ಭಾರತದ ಹೊಸ ಎಫ್‌ಡಿಐ ನಿಯಮಕ್ಕೆ ಚೀನಾ ಆಕ್ರೋಶ

Update: 2020-04-20 18:20 GMT

ಹೊಸದಿಲ್ಲಿ, ಎ.20: ಭಾರತವು ವಿದೇಶಿ ನೇರ ಬಂಡವಾಳ ನೀತಿಗೆ ತಿದ್ದುಪಡಿ ತಂದು ರೂಪಿಸಿರುವ ಹೊಸ ನಿಯಮ ವಿಶ್ವ ವ್ಯಾಪಾರ ಸಂಘಟನೆ(ಡಬ್ಲುಟಿಒ)ಯ ತಾರತಮ್ಯರಹಿತ ಮತ್ತು ಮುಕ್ತ ವ್ಯಾಪಾರ ತತ್ವದ ಉಲ್ಲಂಘನೆಯಾಗಿದೆ ಎಂದು ಚೀನಾ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ.

  ಕೆಲವು ನಿರ್ದಿಷ್ಟ ದೇಶಗಳಿಗೆ ಸಂಬಂಧಿಸಿ ಹೆಚ್ಚುವರಿ ನಿರ್ಬಂಧಗಳನ್ನು ಭಾರತ ರೂಪಿಸಿರುವುದು ವಿಶ್ವ ವ್ಯಾಪಾರ ಸಂಘಟನೆಯ ತಾರತಮ್ಯರಹಿತ ತತ್ವದ ಉಲ್ಲಂಘನೆಯಾಗಿದ್ದು, ಉದಾರೀಕರಣ ಮತ್ತು ವ್ಯಾಪಾರ ಹಾಗೂ ಹೂಡಿಕೆಯ ಸಾಮಾನ್ಯ ಧೋರಣೆಗೆ ವಿರುದ್ಧವಾಗಿದೆ. ಈ ತಾರತಮ್ಯ ನೀತಿಯನ್ನು ಭಾರತ ಪರಿಷ್ಕರಿಸುತ್ತದೆ ಮತ್ತು ವಿವಿಧ ದೇಶಗಳಿಂದ ಹರಿದು ಬರುವ ಹೂಡಿಕೆಯನ್ನು ಸಮಾನವಾಗಿ ಪರಿಗಣಿಸುವುದರ ಜೊತೆಗೆ ಮುಕ್ತ, ನ್ಯಾಯೋಚಿತ ಮತ್ತು ನ್ಯಾಯಸಮ್ಮತ ವ್ಯಾಪಾರ ವಾತಾವರಣವನ್ನು ನಿರ್ಮಿಸುವುದಾಗಿ ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಚೀನಾದ ರಾಯಭಾರ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಕೊರೋನ ವೈರಸ್ ಸೋಂಕಿನಿಂದ ಉದ್ಭವಿಸಿರುವ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯ ಲಾಭ ಪಡೆದುಕೊಂಡು ಭಾರತದ ಸಂಸ್ಥೆಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡಿ ಅದರ ನಿಯಂತ್ರಣ ಪಡೆಯುವ ಚೀನಾದ ತಂತ್ರದ ಹಿನ್ನೆಲೆಯಲ್ಲಿ, ಶನಿವಾರ ಕೇಂದ್ರ ಸರಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮವನ್ನು ಬಿಗಿಗೊಳಿಸಿದೆ. ಚೀನಾದ ನಡೆಯಿಂದ ಶಂಕೆಗೊಂಡಿರುವ ಆಸ್ಟ್ರೇಲಿಯಾ ಮತ್ತು ಜರ್ಮನಿ ದೇಶಗಳೂ ತಮ್ಮ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಬಿಗಿಗೊಳಿಸಿವೆ.

ಹೊಸ ನಿಯಮದ ಪ್ರಕಾರ, ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ದೇಶಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮುನ್ನ ಸರಕಾರದ ಅನುಮತಿ ಪಡೆಯಬೇಕಿದೆ. ಹಳೆಯ ನಿಯಮದಲ್ಲಿ, ಭಾರತದ ನೆರೆರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೂಲದ ಹೂಡಿಕೆಗೆ ಮಾತ್ರ ಹೆಚ್ಚಿನ ನಿಬರ್ಂಧವಿತ್ತು. ಹೊಸ ನಿಯಮದಲ್ಲಿ ಚೀನಾ, ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ಗಳನ್ನೂ ಸೇರಿಸಲಾಗಿದೆ.

ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಕ್ರಿಯೆ ಎರಡು ರೀತಿಯಲ್ಲಿ ನಡೆಯುತ್ತಿದೆ. ಮೊದಲನೆಯದು, ಸ್ವಯಂಚಾಲಿತ ವಿಧಾನ. ಈ ವಿಧಾನದಲ್ಲಿ ವಿದೇಶಿ ಸಂಸ್ಥೆಗಳು ಹೂಡಿಕೆ ಮಾಡಲು ಕೇಂದ್ರ ಸರಕಾರದ ಅನುಮತಿಯ ಅಗತ್ಯವಿಲ್ಲ. ಎರಡನೆಯದು, ಸರಕಾರದ ಅನುಮತಿ ಪಡೆದು ಹೂಡಿಕೆ ಮಾಡುವುದು. ಶನಿವಾರ ಕೇಂದ್ರ ಸರಕಾರ, ಚೀನಾದ ಸಂಸ್ಥೆಗಳು ಸ್ವಯಂಚಾಲಿತ ವಿಧಾನದಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.

 ಎಫ್‌ಡಿಐ ನೀತಿಯಲ್ಲಿ ಕೇಂದ್ರ ಸರಕಾರ ಬದಲಾವಣೆ ಮಾಡಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನನ್ನ ಎಚ್ಚರಿಕೆಯನ್ನು ಪರಿಗಣಿಸಿ ಎಫ್‌ಡಿಐ ನೀತಿಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಚೀನಾವು ಭಾರತದ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ಎಚ್‌ಡಿಎಫ್‌ಸಿಯ 1.01% ಶೇರುಗಳನ್ನು ಚೀನಾ ಖರೀದಿಸಿರುವುದು ಇದಕ್ಕೆ ಉತ್ತಮ ಉದಾಹರಣೆ ಎಂದು ಎಪ್ರಿಲ್ 12ರಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News