​ಫ್ಯಾಕ್ಟ್ ಚೆಕ್ : ಹಳೆ ವಿಡಿಯೋವನ್ನು ಮೂರು ಬಾರಿ ತೋರಿಸಿ ಜಾಮಾ ಮಸೀದಿಯಲ್ಲಿ ಜುಮಾ ನಡೆಯುತ್ತಿದೆ ಎಂದ News24 ಚಾನಲ್

Update: 2020-04-19 14:37 GMT

ಎಪ್ರಿಲ್ 17 ರಂದು ಹಿಂದಿ ನ್ಯೂಸ್ ಚಾನಲ್ News24 ತನ್ನ ಫೇಸ್ ಬುಕ್ ಪೇಜ್ ನಲ್ಲಿ " ಕರೋನ ನೇ ಬದ್ಲಾ ಇಬಾದತ್ ಕಿ ತರೀಕ , ದಿಲ್ಲಿ ಕೆ ಜಾಮಾ ಮಸ್ಜಿದ್ ಕಾ ಮಾಹೋಲ್ ಕ್ಯಾ ಹೈ ? ( ಕೊರೊನದಿಂದ ಬದಲಾಯಿತು ಆರಾಧನೆಯ ಶೈಲಿ, ದಿಲ್ಲಿಯ ಜಾಮಾ ಮಸೀದಿಯಲ್ಲಿ ಹೇಗಿದೆ ವಾತಾವರಣ ?) ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿತು.

ಕಾರ್ಯಕ್ರಮ ಪ್ರಾರಂಭದಿಂದಲೇ ನಿರೂಪಕ  " ಕೊರೋನದಿಂದಾಗಿ ಇಸ್ಲಾಮಿಕ್ ದೇಶಗಳಲ್ಲಿ ಪ್ರಾರ್ಥನೆ ಕುರಿತು ಹೊಸ ನಿಯಮಗಳನ್ನು ತಂದಿದ್ದಾರೆ. ಅಲ್ಲಿ ಮಸೀದಿಗೆ ಹೋಗದೆ ಮನೆಯಲ್ಲೇ ನಮಾಝ್ ಮಾಡುವಂತೆ ಹೇಳಲಾಗಿದೆ. ಆದರೆ ದಿಲ್ಲಿಯ ಜಾಮಾ ಮಸೀದಿಯಲ್ಲಿ ಮಾತ್ರ ಎಂದಿನಂತೆ ಶುಕ್ರವಾರದ ಜುಮಾ ನಮಾಝ್ ನಡೆಯುತ್ತಿದೆ. ಲಾಕ್ ಡೌನ್ ಇದ್ದರೂ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಇಲ್ಲಿ ಜನ ಜುಮಾ ನಮಾಝ್ ಗೆ ಬಂದು ಸೇರಿದ್ದಾರೆ " ಎಂದು ಹೇಳುತ್ತಾರೆ.

