ಮಾಧ್ಯಮ ಸಂಸ್ಥೆಗಳು ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಪ್ರಕರಣ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2020-04-27 17:53 GMT

ಹೊಸದಿಲ್ಲಿ, ಎ.27: ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭ ಹಲವು ಮಾಧ್ಯಮ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆದು ಹಾಕುವುದನ್ನು ಅಥವಾ ಸಂಬಳದಲ್ಲಿ ಕಡಿತ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರ , ಇಂಡಿಯನ್ ನ್ಯೂಸ್‌ ಪೇಪರ್ ಸೊಸೈಟಿ ಮತ್ತು ದಿ ನ್ಯೂಸ್ ಬ್ರಾಡ್‌ ಕಾಸ್ಟರ್ಸ್ ಅಸೋಸಿಯೇಷನ್‌ಗೆ ನೋಟಿಸ್ ಜಾರಿಗೊಳಿಸಿದೆ.

ಪತ್ರಕರ್ತರ ರಾಷ್ಟ್ರೀಯ ಒಕ್ಕೂಟ, ದಿಲ್ಲಿ ಪತ್ರಕರ್ತರ ಸಂಘ ಮತ್ತು ಬೃಹನ್ಮುಂಬಯಿ ಪತ್ರಕರ್ತರ ಸಂಘ ಜಂಟಿಯಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಕೆಲವು ಗಂಭೀರ ವಿಷಯಗಳನ್ನು ಎತ್ತಲಾಗಿದ್ದು ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಧೀಶರಾದ ಎನ್‌ವಿ ರಮಣ, ಎಸ್‌ಕೆ ಕೌಲ್ ಮತ್ತು ಬಿಆರ್ ಗವಾಯ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇತರ ಯೂನಿಯನ್‌ಗಳೂ ಇದನ್ನೇ ಹೇಳುತ್ತಿವೆ. ವ್ಯವಹಾರ ಆರಂಭವಾಗದಿದ್ದರೆ ಜನತೆ ಎಷ್ಟು ಕಾಲದವರೆಗೆ ತಾಳಿಕೊಳ್ಳಬಲ್ಲರು ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಮಾಧ್ಯಮ ಉದ್ಯಮದಲ್ಲಿ ನೌಕರರನ್ನು ಅಮಾನವೀಯವಾಗಿ ಮತ್ತು ಕಾನೂನು ಬಾಹಿರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ನೌಕರರನ್ನು ಕೆಲಸದಿಂದ ತೆಗೆಯಬಾರದು ಹಾಗೂ ವೇತನ ಕಡಿತ ಮಾಡಬಾರದು ಎಂದು ಕೇಂದ್ರ ಸರಕಾರ ಮತ್ತು ಪ್ರಧಾನಿ ಮಾಡಿಕೊಂಡಿರುವ ಮನವಿ ವ್ಯರ್ಥವಾಗಿದೆ. ಮನವಿಯ ಹೊರತಾಗಿಯೂ ಮಾಧ್ಯಮ ಸಂಸ್ಥೆಗಳು ನೌಕರರನ್ನು ಕೆಲಸದಿಂದ ತೆಗೆದುಹಾಕಿವೆ ಅಥವಾ ಸಂಬಳ ಕಡಿತ ಮಾಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ ಮತ್ತು ಇಂತಹ ಆರು ಘಟನೆಗಳನ್ನು ಉದಾಹರಣೆಯಾಗಿ ನೀಡಿದೆ.

ಮಾಧ್ಯಮ ಸಂಸ್ಥೆಗಳ ಇಂತಹ ಏಕಪಕ್ಷೀಯ ಕ್ರಮಗಳು ಪತ್ರಕರ್ತರಲ್ಲಿ ಅಭದ್ರತೆಯ ಭಾವನೆ ಮೂಡಿಸುತ್ತದೆ ಮತ್ತು ಮಾಧ್ಯಮ ಕ್ಷೇತ್ರದ ಮೇಲೆ ಅಹಿತಕರ ಪರಿಣಾಮ ಮೂಡಲು ಕಾರಣವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನ ಕಾರ್ಯಗಳನ್ನು ನಿರ್ವಹಿಸುವ ಮಾಧ್ಯಮಗಳ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು, ಲಾಕ್‌ಡೌನ್ ಬಳಿಕ ಜಾರಿಗೊಳಿಸಲಾದ - ಸೇವೆಯನ್ನು ಮುಕ್ತಾಯಗೊಳಿಸಿದ , ರಾಜೀನಾಮೆ ಕೇಳಿ ಪಡೆದಿರುವ, ಸಂಬಳದಲ್ಲಿ ಕಡಿತ ಮಾಡಿರುವ , ಸಂಬಳರಹಿತ ರಜೆಯಲ್ಲಿ ತೆರಳುವಂತೆ ಸೂಚಿಸಿರುವ ನೋಟಿಸನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News