'ಕೊರೋನ ರೋಗಿ ಜೊತೆ ಫೋನ್ ‍ನಲ್ಲಿ ಮಾತನಾಡಿದ ಸಂಬಂಧಿಕರಿಗೆ ಕ್ವಾರಂಟೈನ್‍' ಎಂಬ ಆರೋಪ: ಪತ್ರಕರ್ತನ ಬಂಧನ

Update: 2020-04-28 10:30 GMT

ಹೊಸದಿಲ್ಲಿ: “ಕೋವಿಡ್-19 ರೋಗಿಯೊಬ್ಬರ ಜತೆಗೆ ಫೋನ್ ಮೂಲಕ ಮಾತನಾಡಿದ ಮಾತ್ರಕ್ಕೆ ಕುಟುಂಬವೊಂದನ್ನು ಏಕೆ ಕ್ವಾರಂಟೈನ್‍ ನಲ್ಲಿರಿಸಲಾಗಿದೆ” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದ ಅಂಡಮಾನ್ ಮತ್ತು ನಿಕೋಬಾರ್ ನ ಪತ್ರಕರ್ತ ಝುಬೈರ್ ಅಹ್ಮದ್ ಅವರನ್ನು ಬಂಧಿಸಲಾಗಿದೆ. ಈ ಆರೋಪ ಸುಳ್ಳು ಎಂದು ಅಂಡಮಾನ್ ನಿಕೋಬಾರ್ ಪೊಲೀಸರು ತಿಳಿಸಿದ್ದಾರೆ.

ಅಂಡಮಾನ್ ದ್ವೀಪದ ಹಡ್ಡೊ ಎಂಬ ಪಟ್ಟಣದ ಒಂದು ಕುಟುಂಬದ ನಾಲ್ಕು ಸದಸ್ಯರಲ್ಲೊಬ್ಬರು ಕೊರೋನ ಪಾಸಿಟಿವ್ ಆದ ಸಂಬಂಧಿಯೊಬ್ಬರ ಜತೆ ಫೋನ್ ನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆಂಬ ಕಾರಣಕ್ಕೆ ಇಡೀ ಕುಟುಂಬವನ್ನು ಗೃಹ ಕ್ವಾರಂಟೈನ್‍ ನಲ್ಲಿರುವಂತೆ ಬಲವಂತಪಡಿಸಲಾಗಿದೆ ಎಂಬ ವರದಿಯನ್ನಾಧರಿಸಿ ಝುಬೈರ್ ಟ್ವೀಟ್ ಮಾಡಿದ್ದರು.

ಈ ವರದಿಯು ಅಂಡಮಾನ್ ಕ್ರಾನಿಕಲ್‍ ನಲ್ಲಿ ಎಪ್ರಿಲ್ 26ರಂದು ಪ್ರಕಟವಾಗಿತ್ತು. ಈ ವರದಿಯನ್ನು ತಮ್ಮ ಎಪ್ರಿಲ್ 27ರ ಟ್ವೀಟ್ ‍ನಲ್ಲಿ ಝುಬೈರ್ ಉಲ್ಲೇಖಿಸಿರಲಿಲ್ಲ, ಆದರೆ ಅದೇ ದಿನ ರಾತ್ರಿ 7 ಗಂಟೆ ಸುಮಾರಿಗೆ ಅವರನ್ನು ಬಂಧಿಸಲಾಗಿದೆ. “ಕೋವಿಡ್-19 ಕ್ವಾರಂಟೈನ್‍ ಗೊಳಗಾದವರು ತಮ್ಮ ಪರಿಚಯದವರ್ಯಾರನ್ನೂ ಫೋನ್ ಮೂಲಕ ಸಂಪರ್ಕಿಸಬಾರದೆಂದು ಮನವಿ. ಫೋನ್ ಕರೆ ಆಧರಿಸಿ ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ನಲ್ಲಿರಿಸಲಾಗುತ್ತದೆ'' ಎಂದು ಇನ್ನೊಂದು ಟ್ವೀಟ್‍ನಲ್ಲಿ ಅವರು ಹೇಳಿದ್ದರು.