ಆದರೆ News24 ಹಾಕಿದ್ದ ವಿಡಿಯೋ  ಒಂದು ತಿಂಗಳು ಹಳೆಯದ್ದು ಎಂದು ತೋರಿಸಿಕೊಟ್ಟ ಮೇಲೆ ಚಾನಲ್ ಆ ವಿಡಿಯೋವನ್ನು ಹಿಂದೆಗೆಯಿತು. ಆ ವಿಡಿಯೋ ಮಾರ್ಚ್ 13ಕ್ಕೆ ಮೊದಲ ಬಾರಿ  ಪ್ರಸಾರ ಆಗಿತ್ತು. " ಕಣ್ತಪ್ಪಿನಿಂದ ಹಳೆ ವಿಡಿಯೋ ಪ್ರಸಾರವಾಗಿದೆ. ಅದು ಉದ್ದೇಶಪೂರ್ವಕ ಅಲ್ಲ " ಎಂದು ಚಾನಲ್ ಹೇಳಿತು. ಆದರೆ ಆ ತಪ್ಪಿಗಾಗಿ ಅದು ಕ್ಷಮೆ ಕೇಳಲಿಲ್ಲ. ಆದರೆ ಚಾನಲ್ ಈ ಸ್ಪಷ್ಟೀಕರಣ ನೀಡುವ ಮೊದಲೇ ಆ ವಿಡಿಯೋವನ್ನು ಡೌನ್ ಲೋಡ್ ಮಾಡಿಕೊಂಡ ದೊಡ್ಡ ಸಂಖ್ಯೆಯ ಜನರು  ಅದನ್ನು ಎಲ್ಲೆಡೆ ಹರಡಿಬಿಟ್ಟಿದ್ದರು. ಆದರೆ ಕಣ್ತಪ್ಪಿನಿಂದ ಈ ಹಳೆ ವಿಡಿಯೋ ಮತ್ತೆ ಪ್ರಸಾರವಾಗಿದೆ ಎಂಬ News24 ಹೇಳಿಕೆ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಇದಕ್ಕೆ ಕಾರಣ ಆ ಚಾನಲ್ ಮಾರ್ಚ್ 13 ಕ್ಕೆ ಪ್ರಥಮ ಬಾರಿ ಪ್ರಸಾರ ಮಾಡಿದ ಆ ವಿಡಿಯೋವನ್ನು ಒಟ್ಟು ಮೂರು ಬಾರಿ ಮತ್ತೆ ಪ್ರಸಾರ ಮಾಡಿದೆ. ಅದೇ ವಿಡಿಯೋವನ್ನು ಚಾನಲ್ ಮಾರ್ಚ್ 19 ಹಾಗು ಎಪ್ರಿಲ್ 1 ರಂದು ಕೂಡ ಪ್ರಸಾರ ಮಾಡಿತ್ತು. ಮಾರ್ಚ್ 13 ಕ್ಕೆ ಆ ವಿಡಿಯೋ ಮೊದಲು ಪ್ರಸಾರವಾದಾಗ ದೇಶದಲ್ಲಿ ಕೊರೋನ ವಿಷಯ ಇನ್ನೂ ಗಂಭೀರ ವಿಷಯವಾಗಿರಲಿಲ್ಲ. ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯವೇ ಕೊರೋನ ಅರೋಗ್ಯ ತುರ್ತು ಪರಿಸ್ಥಿತಿ ಅಲ್ಲ ಎಂದು ಹೇಳಿತ್ತು. ಆದರೆ ದಿಲ್ಲಿ ಸರಕಾರ 50ಕ್ಕಿಂತ  ಹೆಚ್ಚು ಜನ ಧಾರ್ಮಿಕ, ರಾಜಕೀಯ ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂದು ಆದೇಶ ಹೊರಡಿಸಿದ ಬಳಿಕ ಮಾರ್ಚ್ 19 ರಂದು News24 ಮತ್ತೆ ಆ ವಿಡಿಯೋ ಪ್ರಸಾರ ಮಾಡಿತ್ತು. ಮತ್ತೆ ಎಪ್ರಿಲ್ 1 ರಂದು ದೇಶಾದ್ಯಂತ ಲಾಕ್ ಡೌನ್ ಚಾಲ್ತಿಯಲ್ಲಿರುವಾಗ ಮತ್ತೆ ಆ ವಿಡಿಯೋವನ್ನು ಪ್ರಸಾರ ಮಾಡಿತು. ಈಗ ಮತ್ತೆ ದೇಶಾದ್ಯಂತ ಮುಸ್ಲಿಮರೇ ಕೊರೋನ ಹರಡುತ್ತಿದ್ದಾರೆ  ಎಂಬ ಅಪಪ್ರಚಾರ ವ್ಯಾಪಕವಾಗಿರುವಾಗ ಮತ್ತೆ ಎಪ್ರಿಲ್ 17 ರಂದು ಮತ್ತೆ ಪ್ರಸಾರ ಮಾಡಿದೆ.

ಕೃಪೆ : altnews.in

Full View

Writer - ಪೂಜಾ ಚೌಧರಿ, altnews.in

contributor

Editor - ಪೂಜಾ ಚೌಧರಿ, altnews.in

contributor

Similar News