ಆನ್ಲೈನ್ ಲೂಡೋ ಗೇಮ್‍ನಲ್ಲಿ ತನ್ನನ್ನು ಸತತವಾಗಿ ಸೋಲಿಸಿದ ಪತ್ನಿಗೆ ಗಂಭೀರ ಹಲ್ಲೆಗೈದ ಪತಿ

Update: 2020-04-28 11:36 GMT

ವಡೋದರ: ಆನ್ಲೈನ್ ಲೂಡೋ ಗೇಮ್‍ನಲ್ಲಿ ತನ್ನನ್ನು ಸತತವಾಗಿ ಸೋಲಿಸಿದ ಪತ್ನಿಯ ಮೇಲೆ ವ್ಯಕ್ತಿಯೊಬ್ಬ ಗಂಭೀರ ಹಲ್ಲೆ ನಡೆಸಿದ ಘಟನೆ ವಡೋದರ ನಗರದಿಂದ ವರದಿಯಾಗಿದೆ. ಸಂತ್ರಸ್ತೆ ಟ್ಯೂಷನ್ ಟೀಚರ್ ಆಗಿದ್ದು ಬೆನ್ನು ಮೂಳೆಗೆ ಉಂಟಾದ  ಗಂಭೀರ ಗಾಯಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಕ್ ಡೌನ್ ಸಂದರ್ಭ ಪತಿ ಮನೆಯಿಂದ ಹೊರ ಹೋಗಿ ಇತರರ ಜತೆ ಸಮಯ ಕಳೆಯುವುದು ಬೇಡವೆಂದು ಪತ್ನಿ ಆನ್ಲೈನ್ ಲೂಡೋ ಗೇಮ್ ಆಡುವ ಎಂದು ಸಲಹೆ ನೀಡಿದ್ದಳು. ಇದಕ್ಕೆ ಒಪ್ಪಿದ ಪತಿ ಲೂಡೋ ಆಡಿದರೂ ಮೂರರಿಂದ ನಾಲ್ಕು ಬಾರಿ ಪತ್ನಿಯ ಕೈಯ್ಯಲ್ಲಿ ಸೋತು ತಾಳ್ಮೆ ಕಳೆದುಕೊಂಡು ಆಕೆಯ ಜತೆ ಜಗಳಕ್ಕಿಳಿದಿದ್ದ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಆತ ಆಕೆಯ ಮೇಲೆ ಹಲ್ಲೆಗೈಯ್ಯಲು ಆರಂಭಿಸಿದ್ದ.

ಮಹಿಳೆಯನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆ ಪತಿ ಮನೆಗೆ ಮರಳಲು ನಿರಾಕರಿಸಿ ತನ್ನ ಹೆತ್ತವರ ಮನೆಗೆ ತೆರಳುವ ನಿರ್ಧಾರ ಕೈಗೊಂಡರೂ 181 ಅಭಯಂ ಸಹಾಯವಾಣಿಯ ಸಮಾಲೋಚಕರು ಪತಿ-ಪತ್ನಿ ಇಬ್ಬರನ್ನೂ ಜತೆಗೆ ಕೂರಿಸಿ ಮಾತುಕತೆ ನಡೆಸಿದ ಪರಿಣಾಮ ಆಕೆ ಆತನ ವಿರುದ್ಧ ದೂರು ನೀಡದೇ ಇರಲು ನಿರ್ಧರಿಸಿದ್ದಾರೆ ಹಾಗೂ ಕೆಲ ದಿನಗಳ ಕಾಲ ಹೆತ್ತವರ ಜತೆಗಿದ್ದು ನಂತರ ಪತಿ ಮನೆಗೆ ಮರಳುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News