ಮೇ 3ರ ಬಳಿಕವೂ ರೈಲು, ವಿಮಾನಗಳ ಪುನರಾರಂಭ ಸಾಧ್ಯತೆ ಇಲ್ಲ

Update: 2020-04-19 06:01 GMT

 ಹೊಸದಿಲ್ಲಿ, ಎ.19: ಭಾರತದಲ್ಲಿ 15,000ಕ್ಕೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ವೈರಸ್ ವಿರುದ್ಧ ಹೋರಾಟದಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದೇ ಚಿಂತೆಯ ವಿಚಾರವಾಗಿದೆ.ಹೀಗಾಗಿ ಮೇ 3ರ ಬಳಿಕ ರೈಲುಗಳು ಹಾಗೂ ವಿಮಾನಗಳ ಸಂಚಾರ ಪುನರಾರಂಭವಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 25ರಿಂದ ಆರಂಭವಾಗಿರುವ ಲಾಕ್‌ಡೌನ್‌ನ್ನು ಈ ವಾರ ಮೇ 3ರ ತನಕ ವಿಸ್ತರಿಸಿದ್ದರು. ಮೇ 3ರ ಬಳಿಕ ಬುಕ್ಕಿಂಗ್ ಆರಂಭಿಸದಂತೆ ಎಲ್ಲ ಏರ್‌ಲೈನ್ಸ್‌ಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇ 4ರಿಂದ ಕೆಲವು ದೇಶಿಯ ಮಾರ್ಗಗಳು ಹಾಗೂ ಜೂ.1ರ ಬಳಿಕ ಅಂತರ್‌ರಾಷ್ಟ್ರೀಯ ರೂಟ್‌ಗಳ ಪ್ರಯಾಣಕ್ಕೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಏರ್‌ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿತ್ತು. ಏರ್‌ಇಂಡಿಯಾ ಪ್ರಕಟನೆಯ ಕೆಲವೇ ಗಂಟೆಗಳ ಬಳಿಕ ಶನಿವಾರ ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸುವ ಬಗ್ಗೆ ತಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿತ್ತು.

ದೇಶಿಯ ಅಥವಾ ಅಂತರ್‌ರಾಷ್ಟ್ರೀಯ ವಿಮಾನ ಹಾರಾಟ ಚಟುವಟಿಕೆಯನ್ನು ಆರಂಭಿಸುವ ಕುರಿತು ಈವರೆಗೆ ಯಾವುದೇ ನಿರ್ಧಾರವನ್ನು ತೆಗದುಕೊಂಡಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಸರಕಾರ ಈ ಕುರಿತು ನಿರ್ಧಾರ ಕೈಗೊಂಡ ಬಳಿಕವಷ್ಟೇ ಬುಕ್ಕಿಂಗ್ ಆರಂಭಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News