ಸೋನಿಯಾ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಅರ್ನಬ್ ಗೋಸ್ವಾಮಿ ಬಂಧನಕ್ಕೆ ಟ್ವಿಟರಿಗರ ಒತ್ತಾಯ

Update: 2020-04-22 13:59 GMT

ಪಾಲ್ಘರ್ ಸಾಧುಗಳ ಥಳಿಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅರ್ನಬ್ ಗೋಸ್ವಾಮಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ #ArrestAntiIndiaArnab ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ರಿಪಬ್ಲಿಕ್ ಟಿವಿಯಲ್ಲಿ ನಡೆದ ಪ್ಯಾನೆಲ್ ಚರ್ಚೆಯ ವೇಳೆ ಮಾತನಾಡಿದ್ದ ಅರ್ನಬ್, ಪಾಲ್ಘರ್ ಘಟನೆಗೆ ಸಂಬಂಧಿಸಿ ಸೋನಿಯಾ ಗಾಂಧಿ ಮೌನವಾಗಿದ್ದಾರೆ ಎಂದು ಆರೋಪಿಸಿದರು. “ಮೌಲ್ವಿಗಳು ಅಥವಾ ಕ್ರಿಶ್ಚಿಯನ್ನರ ಮೇಲೆ ಹಿಂದೂ ಸಂತರ ಮೇಲೆ ನಡೆದ ಹಾಗೆ ದಾಳಿ ನಡೆದಿದ್ದರೆ ದೇಶವು ಮೌನವಾಗಿರುತ್ತಿತ್ತೇ ಎಂದು ಕೇಳಲು ನಾನು ಬಯಸುತ್ತೇನೆ. ಇಟಲಿಯ ಅಂತೋನಿಯೋ ಮಹಿನೋ (ಸೋನಿಯಾ ಗಾಂಧಿ) ಮೌನವಾಗಿರುತ್ತಿದ್ದರೇ?, ನಿಮ್ಮ (ಕಾಂಗ್ರೆಸ್) ಪಕ್ಷದ ರೋಮ್ ನಿಂದ ಬಂದ ಇಟಲಿಯ ಸೋನಿಯಾ ಗಾಂಧಿ ಸುಮ್ಮನೆ ಕೂರುತ್ತಿರಲಿಲ್ಲ. ಇಂದು ಅವರು ಸುಮ್ಮನಿದ್ದಾರೆ. ಅವರ ಸರಕಾರವಿರುವಲ್ಲಿ ಸಂತರನ್ನು ಕೊಂದಿರುವುದರಿಂದ ಅವರು ಖುಷಿಯಾಗಿರಬಹುದು. ಅವರಿಗೆ ಇಟಲಿಗೆ ನಮ್ಮ ಸರಕಾರವಿರುವಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು ವರದಿ ನೀಡಬಹುದು. ಅಲ್ಲಿಂದ ಅವರಿಗೆ ವಾಹ್ ವಾಹ್ ಎಂದು ಹೇಳಬಹುದು” ಎಂದು ಅರ್ನಬ್ ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಅರ್ನಬ್ ಗೋಸ್ವಾಮಿಯ ಈ ವಿವಾದಾತ್ಮಕ ವಿಡಿಯೋ ವೈರಲ್ ಆಗುತ್ತಲೇ , ಅರ್ನಬ್ ರನ್ನು ಬಂಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, “ಸೋನಿಯಾ ಗಾಂಧಿ ವಿರುದ್ಧ ಅರ್ನಬ್ ವಾಗ್ದಾಳಿ ಖಂಡನೀಯ. ಅವರು ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಅವರಿಗೆ ನಾಚಿಕೆಯಾಗಬೇಕು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News