ಮಹಾರಾಷ್ಟ್ರದಲ್ಲಿ ನೂರಕ್ಕೂ ಅಧಿಕ ಪೊಲೀಸರಿಗೆ ಕೊರೋನ ಸೋಂಕು: ಇಬ್ಬರು ಮೃತ್ಯು

Update: 2020-04-26 15:02 GMT

ಮುಂಬೈ,ಎ.26: ದೇಶದಲ್ಲಿ ಕೊರೋನ ವೈರಸ್‌ನಿಂದಾಗಿ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ಈ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನೂರಕ್ಕೂ ಅಧಿಕ ಪೊಲೀಸರು ಸೋಂಕಿಗೆ ಗುರಿಯಾಗಿದ್ದು,ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.

ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಇಬ್ಬರು ಪೊಲೀಸರು ಬಲಿಯಾಗಿರುವುದು ನೋವನ್ನುಂಟು ಮಾಡಿದೆ. ಸರಕಾರದ ನೀತಿಯಂತೆ ಅವರ ಕುಟುಂಬಗಳಿಗೆ ಎಲ್ಲ ನೆರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ರವಿವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 107 ಪೊಲೀಸರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಏಳು ಜನರು ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ 7,000ಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಹೆಡ್ ಕಾನ್‌ಸ್ಟೇಬಲ್‌ಗಳಾದ ಚಂದ್ರಕಾಂತ ಪೆಂಡುರ್ಕರ್ (57) ಮತ್ತು ಸಂದೀಪ ಸುರ್ವೆ (52) ಅವರು ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮುಂಬೈ ಪೊಲೀಸ್ ಟ್ವೀಟಿಸಿದೆ.

ನವಿ ಮುಂಬೈನಲ್ಲಿ ಕೊರೋನ ವೈರಸ್ ಪಾಸಿಟಿವ್ ವರದಿ ಬಂದಿರುವ ಪೊಲೀಸ್ ಅಧಿಕಾರಿಯೋರ್ವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು,ಅವರ ಪುತ್ರಿಗೂ ಕೊರೋನ ವೈರಸ್ ಸೋಂಕು ತಗುಲಿದೆ.

ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕವನ್ನು ಸೃಷ್ಟಿಸಿದೆ. ಕೊರೋನ ವೈರಸ್ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವವರು ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನೆದುರಿಸುತ್ತಿದ್ದಾರೆ.

ಶನಿವಾರ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ ಟೋಪೆ ಅವರು ಕೊರೋನ ವೈರಸ್ ಹಾಟ್‌ಸ್ಪಾಟ್‌ಗಳಾಗಿರುವ ಮುಂಬೈ ಮತ್ತು ಪುಣೆಗಳಲ್ಲಿ ಲಾಕ್‌ಡೌನ್ ಅನ್ನು ಇನ್ನಷ್ಟು ಅವಧಿಗೆ ವಿಸ್ತರಿಸುವ ಸುಳಿವನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News