ತೆಲಂಗಾಣದಿಂದ ಛತ್ತೀಸ್‌ಗಢಕ್ಕೆ ನಡೆದುಕೊಂಡೇ ತೆರಳಿ ಮನೆಯ ಸಮೀಪವೇ ಮೃತಪಟ್ಟ ಬಾಲಕಿ

Update: 2020-04-21 18:20 GMT
ಸಾಂದರ್ಭಿಕ ಚಿತ್ರ

ರಾಯಪುರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗ್ರಾಮದಲ್ಲಿನ ತನ್ನ ಮನೆಯಿಂದ ಎರಡು ತಿಂಗಳ ಹಿಂದೆ ತೆಲಂಗಾಣದ ಮೆಣಸಿನ ತೋಟದಲ್ಲಿ ಕೆಲಸಕ್ಕೆಂದು ತೆರಳಿದ್ದ 12 ವರ್ಷದ ಬಾಲಕಿಯೊಬ್ಬಳು ಲಾಕ್​ಡೌನ್ ಹಿನ್ನೆಲೆಯಲ್ಲಿ ತನ್ನ ಮನೆಗೆ ಹಿಂದಿರುಗುವ ಯತ್ನವಾಗಿ ಮೂರು ದಿನ ಪರ್ಯಂತ 150ಕ್ಕೂ ಹೆಚ್ಚು ಕಿಮೀ ದೂರ ಕ್ರಮಿಸಿ ಕೊನೆಗೆ ಮನೆ ತಲುಪಲು ಇನ್ನೇನು ಕೆಲವೇ ಕಿಲೋಮೀಟರ್ ಇದೆ ಎನ್ನುವಾಗ ತೀವ್ರ ಸುಸ್ತಿನಿಂದ ಕುಸಿದು ಸಾವನ್ನಪ್ಪಿದ್ದಾಳೆ ಎಂದು ndtv.com ವರದಿ ಮಾಡಿದೆ.

ತನ್ನ ಕುಟುಂಬಕ್ಕೆ ಆಧಾರವಾಗಲು ಮೆಣಸಿನ ತೋಟದಲ್ಲಿ ದುಡಿಯುತ್ತಿದ್ದ ಈ ಬಾಲಕಿ ತನ್ನ ಹೆತ್ತವರ ಏಕೈಕ ಪುತ್ರಿಯಾಗಿದ್ದಳು. ಎಪ್ರಿಲ್ 15ರಂದು 11 ಮಂದಿ ಇತರರೊಂದಿಗೆ ಮನೆಯತ್ತ ನಡೆದಿದ್ದ ಆಕೆ ಸತತ ಮೂರು ದಿನಗಳ ಕಾಲ ನಡೆದಿದ್ದಳು. ಮನೆ ತಲುಪಲು ಇನ್ನೇನು 14 ಕಿಮೀ ಇದೆ ಎನ್ನುವಾಗ ಹೊಟ್ಟೆಯಲ್ಲಿ ಕಾಣಿಸಿಕೊಂಡ ತೀವ್ರ ನೋವಿನಿಂದ ವಾಂತಿ ಮಾಡಿ ಆಕೆ ಕುಸಿದಿದ್ದಳು. ಆಕೆ ತೀವ್ರ ಡಿಹೈಡ್ರೇಶನ್‍ನಿಂದ ಬಳಲುತ್ತಿದ್ದಳಲ್ಲದೆ ಸಾಕಷ್ಟು ಆಹಾರವೂ ಸೇವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.  ಆಕೆಯ ಕೊರೋನ ವೈರಸ್ ಪರೀಕ್ಷೆ ನೆಗೆಟಿವ್ ಬಂದಿತ್ತು.

ಆದರೆ ಬಾಲಕಿ ಮೃತಪಟ್ಟ ವಿಷಯವನ್ನು ಕುಟುಂಬದವರಿಗೆ ಹೇಳಲು ಸಾಧ್ಯವಾಗಲಿಲ್ಲ. ಈ ಗುಂಪಿನಲ್ಲಿದ್ದ ಒಬ್ಬನ ಬಳಿ ಮೊಬೈಲ್ ಇದ್ದರೂ ಅದರ ಬ್ಯಾಟರಿ ಖಾಲಿಯಾಗಿತ್ತು. ಬಾಲಕಿಯ ಮೃತದೇಹವನ್ನು ಹೊತ್ತುಕೊಂಡೇ ಮುಂದಿನ ಗ್ರಾಮವನ್ನು ತಲುಪಿದ ಬಳಿಕ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಬಾಲಕಿ ಮೃತಪಟ್ಟ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿದ ಆರೋಗ್ಯ ಕಾರ್ಯಕರ್ತರು ಈ ತಂಡವನ್ನು ಭಂಡಾರ್‌ಪಲ್ ಗ್ರಾಮದ ಹೊರವಲಯದಲ್ಲಿ ಪತ್ತೆಹಚ್ಚಿದೆ ಎಂದು ಬಿಜಾಪುರ ಜಿಲ್ಲಾ ವೈದ್ಯಾಧಿಕಾರಿ ಡಾ ಬಿಆರ್ ಪುಜಾರಿ ಹೇಳಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತಂಡದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದವರು ಹೇಳಿದ್ದಾರೆ.

ಕೊನೆಗೆ ಆಕೆಯ ಮೃತದೇಹವನ್ನು ಆ್ಯಂಬುಲೆನ್ಸ್ ನಲ್ಲಿ ಆಕೆಯ ಮನೆಗೆ ಸಾಗಿಸಲಾಯಿತು. ರಾಜ್ಯ ಸರಕಾರ ಆಕೆಯ ಕುಟುಂಬಕ್ಕೆ ರೂ. 1 ಲಕ್ಷ ಪರಿಹಾರಧನ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News