಗಿದೆ, ಆದರೆ ಹಾಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯ ಆಧಾರದಲ್ಲಿ ಅವಕಾಶ ನೀಡಲಾಗುವದು ಎಂದು ಎಚ್ಚರಿಕೆ ನೀಡಿರುವ ಸರಕಾರವು, ಕಚೇರಿಗಳು,ಕೆಲಸದ ಸ್ಥಳಗಳು ಮತ್ತು ಫ್ಯಾಕ್ಟರಿಗಳಲ್ಲಿ ಸುರಕ್ಷಿತ ಅಂತರ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿದೆ.

ಎ.20ರಿಂದ ಕಾರ್ಯಾರಂಭಗೊಳ್ಳಲಿರುವ ಚಟುವಟಿಕೆಗಳ ಪಟ್ಟಿಯನ್ನು ಶನಿವಾರ ಟ್ವೀಟಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ನಿಯಂತ್ರಣ ವಲಯಗಳಲ್ಲಿ ಈ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆಯನ್ನು ನಡೆಸಿದ ಸಚಿವರ ಸಮಿತಿಯು,ಗೃಹ ಸಚಿವಾಲಯವು ಎ.15ರಂದು ಬಿಡುಗಡೆಗೊಳಿಸಿದ್ದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ತಿಳಿಸಿದೆ. ಈ ಚಟುವಟಿಕೆಗಳಿಗೆ ಅನುಮತಿ ನೀಡುವಲ್ಲಿ ಅಂತಿಮ ನಿರ್ಧಾರ ಆಯಾ ರಾಜ್ಯ ಸರಕಾರಗಳದ್ದೇ ಆಗಿರುತ್ತದೆ ಮತ್ತು ಅಗತ್ಯವಾದರೆ ಅವು ಕಠಿಣ ನಿರ್ಬಂಧಗಳನ್ನು ಹೇರಬಹುದು ಎಂದೂ ಸಮಿತಿಯು ತಿಳಿಸಿದೆ.

 ಸರಕಾರವು ಈ ವಾರ ಬಿಡುಗಡೆಗೊಳಿಸಿದ್ದ ಮೊದಲ ಪಟ್ಟಿಯು ಎ.20ರಿಂದ ಇ-ಕಾಮರ್ಸ್ ಜಾಲತಾಣಗಳ ಮೂಲಕ ಮೊಬೈಲ್ ಫೋನ್‌ಗಳು,ಟಿವಿ ಮತ್ತು ಫ್ರಿಜ್‌ಗಳು, ಲ್ಯಾಪ್‌ಟಾಪ್‌ಗಳು, ಬಟ್ಟೆಗಳು, ಶಾಲಾಮಕ್ಕಳ ಸ್ಟೇಷನರಿ ವಸ್ತುಗಳು ಇತ್ಯಾದಿಗಳ ಮಾರಾಟವನ್ನು ಒಳಗೊಂಡಿತ್ತು. ಅಗತ್ಯ ಸೇವೆಗಳೆಂದು ಗುರುತಿಸಲಾದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಇತರ ಕೆಲವು ವಾಣಿಜ್ಯಿಕ ಚಟುವಟಿಕೆಗಳಿಗೂ ಅನುಮತಿಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News