ಕೊರೋನ: ದೇಶದಲ್ಲಿ ರೆಡ್ ಝೋನ್ ಜಿಲ್ಲೆಗಳೆಷ್ಟು ಗೊತ್ತೇ?

Update: 2020-05-02 03:45 GMT

ಹೊಸದಿಲ್ಲಿ, ಮೇ 2: ಕೊರೋನ ಸಾಂಕ್ರಾಮಿಕ ವಿರುದ್ಧದ ಹೋರಾಟದ ಅಂಗವಾಗಿ ಮೇ 4ರಿಂದ ಆರಂಭವಾಗುವ ಲಾಕ್‌ಡೌನ್-3 ಅನುಷ್ಠಾನಗೊಳಿಸುವ ಸಲುವಾಗಿ ಆಯಾ ಜಿಲ್ಲೆಗಳ ಪ್ರಕರಣಗಳ ತೀವ್ರತೆ ಆಧರಿಸಿ, ದೇಶದ 733 ಜಿಲ್ಲೆಗಳನ್ನು ಮರು ವರ್ಗೀಕರಿಸಿ ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ. ಹೊಸ ಪಟ್ಟಿಯ ಪ್ರಕಾರ 130 ಜಿಲ್ಲೆಗಳು ಇನ್ನೂ ಕೆಂಪು ವಲಯವಾಗಿ ಉಳಿದುಕೊಂಡಿದ್ದು, 284 ಆರೆಂಜ್ ಹಾಗೂ 319 ಹಸಿರು ವಲಯಗಳಾಗಿವೆ.

ದಿಲ್ಲಿ, ಬಂಗಾಳ ಮತ್ತು ಮಹಾರಾಷ್ಟ್ರಗಳು ಗರಿಷ್ಠ ಕೆಂಪು ವಲಯಗಳನ್ನು ಹೊಂದಿದ ರಾಜ್ಯಗಳಾಗಿವೆ. 319 ಜಿಲ್ಲೆಗಳನ್ನು ಹಸಿರು ವಲಯ ಎಂದು ಗುರುತಿಸಲಾಗಿದ್ದು, ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಶೂನ್ಯ ಇರುವ ಅಥವಾ ಕಳೆದ 21 ದಿನಗಳಲ್ಲಿ ಯಾವುದೇ ಸೋಂಕು ಪ್ರಕರಣ ವರದಿಯಾಗದ ಜಿಲ್ಲೆಗಳು ಈ ವರ್ಗದಲ್ಲಿವೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ, ಸೋಂಕು ದ್ವಿಗುಣಗೊಳ್ಳುತ್ತಿರುವ ಪ್ರಮಾಣ, ಪರೀಕ್ಷೆಯ ವ್ಯಾಪ್ತಿ, ಜಿಲ್ಲೆಗಳಿಂದ ಬಂದ ಸರ್ವೇಕ್ಷಣೆ ಅಭಿಪ್ರಾಯಗಳ ಆಧಾರದಲ್ಲಿ ಕೆಂಪು ವಲಯಗಳನ್ನು ಗುರುತಿಸಲಾಗಿದೆ. ಕೆಂಪು ಅಥವಾ ಹಸಿರು ವರ್ಗಕ್ಕೆ ಸೇರದ ಜಿಲ್ಲೆಗಳು ಆರೆಂಜ್ ವಲಯಗಳಾಗಿರುತ್ತವೆ. ಶೇಕಡ 17.7ರಷ್ಟು ಜಿಲ್ಲೆಗಳು ಇನ್ನೂ ಕೆಂಪು ವಲಯದಲ್ಲಿದ್ದು, 38.7% ಆರೆಂಜ್ ಹಾಗೂ 43.5% ಹಸಿರು ವಲಯದಲ್ಲಿವೆ. ದಿಲ್ಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಹಾಗೂ ಕೊಲ್ಕತ್ತಾ ಸೇರಿ ಮಹಾನಗರಗಳು ಕೆಂಪು ವಲಯಗಳಲ್ಲೇ ಇವೆ.

ಹೊಸ ಮಾರ್ಗಸೂಚಿಯ ಜತೆಗೆ ಈ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಕರಣಗಳು ಪತ್ತೆಯಾದ ಪ್ರದೇಶ ಮತ್ತು ಬಫರ್ ಝೋನ್‌ಗಳ ಕಣ್ಗಾವಲು ದೃಷ್ಟಿಯಿಂದ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಎಪ್ರಿಲ್ 30ರ ವೇಳೆಗೆ 219 ಕೆಂಪು, 297 ಆರೆಂಜ್ ಹಾಗೂ 307 ಹಸಿರು ವಲಯಗಳಿದ್ದವು. ಮರು ಮೌಲ್ಯಮಾಪನ ಬಳಿಕ ಇದೀಗ 12 ಜಿಲ್ಲೆಗಳು ಹಸಿರು ವಲಯಕ್ಕೆ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News