ಮುಸ್ಲಿಂ ರೋಗಿಗಳ ದಾಖಲಾತಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ ಎಂದ ಆಸ್ಪತ್ರೆಯ ವಿರುದ್ಧ ಪ್ರಕರಣ

Update: 2020-04-19 16:08 GMT

ಮೀರತ್,ಎ.19: ಉತ್ತರ ಪ್ರದೇಶದ ಮೀರತ್‌ನ ಖಾಸಗಿ ಕ್ಯಾನ್ಸರ್ ಆಸ್ಪತ್ರೆಯೊಂದು ಶುಕ್ರವಾರ ಸ್ಥಳೀಯ ವೃತ್ತಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸಿ,ಕೊರೋನ ವೈರಸ್ ಸೋಂಕು ಇಲ್ಲವೆಂಬ ಪರೀಕ್ಷಾ ವರದಿಯನ್ನು ತರದ ಹೊಸ ಮುಸ್ಲಿಂ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ನಂತರ ಪೊಲೀಸರು ಆಸ್ಪತ್ರೆಯ ಮಾಲಿಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಹೊಸ ಮುಸ್ಲಿಮ್ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವವರು ಕೊರೋನ ವೈರಸ್ ನೆಗೆಟಿವ್ ಪರೀಕ್ಷಾ ವರದಿಗಳನ್ನು ಸಲ್ಲಿಸದಿದ್ದರೆ ಅವರನ್ನು ದಾಖಲು ಮಾಡಿಕೊಳ್ಳುವುದಿಲ್ಲ ಎಂದು ವೆಲೆಂಟಿಸ್ ಹಾಸ್ಪಿಟಲ್ ತನ್ನ ಜಾಹೀರಾತಿನಲ್ಲಿ ತಿಳಿಸಿತ್ತು.

  ಹಲವಾರು ರೋಗಿಗಳು ಮಾಸ್ಕ್ ಬಳಕೆಯಂತಹ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಮತ್ತು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರ ರೋಗಿಗಳ ಸುರಕ್ಷತೆಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿರುವ ಜಾಹೀರಾತು, ಕೆಲವು ಮುಸ್ಲಿಮರ ಅಜ್ಞಾನದಿಂದಾಗಿ ಪ್ರತಿಯೊಬ್ಬರೂ ತೊಂದರೆ ಅನುಭವಿಸುವಂತಾಗಿದೆ. ಆದರೆ ಆಸ್ಪತ್ರೆಯ ನಿರ್ಧಾರವು ಸಾರ್ವಜನಿಕರ ಮತ್ತು ಮುಸ್ಲಿಂ ಬಾಂಧವರ ಹಿತಾಸಕ್ತಿಯಿಂದ ಕೂಡಿದೆ. ಆಸ್ಪತ್ರೆಯು ರೋಗಿಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ ಮತ್ತು ಅದು ಈ ಹಿಂದೆ ಹಲವಾರು ಮುಸ್ಲಿಮರಿಗೆ ಚಿಕಿತ್ಸೆ ನೀಡಿದೆ ಎಂದು ಸಮಜಾಯಿಷಿ ಕೊಟ್ಟಿದೆ.

ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರನ್ನು ದಾಖಲಿಸಿಕೊಳ್ಳಲಾಗುವುದು. ಆದರೆ ಅವರ ಗಂಟಲಿನ ದ್ರಾವಣವನ್ನು ಪರೀಕ್ಷೆಗಾಗಿ ಮೀರತ್ ಮೆಡಿಕಲ್ ಕಾಲೇಜಿಗೆ ಕಳಹಿಸಲಾಗುವುದು ಮತ್ತು ರೋಗಿಗಳು 4,500 ರೂ.ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದಿರುವ ಜಾಹೀರಾತು,ಮುಸ್ಲಿಮ್ ವೈದ್ಯರು,ಅರೆ ವೈದ್ಯಕೀಯ ಸಿಬ್ಬಂದಿಗಳು, ನ್ಯಾಯಾಧೀಶರು, ಪೊಲೀಸ್ ಸಿಬ್ಬಂದಿಗಳು ,ಶಿಕ್ಷಕರು ಮತ್ತು ನಿಬಿಡ ಜನಸಾಂದ್ರತೆಯ ಪ್ರದೇಶಗಳಲ್ಲಿ ವಾಸವಿರದವರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದಿದೆ.

ಮೀರತ್‌ನ ಕೋವಿಡ್-19 ರೋಗಿಗಳು ಮಾರ್ಚ್‌ನಲ್ಲಿ ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಸಮಾವೇಶದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದೂ ಆಸ್ಪತ್ರೆಯು ಹೇಳಿದೆ.

ಕುತೂಹಲದ ವಿಷಯವೆಂದರೆ ಇದೇ ಜಾಹೀರಾತಿನಲ್ಲಿ ಹಿಂದು ಮತ್ತು ಜೈನರನ್ನೂ ಗುರಿಯಾಗಿಸಿಕೊಳ್ಳಲಾಗಿದೆ. ಇವೆರಡೂ ಸಮುದಾಯಗಳ ಶ್ರೀಮಂತ ವರ್ಗಗಳನ್ನು ‘ಜಿಪುಣರು’ಎಂದು ಆರೋಪಿಸಿರುವ ಆಸ್ಪತ್ರೆಯು ಪ್ರಧಾನಿ ನರೇಂದ್ರ ಮೋದಿಯವರ ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆಗಳನ್ನು ನೀಡುವಂತೆ ಆಗ್ರಹಿಸಿದೆ.

ಜಾಹೀರಾತಿಗೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಅಸ್ಪತ್ರೆಯು ಇನ್ನೊಂದು ಜಾಹೀರಾತನ್ನು ಪ್ರಕಟಿಸಿ ಸ್ಪಷ್ಟನೆಯನ್ನು ನೀಡಿದೆ. ಆದರೆ ಆಸ್ಪತ್ರೆಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News