ಮೋದಿ ವಿರುದ್ಧದ ಹಳೆಯ ಟ್ವೀಟ್ ಕಿತ್ತುಹಾಕಲು ಪೊಲೀಸ್ ಅಧಿಕಾರಿಗೆ ತಾಕೀತು

Update: 2020-04-22 04:24 GMT

ಹೊಸದಿಲ್ಲಿ, ಎ.22: ಸಾಮಾಜಿಕ ಜಾಲತಾಣದ ಪೋಸ್ಟ್‌ಗಾಗಿ ಪತ್ರಕರ್ತರೊಬ್ಬರನ್ನು ವಿಚಾರಣೆಗೆ ಗುರಿಪಡಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರ ಬಗೆಗೆ ಮಾಡಿದ ಹಳೆಯ ಟ್ವೀಟ್ ಒಂದನ್ನು ಅಳಿಸಿ ಹಾಕುವಂತೆ ಜಮ್ಮು ಮತ್ತು ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ತಾಕೀತು ಮಾಡಲಾಗಿದೆ.

ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಸೈಬರ್ ಸೆಲ್ ಮುಖ್ಯಸ್ಥ ತಾಹೀರ್ ಅಶ್ರಫ್ ಅವರು 2013ರಲ್ಲಿ ಮಾಡಿದ್ದ ಟ್ವೀಟನ್ನು ಡಿಲೀಟ್ ಮಾಡಿಸಲಾಗಿದೆ. ಅಶ್ರಫ್ ಅವರು ಈ ಟ್ವೀಟ್‌ನಲ್ಲಿ ಪ್ರಧಾನಿಯವರನ್ನು 'ಸ್ಯಾಡಿಸ್ಟಿಕ್' ಎಂದು ಕರೆದಿದ್ದರು.

2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಎನ್‌ಡಿಟಿವಿಗೆ ನೀಡಿದ ಸಂದರ್ಶನವನ್ನು ಪೊಲೀಸ್ ಅಧಿಕಾರಿ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಈ ಸಂದರ್ಶನದಲ್ಲಿ, ಒಂದು ನಾಯಿ ಕಾರಿನ ಅಡಿ ಬಿದ್ದರೂ ನನಗೆ ನೋವಾಗುತ್ತದೆ ಎಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಶ್ರಫ್, 2002ರ ಗಲಭೆಯನ್ನು ನಾಯಿಮರಿ ಕಾರಿನಡಿ ಬಿದ್ದುದಕ್ಕೆ ಹೋಲಿಸಿರುವ ನರೇಂದ್ರ ಮೋದಿಯವರ ಕ್ರಮ ಅವರ ನಿಜ ಸ್ಯಾಡಿಸ್ಟಿಕ್ (ವಿಘ್ನ ಸಂತೋಷಿ) ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಾಗಿ ಪತ್ರಿಕಾ ಛಾಯಾಗ್ರಾಹಕಿಯೊಬ್ಬರ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ಟ್ವೀಟ್ ಮುನ್ನಲೆಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News