ಮುಸ್ಲಿಂ ತರಕಾರಿ ಮಾರಾಟಗಾರನಿಗೆ ಬೆದರಿಕೆಯೊಡ್ಡಿ ಕಿರುಕುಳ ನೀಡಿದ ಬಿಜೆಪಿ ಶಾಸಕ; ವೀಡಿಯೋ ವೈರಲ್

Update: 2020-04-29 13:41 GMT
ಶಾಸಕ ಬೃಜ್‍ಭೂಷಣ್ ರಾಜಪುತ್ (Photo: Facebook)

ಹೊಸದಿಲ್ಲಿ: ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂಬ ಸಲಹೆ ನೀಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕನೊಬ್ಬನಿಗೆ ಪಕ್ಷ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಬೆನ್ನಿಗೇ ಅದೇ ರಾಜ್ಯದ ಇನ್ನೊಬ್ಬ ಬಿಜೆಪಿ ಶಾಸಕ ಬೃಜ್‍ಭೂಷಣ್ ರಾಜಪುತ್ ಮುಸ್ಲಿಂ ತರಕಾರಿ ಮಾರಾಟಗಾರನೊಬ್ಬನಿಗೆ ಕಿರುಕುಳ ನೀಡಿ ಜಾಗ ಬಿಟ್ಟು ಕದಲುವಂತೆ ಆತನಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಈ ಘಟನೆಯ ಕುರಿತಾದ ವೀಡಿಯೋ ಕೂಡ ವೈರಲ್ ಆಗಿದ್ದು ಮಾರಾಟಗಾರನ ಜತೆಗಿದ್ದ ಅಪ್ರಾಪ್ತ ಬಾಲಕನೊಬ್ಬನ ಮುಖಾಂತರ ಆತ ಮುಸ್ಲಿಮನೆಂದು ತಿಳಿಯುತ್ತಲೇ ಮತ್ತೆ ಆ ಕಾಲನಿಗೆ ಪ್ರವೇಶಿಸದಂತೆ ಶಾಸಕ ಎಚ್ಚರಿಕೆ ನೀಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಅಲ್ಲಿನ ನಿವಾಸಿಯೊಬ್ಬರು ಚಿತ್ರೀಕರಿಸಿದ ಈ ವೀಡಿಯೋದಲ್ಲಿ ಶಾಸಕ ಆ ತರಕಾರಿ ಮಾರಾಟಗಾರನ ಹೆಸರು ಕೇಳಿದಾಗ ಆತ 'ರಾಜಕುಮಾರ್' ಎನ್ನುತ್ತಾನೆ. ಇದನ್ನು ನಂಬದ ಶಾಸಕ ನಿಜ ಹೆಸರನ್ನು ಹೇಳು ಎಂದು ಒತ್ತಾಯಿಸುತ್ತಾ ``ನಿಜ ಹೇಳು ಇಲ್ಲದೇ ಇದ್ದರೆ ಹೊಡೆಯುತ್ತೇನೆ,'' ಎಂದು ಬೆದರಿಸುತ್ತಾನೆ, ನಂತರ ಆತನ ಜತೆಗಿದ್ದ ಅಪ್ರಾಪ್ತ ಬಾಲಕನ ಬಳಿ ಆತನ ಹೆಸರು ಕೇಳಿ ಹೇಳದೇ ಇದ್ದರೆ ಜೈಲಿಗೆ ಹೋಗುತ್ತಾನೆ ಎಂದಾಗ ಆತನ ಹೆಸರು `ಅಝೀಝ್-ಉರ್-ರಹ್ಮಾನ್'' ಎಂದು ಬಾಲಕ ಹೇಳುತ್ತಾನೆ.

ಅದಕ್ಕೆ ಶಾಸಕ ನೀನು ಮುಸ್ಲಿಮನೆಂದು ತಿಳಿಸದೆ ಸುಳ್ಳು ಹೇಳಿದ್ದಿ ಎಂದು ದಬಾಯಿಸಿದಾಗ ಬಾಲಕ ``ಬಿಟ್ಟು ಬಿಡಿ, ಇನ್ನು ಹಾಗೆ ಮಾಡುವುದಿಲ್ಲ,'' ಎಂದು ಹೇಳುತ್ತಾನೆ. ಮತ್ತೆ ಇಬ್ಬರೂ ಅಲ್ಲಿಂದ ಹೊರನಡೆದಾಗ ಮತ್ತೆ ಈ ಮೊಹಲ್ಲಾದಲ್ಲಿ ಕಾಣಿಸಿಕೊಳ್ಳಬೇಡ ಎಂದು ಶಾಸಕ ಹೇಳುತ್ತಾರೆ.

ಕಾನ್ಪುರ್ ಮತ್ತು ಲಕ್ನೋದಲ್ಲಿ ತರಕಾರಿ ಮಾರಾಟಗಾರರಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ಇರುವುದರಿಂದ ಹೀಗೆ ಮಾಡಿದ್ದಾಗಿ ಶಾಸಕ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News