ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರೆ ಭಾರೀ ದಂಡ, 7 ವರ್ಷ ತನಕ ಜೈಲು

Update: 2020-04-22 11:08 GMT

ಹೊಸದಿಲ್ಲಿ: ದೇಶದ ಹಲವೆಡೆ ಕೊರೋನ ವಾರಿಯರ್ಸ್ ವಿರುದ್ಧ ದಾಳಿ, ಹಲ್ಲೆ ಹಾಗೂ ನಿಂದನೆ ಪ್ರಕರಣಗಳು ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಇಂತಹ ಪ್ರಕರಣಗಳ ತಪ್ಪಿತಸ್ಥರಿಗೆ ಏಳು ವರ್ಷದ ತನಕ ಜೈಲು ಶಿಕ್ಷೆ ಹಾಗೂ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು ಎಂದು ಘೋಷಿಸಿದೆ. ಇಂದು ಅಪರಾಹ್ನ  ಜಾರಿಗೊಳಿಸಲಾದ ತುರ್ತು ಕಾರ್ಯಾಂಗ ಆದೇಶದಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಶ್ವಾಸನೆ ನೀಡಿದ ಬೆನ್ನಿಗೇ ಹೊಸ ಆದೇಶ ಜಾರಿಯಾಗಿದೆ. ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಗಳು ಜಾಮೀನುರಹಿತ  ಅಪರಾಧಗಳಾಗಲಿವೆ ಎಂದು ಕೇಂದ್ರ ಸರಕಾರ ಹೇಳಿದೆ.

“ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆದರೆ ತಪ್ಪಿತಸ್ಥರು 50,000 ರೂ.ದಿಂದ ರೂ. 2 ಲಕ್ಷ ದಂಡ ಪಾವತಿಸಬೇಕಾಗಿದೆ. ಗಂಭೀರ ಗಾಯಗಳುಂಟಾದ ಪ್ರಕರಣಗಳಲ್ಲಿ ದಂಡದ ಮೊತ್ತ ರೂ. 2 ಲಕ್ಷದಿಂದ ರೂ 5 ಲಕ್ಷ ತನಕ ಏರಿಕೆಯಾಗಲಿದೆ. ಇವುಗಳ ಹೊರತಾಗಿ ಅಷ್ಟೊಂದು ಗಂಭೀರವಲ್ಲದ ಪ್ರಕರಣಗಳಲ್ಲಿ ಕನಿಷ್ಠ ಆರು ತಿಂಗಳು ಹಾಗೂ ಗರಿಷ್ಠ 5 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲಾಗುವುದು, ಗಂಭೀರ ಪ್ರಕರಣಗಳಲ್ಲಿ ಜೈಲು ಶಿಕ್ಷೆಯ ಅವಧಿ 7 ವರ್ಷಗಳ ತನಕ ಇರಲಿದೆ,'' ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

“ತಿದ್ದುಪಡಿಗೊಂಡಿರುವ 120 ವರ್ಷ ಹಳೆಯದಾದ ಸಾಂಕ್ರಾಮಿಕ ರೋಗಗಳ ಕಾಯಿದೆಯು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ರಕ್ಷಿಸುವುದು, ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ವಿಮಾ ಸೌಲಭ್ಯವೂ ದೊರೆಯಲಿದೆ'' ಎಂದು ಸಚಿವರು ಹೇಳಿದರು.

ವೈದ್ಯಕೀಯ ಸಮುದಾಯದ ಮೇಲಿನ ದಾಳಿಗಳನ್ನು ವಿರೋಧಿಸಿ ಎಪ್ರಿಲ್ 23ರಂದು ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಐಎಂಎ ಮತ್ತಿತರ ಸಂಘಟನೆಗಳು ಘೋಷಿಸಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಸಂಘಟನೆಗಳನ್ನು ಸಂಪರ್ಕಿಸಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News