ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅಮಿತ್ ಖರೆ

Update: 2020-04-27 15:56 GMT

ಹೊಸದಿಲ್ಲಿ, ಎ.27: ಕಾರ್ಯದರ್ಶಿ ಮಟ್ಟದ 23 ಅಧಿಕಾರಿಗಳ ನೇಮಕಕ್ಕಾಗಿ ಕೇಂದ್ರವು ವಾರಾಂತ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ವರ್ಗಾವಣೆಗಳನ್ನು ಕೈಗೊಂಡಿದೆ. ಈ ತಿಂಗಳು ಏಳು ಕಾರ್ಯದರ್ಶಿಗಳು ನಿವೃತ್ತರಾಗಲಿದ್ದು,ಹಲವಾರು ಇತರ ಹುದ್ದೆಗಳು ಖಾಲಿಯಾಗಿಯೇ ಉಳಿದುಕೊಂಡಿವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ಅಮಿತ್ ಖರೆ ಅವರಿಗೆ ಈಗ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಹುದ್ದೆಯ ಹೊಣೆಗಾರಿಕೆಯನ್ನೂ ವಹಿಸಲಾಗಿದೆ. ಈ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ರವಿ ಮಿತ್ತಲ್ ಅವರನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ. ಖರೆ ಅವರು ಈ ಹಿಂದೆ ವಾರ್ತಾ ಪ್ರಸಾರ ಸಚಿವಾಲಯದ ಕಾರ್ಯದರ್ಶಿಯಾಗಿದ್ದರು.

ಅವರು ಹಿಂದೆ ನಿರ್ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯದರ್ಶಿ ಹುದ್ದೆಗೆ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಅನಿತಾ ಕರ್ವಾಲ್ ಅವರನು ನೇಮಕ ಮಾಡಲಾಗಿದೆ. ಗುಜರಾತ್ ಕೇಡರ್‌ನ ಇನ್ನೋರ್ವ ಅಧಿಕಾರಿ ಆರ್.ಬಿ.ಗುಪ್ತಾ ಅವರನ್ನು ಪರಿಸರ ಸಚಿವಾಲಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಇತರ ಗಮನಾರ್ಹ ನಿಯೋಜನೆಗಳಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಅರವಿಂದ ಕುಮಾರ ಶರ್ಮಾ ಅವರ ನೇಮಕವು ಸೇರಿದೆ. ಪ್ರಧಾನಿ ಕಚೇರಿಯಲ್ಲಿ ಅತ್ಯಂತ ಪ್ರಭಾವಿ ಅಧಿಕಾರಿಗಳಲ್ಲೊಬ್ಬರು ಎಂದು ಪರಿಗಣಿಸಲಾಗಿರುವ ಶರ್ಮಾ ಅಕ್ಟೋಬರ್ 2001ರಿಂದಲೂ ಆಗ ಗುಜರಾತ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News