ಕೊರೋನದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ತಗಲದು ಎಂಬುದಕ್ಕೆ ಪುರಾವೆಯಿಲ್ಲ

Update: 2020-04-25 17:07 GMT

ಹೊಸದಿಲ್ಲಿ,ಎ.25: ಕೋವಿಡ್-19 ರೋಗದಿಂದ ಗುಣಮುಖಗೊಂಡವರಿಗೆ ಎರಡನೆ ಬಾರಿ ಕೊರೋನ ವೈರಸ್ ಸೋಂಕು ತಗಲುವುದಿಲ್ಲ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ತಿಳಿಸಿದೆ.

 ಕೊರೋನ ಸೋಂಕಿನಿಂದ ಗುಣುಖರಾದವರು ಮತ್ತೊಮ್ಮೆ ಕೊರೋನ ಸೋಂಕಿಗೆ ತುತ್ತಾಗದಂತೆ ತಡೆಯುವ ಪ್ರತಿಕಾಯ(ಆ್ಯಂಟಿಬಾಡಿ)ಗಳನ್ನು ಹೊಂದುತ್ತಾರೆಂಬುನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಅಂತಹವರಿಗೆ ‘ ರೋಗನಿರೋಧಕ ಶಕ್ತಿ ಪಾಸ್‌ಪೋರ್ಟ್ (ಇಮ್ಯೂನಿಟಿ ಪಾಸ್‌ಪೋರ್ಟ್) ಅಥವಾ ‘ ಅಪಾಯ ಮುಕ್ತ’ ಪ್ರಮಾಣಪತ್ರ (ರಿಸ್ಕ್ ಫ್ರೀ ಸರ್ಟಿಫಿಕೇಟ್)ವನ್ನು ನೀಡುವುದರ ವಿರುದ್ಧ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

  ಇಂತಹ ಕ್ರಮಗಳನ್ನು ಅನುಸರಿಸುವುದರಿಂದ, ರೋಗದಿಂದ ಚೇತರಿಸಿಕೊಂಡವರು ವೈರಸ್ ಸೋಂಕಿನ ವಿರುದ್ಧದ ನಿಗದಿತ ಮುನ್ನೆಚ್ಚರಿಕಾ ಸಲಹೆಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ರೋಗ ಹರಡುವಿಕೆ ಮುಂದುವರಿಯು ಭೀತಿಯಿದೆಯೆಂದು ಅದು ಹೇಳಿದೆ.

   ‘‘ ಕೋವಿಡ್-19 ರೋಗವನ್ನುಂಟು ಮಾಡುವ ಸಾರ್ಸ್-ಕೋವ್-2 ವೈರಸ್ ವಿರುದ್ಧದ ಪ್ರತಿಕಾಯಗಳು (ಆ್ಯಂಟಿಬಾಡಿಸ್) ಹೊಂದಿರುವ ವ್ಯಕ್ತಿಗಳಿಗೆ ‘ಇಮ್ಯೂನಿಟಿ ಪಾರ್ಸ್‌ ಪೋರ್ಟ್ ’ ಅಥವಾ ‘ಅಪಾಯ ಮುಕ್ತ ’ಪ್ರಮಾಣಪತ್ರವನ್ನು ನೀಡಬಹುದಾಗಿದೆ ಎಂದು ಕೆಲವು ಸರಕಾರಗಳು ಸೂಚನೆ ನೀಡಿವೆ. ಪ್ರತಿಕಾಯಗಳನ್ನು ಹೊಂದಿರುವವರು ಮರುಸೋಂಕಿಗೆ ಒಳಗಾಗುವುದರಿಂದ ರಕ್ಷಣೆಯನ್ನು ಪಡೆಯುವುದರಿಂದ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಅಥವಾ ಕೆಲಸಕ್ಕೆ ಮರಳಲು ಅವಕಾಶ ನೀಡಬಹುದಾಗಿದೆಯೆಂದು ಅವು ಸಲಹೆ ನೀಡಿದ್ದವು.

ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡವರಿಗೆ ಆರೋಗ್ಯ ಪಾಸ್‌ಪೋರ್ಟ್‌ಗಳನ್ನು ನೀಡುವುದಾಗಿ ಚಿಲಿ ಕಳೆದ ವಾರ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News