ಕೇರಳ: ಎ.20ರಿಂದ ಹಲವು ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಸಲು ಸರಕಾರದ ನಿರ್ಧಾರ

Update: 2020-04-18 16:50 GMT

ತಿರುವನಂತಪುರಂ, ಎ.18: ಕೇರಳದಲ್ಲಿ ಸೋಮವಾರದಿಂದ ಹಂತಹಂತವಾಗಿ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರ ವಿವರವಾದ ಮಾರ್ಗದರ್ಶಿ ಸೂತ್ರವನ್ನು ಶನಿವಾರ ಬಿಡುಗಡೆಗೊಳಿಸಿದೆ. ಇದರಂತೆ ರಾಜ್ಯವನ್ನು - ಕೆಂಪು, ಕಿತ್ತಳೆ ಎ, ಕಿತ್ತಳೆ ಬಿ ಮತ್ತು ಹಸಿರು ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಕೆಂಪು ವಲಯದಲ್ಲಿರುವ ಜಿಲ್ಲೆಗಳಾದ- ಕಾಸರಗೋಡು, ಕಣ್ಣೂರು, ಕೋಝಿಕೋಡ್, ಮಲಪ್ಪುರಂಗಳಲ್ಲಿ ಈಗಿರುವ ಲಾಕ್‌ಡೌನ್‌ನಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಈ ಪ್ರತೀ ಜಿಲ್ಲೆಗಳಲ್ಲಿ ಹಾಟ್‌ಸ್ಪಾಟ್‌ಗಳನ್ನು ಸೀಲ್ ಮಾಡಲಾಗಿದ್ದು ಇಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ಅಗತ್ಯವಸ್ತು/ ಸೇವೆಗಳ ಪೂರೈಕೆಗೆ ಮಾತ್ರ ಎರಡು ಪಾಯಿಂಟ್‌ಗಳನ್ನು ತೆರೆದಿಡಲಾಗುವುದು.

 ವಲಯ ವರ್ಗೀಕರಣದ ಆಧಾರದಲ್ಲಿ ಇತರ ಪ್ರದೇಶಗಳಲ್ಲಿ ಸಮ-ಬೆಸ ಯೋಜನೆಯಂತೆ ಜಿಲ್ಲೆಯೊಳಗೆ ಸೀಮಿತವಾಗಿ ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು. ಹೋಟೆಲ್‌ಗಳ ಒಳಗೆ ಕುಳಿತು ಉಪಾಹಾರ ಸೇವಿಸಲು ರಾತ್ರಿ 7 ಗಂಟೆಯವರೆಗೆ ಅವಕಾಶವಿದ್ದರೆ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್ ಒಯ್ಯಲು ಅವಕಾಶವಿರುತ್ತದೆ. ಜಿಲ್ಲೆಯೊಳಗೆ ಕಡಿಮೆ ದೂರದ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಈ ಎಲ್ಲಾ ಸೇವೆಗಳಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಅನ್ವಯಿಸುತ್ತದೆ. ಕಿತ್ತಳೆ ಎ ವಲಯದಲ್ಲಿರುವ ಪಟ್ಟಣಂತಿಟ್ಟ, ಎರ್ನಾಕುಳಂ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿ ಎಪ್ರಿಲ್ 24ರಿಂದ ಲಾಕ್‌ಡೌನ್‌ನಿಂದ ಆಂಶಿಕ ರಿಯಾಯಿತಿ ಲಭಿಸುತ್ತದೆ. ಕಿತ್ತಳೆ ಬಿ ವಲಯದಲ್ಲಿರುವ ಅಳಪ್ಪುಝ, ತ್ರಿವೇಂಡ್ರಮ್, ಪಾಲಕ್ಕಾಡ್, ವಯನಾಡ್ ಮತ್ತು ತ್ರಿಶೂರ್‌ನಲ್ಲಿಯೂ ಆಂಶಿಕ ರಿಯಾಯಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳು ಹಸಿರು ವಲಯದಲ್ಲಿದ್ದು ಇಲ್ಲಿ ಸೋಮವಾರದಿಂದ ನಿರ್ಬಂಧ ತೆರವುಗೊಳಿಸಲಾಗುವುದು.

ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣ ಕಳೆದ ಕೆಲ ದಿನಗಳಿಂದ ಕಡಿಮೆಯಾಗಿದೆ. ಹೊಸ ಸೋಂಕು ಪ್ರಕರಣ ಏಕ ಅಂಕಿಯ ಮಟ್ಟಕ್ಕೆ ಇಳಿದಿದ್ದು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಪ್ರಮಾಣ ಹೆಚ್ಚಿದೆ. ಕಳೆದ 7 ದಿನಗಳಲ್ಲಿ ಕೇವಲ 32 ಹೊಸ ಪ್ರಕರಣ ದಾಖಲಾಗಿದ್ದು ಇದೇ ಅವಧಿಯಲ್ಲಿ 129 ರೋಗಿಗಳು ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News