ಬಾಂಬೂಫ್ಲಾಟ್ ಪೊಲೀಸ್ ಠಾಣೆಯ ನಾಲ್ಕು ಸಿಬ್ಬಂದಿ ಝುಬೈರ್ ಮನೆಗೆ ಬಂದು ಎಸ್‍ಪಿಗೆ  ಅವರನ್ನು ಟ್ವೀಟ್ ಕುರಿತಂತೆ ಪ್ರಶ್ನಿಸಲಿರುವುದರಿಂದ ಅಬೆರ್ದೀನ್ ಠಾಣೆಗೆ  ವಿಚಾರಣೆಗೆ ಬರಬೇಕೆಂದು ಹೇಳಿದ್ದರು ಎಂದು ಅಂಡಮಾನ್ ಕ್ರಾನಿಕಲ್‍ನ ಮುಖ್ಯ ಸಂಪಾಧಕ ಡೆನಿಸ್ ಗಿಲ್ಸ್ ಹೇಳುತ್ತಾರೆ. ಝುಬೈರ್ ಅವರು ಈ ಹಿಂದೆ ಅಂಡಮಾನ್ ಕ್ರಾನಿಕಲ್ ಸಹಾಯಕ ಸಂಪಾದಕರಾಗಿದ್ದರು. ಈಗ ಫ್ರೀಲಾನ್ಸ್ ಪತ್ರಕರ್ತರಾಗಿದ್ದಾರೆ.

ಝುಬೈರ್ ಅವರನ್ನು ವಿಪತ್ತು ನಿರ್ವಹಣಾ ಕಾಯಿದೆ 2005ರ ಸೆಕ್ಷನ್ 51 ಹಾಗೂ ಇತರ ಸೆಕ್ಷನ್‍ಗಳನ್ವಯ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

"ಕೇವಲ ಒಂದು ಪ್ರಶ್ನೆ ಕೇಳಿದ್ದಕ್ಕೆ ಎಫ್‍ಐಆರ್ ಹೇಗೆ ದಾಖಲಿಸಬಹುದು?, ಅಂಡಮಾನ್‍ನಲ್ಲಿ ಮಾಹಿತಿ ನೀಡುವಿಕೆ ಸಂಬಂಧ ಸಂಪೂರ್ಣ ಏಕಸ್ವಾಮ್ಯವಿದೆ. ಮುಖ್ಯ ಕಾರ್ಯದರ್ಶಿ ಚೇತನ್ ಅವರು ಮಾಡುವ ಟ್ವೀಟ್‍ಗಳ ಮುಖಾಂತರ ಮಾತ್ರ ಮಾಹಿತಿ ದೊರೆಯುತ್ತದೆ, ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳಿಲ್ಲ'' ಎಂದು ಡೆನಿಸ್ ಹೇಳುತ್ತಾರೆ.

ಕೊರೋನ ಪಾಸಿಟಿವ್ ವ್ಯಕ್ತಿಗೆ ಫೋನ್ ಕರೆ ಮಾಡಿದ್ದ ಕುಟುಂಬದ ಓರ್ವ ಸದಸ್ಯೆ ಸರಕಾರಿ ಉದ್ಯೋಗಿಯಾಗಿದ್ದಾರೆ. ಎಪ್ರಿಲ್ 25ರಂದು ಆಕೆ ಕಚೇರಿಯಲ್ಲಿದ್ದಾಗ ಆಕೆಯ ಮಾವನಿಗೆ ಕರೆಯೊಂದು ಬಂದು ಯಾರ ಜತೆಗಾದರೂ ಫೋನ್‍ ನಲ್ಲಿ ಮಾತನಾಡಿದ್ದೀರಾ ಎಂದು ಕೇಳಲಾಯಿತು. ಹೌದು, ಎಂದಾಗ  ವಿಳಾಸ ಕೇಳಿ ಅಧಿಕಾರಿಗಳು ಮನೆಗೆ ಬಂದು ನೋಟಿಸ್ ಹಚ್ಚಿ 28 ದಿನಗಳ ಕಾಲ ಕ್ವಾರಂಟೈನ್ ‍ನಲ್ಲಿರಬೇಕೆಂದು ಹೇಳಿದರು ಎಂದು ಆಕೆ ತಿಳಿಸಿದ್ದಾರೆ ಎಂದು www.thenewsminute.com ವರದಿ ತಿಳಿಸಿದೆ.

ಕೇವಲ ಕೊರೋನ ಪಾಸಿಟಿವ್ ಸಂಬಂಧಿ ಜತೆ ಫೋನ್‍ನಲ್ಲಿ ಮಾತನಾಡಿದ್ದೇವೆ, ನೇರ ಸಂಪರ್ಕ ಹೊಂದಿಲ್ಲ ಎಂದು ಅವರು ಹೇಳುತ್ತಾರಲ್ಲದೆ ತಮ್ಮನ್ನು ಕ್ವಾರಂಟೈನ್‍ಗೊಳಿಸಿರುವುದು  ಹಲವು ಇತರ ಕುಟುಂಬಗಳಲ್ಲೂ  ಭೀತಿ ಸೃಷ್ಟಿಸಿದೆ ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News