ಲಾಕ್‌ಡೌನ್ ಎಫೆಕ್ಟ್: ದೋಣಿಯಲ್ಲೇ 1,100 ಕಿ.ಮೀ. ಸಾಗಿದ ಮೀನುಗಾರರು
ಬೆರ್ಹ್ರಾಂಪುರ (ಒಡಿಶಾ): ಲಾಕ್‌ಡೌನ್ ಕಾರಣದಿಂದ ಚೆನ್ನೈನಲ್ಲಿ ಸಿಕ್ಕಿಹಾಕಿಕೊಂಡ 25 ಮೀನುಗಾರರು ತಮ್ಮ ಮೀನುಗಾರಿಕೆ ದೋಣಿಗಳಲ್ಲೇ 1,100 ಕಿಲೋಮೀಟರ್ ಸಾಗರಯಾನ ಸಾಹಸ ಕೈಗೊಂಡು ಮನೆಗಳಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಈ ಸಾಹಸಯಾತ್ರೆ ಕೈಗೊಂಡ 25 ಮೀನುಗಾರರು ತಲುಪಿದ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಪ್ರತ್ಯೇಕವಾಗಿ ಇರಲು ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಹರಪ್ರಸಾದ್ ಭೋಯಿ ಹೇಳಿದ್ದಾರೆ. ಅವರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿದ್ದು, ಆಹಾರ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. 1,100 ಕಿಲೋಮೀಟರ್ ದೂರವನ್ನು ಕ್ರಮಿಸಲು ಬಳಸಿದ ಮರದ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಆಂಧ್ರ ಪ್ರದೇಶದ 14 ಮಂದಿ ಸೇರಿದಂತೆ ಒಟ್ಟು 39 ಮೀನುಗಾರರು ಎಪ್ರಿಲ್ 24ರಂದು ಚೆನ್ನೈನಿಂದ ಸಾಗರಯಾನ ಆರಂಭಿಸಿದ್ದರು. ಈ ಸಾಹಸಯಾತ್ರೆಗಾಗಿ ಚೆನ್ನೈನಲ್ಲಿ ದೋಣಿಯೊಂದನ್ನು ಬಾಡಿಗೆಗೆ ಪಡೆದಿದ್ದರು. ಆಂಧ್ರದ ಮೀನುಗಾರರು ದಂಕುರು ಎಂಬಲ್ಲಿ ಇಳಿದುಕೊಂಡಿದ್ದರು ಎಂದು ಹೇಳಿದ್ದಾರೆ.
ಗಂಜಮ್ ಜಿಲ್ಲೆಯ 10 ಮಂದಿ ಸೇರಿದಂತೆ 27 ಮೀನುಗಾರರು ಎಪ್ರಿಲ್ 20ರಂದು ರಾಜ್ಯಕ್ಕೆ ವಾಪಸ್ಸಾಗಿದ್ದು, ಆಂಧ್ರ ಪ್ರದೇಶದ ಇಚ್ಚಾಪುರ್ಮಾ ಎಂಬಲ್ಲಿ ಇಳಿದುಕೊಂಡಿದ್ದರು. ಅಂತೆಯೇ 38 ಮೀನುಗಾರರು ಪಾಟಿ ಸೋನೆಪುರ ಕರಾವಳಿಗೆ ಶನಿವಾರ ಆಗಮಿಸಿದ್ದಾರೆ. ಈ ಎಲ್ಲರನ್ನೂ ವಿವಿಧ ಗ್ರಾಮಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಮೂಲಗಳು ಹೇಳಿವೆ.
ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗವನ್ನು ಅನುಸರಿಸಿ ಹಲವು ಮಂದಿ ಬರುತ್ತಿದ್ದು, ಈ ಬಗ್ಗೆ ನಿಗಾ ವಹಿಸುವಂತೆ ರಾಜ್ಯ ಸಾರಿಗೆ ಸಚಿವ ಪದ್ಮನಾಭ ಬೆಹೆರಾ ಸೂಚಿಸಿದ್ದಾರೆ.