ಕಲಬುರ್ಗಿಯಲ್ಲಿ ಕೊರೋನಗೆ 6ನೆ ಸಾವು: 36 ಗಂಟೆ ಸಾವಿನ ಸುದ್ದಿ ಮುಚ್ಚಿಟ್ಟ ಜಿಲ್ಲಾಡಳಿತ; ಆರೋಪ

Update: 2020-05-04 14:29 GMT
ಸಾಂದರ್ಭಿಕ ಚಿತ್ರ

ಕಲಬುರ್ಗಿ, ಮೇ 4: ಕೊರೋನ ವೈರಸ್ ಸೋಂಕಿಗೆ ಮೇ 2ರಂದು 56 ವರ್ಷದ ವ್ಯಕ್ತಿ ಮೃತಪಟ್ಟಿದ್ದರೂ ಆ ವಿಚಾರವನ್ನು ಕಲಬುರ್ಗಿ ಜಿಲ್ಲಾಡಳಿತ ಸೋಮವಾರ ಬಹಿರಂಗಪಡಿಸಿದೆ ಎಂಬ ಆರೋಪ ಕೇಳಿ ಬಂದಿದೆ.

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಪುಟಾಣಿ ಗಲ್ಲಿಯ ನಿವಾಸಿ(ಪ್ರ-587) ಇಎಸ್‍ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರ ಗಂಟಲು ದ್ರವದ ಮಾದರಿ ಪರೀಕ್ಷಿಸಲಾಗಿತ್ತು.

ಮೇ 1ರಂದು ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಐಸೋಲೇಷನ್ ವಾರ್ಡಿನಲ್ಲಿ ದಾಖಲಿಸಲಾಗಿತ್ತು. ಮೇ 2ರ ರಾತ್ರಿ ಅವರು ತೀವ್ರ ಹೃದಯಾಘಾತದ ಕಾರಣ ಮೃತಪಟ್ಟರು ಎಂದು ಜಿಲ್ಲಾಧಿಕಾರಿ ಬಿ.ಶರತ್ ಖಚಿತಪಡಿಸಿದ್ದಾರೆ.

ವ್ಯಕ್ತಿ ಮೃತಪಟ್ಟ 36 ಗಂಟೆಗಳ ಬಳಿಕ ಜಿಲ್ಲಾಧಿಕಾರಿ ಈ ವಿಷಯ ಬಹಿರಂಗ ಪಡಿಸಿದ್ದಾರೆ. ಅಷ್ಟೊತ್ತಿಗೆ ಶವ ಸಂಸ್ಕಾರವೂ ಮುಗಿದು ಹೋಗಿದೆ. ವ್ಯಕ್ತಿ ಸಾವಿಗೆ ಗಂಭೀರ ಸ್ವರೂಪದ ಕಾಯಿಲೆಯೇ ಕಾರಣ ಎನ್ನಲಾಗಿದೆ. ಆದರೆ, ಅವರಲ್ಲಿ ಕೊರೋನ ಇದ್ದುದು ನಿಜ ಎಂದು ಇಎಸ್‍ಐ ಆಸ್ಪತ್ರೆ ಮೂಲಗಳು ರವಿವಾರವೇ ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News