ಲಾಕ್ ಡೌನ್ ಉಲ್ಲಂಘಿಸಿ ಕೇದಾರನಾಥಕ್ಕೆ ಪ್ರಯಾಣ: ಉ.ಪ್ರದೇಶ ಶಾಸಕನ ವಿರುದ್ಧ ಪ್ರಕರಣ ದಾಖಲು

Update: 2020-05-04 15:48 GMT

ಹೊಸದಿಲ್ಲಿ,ಮೇ 4: ಕೊರೋನ ವೈರಸ್ ಲಾಕ್‌ಡೌನ್ ಉಲ್ಲಂಘಿಸಿದ್ದಕ್ಕಾಗಿ ಹಾಗೂ ಭಕ್ತರ ಭೇಟಿಯನ್ನು ನಿಷೇಧಿಸಲಾಗಿರುವ ಬದರಿನಾಥ ಮತ್ತು ಕೇದಾರನಾಥ ಕ್ಷೇತ್ರಗಳಿಗೆ ಪ್ರಯಾಣಿಸಲು ಯತ್ನಿಸಿದ್ದಕ್ಕಾಗಿ ಉತ್ತರ ಪ್ರದೇಶದ ವಿವಾದಾತ್ಮಕ ಶಾಸಕ ಅಮನಮಣಿ ತ್ರಿಪಾಠಿ ವಿರುದ್ಧ ಉತ್ತರಾಖಂಡದಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ತಂದೆ ಕಳೆದ ತಿಂಗಳು ಉತ್ತರಾಖಂಡದಲ್ಲಿ ನಿಧನರಾಗಿದ್ದು,ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆಗಳನ್ನು ಸಲ್ಲಿಸುವ ನೆಪವೊಡ್ಡಿ ತ್ರಿಪಾಠಿ ತನ್ನ ಪ್ರಯಾಣಕ್ಕೆ ಉತ್ತರಾಖಂಡದ ಹೆಚ್ಚುವರಿ ಕಾರ್ಯದರ್ಶಿ ಓಂ ಪ್ರಕಾಶ ಅವರಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ.

 ತ್ರಿಪಾಠಿ ಸೇರಿದಂತೆ 10 ಜನರು ಮೂರು ಕಾರುಗಳಲ್ಲಿ ಎರಡು ರಾಜ್ಯಗಳ ನಾಲ್ಕು ಜಿಲ್ಲೆಗಳ ಮೂಲಕ ಪ್ರಯಾಣಿಸಿ ರವಿವಾರ ರಾತ್ರಿ ಉತ್ತರಾಖಂಡದ ಗೌಚಾರ್ ಎಂಬಲ್ಲಿ ತಲುಪಿದಾಗ ಅಧಿಕಾರಿಗಳು ನಿಲ್ಲಲು ಸೂಚನೆ ನೀಡಿದ್ದರು. ಆದರೆ ನಿಲ್ಲದೆ ಮುಂದೆ ಸಾಗಿದ್ದ ಅವರನ್ನು ಕರ್ಣಪ್ರಯಾಗ ಎಂಬಲ್ಲಿ ತಡೆಯಲಾಗಿತ್ತು. ಈ ವೇಳೆ ವೈದ್ಯಕೀಯ ತಪಾಸಣೆಗಾಗಿ ಅಲ್ಲಿ ನಿಯೋಜಿತರಾಗಿದ್ದ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ತ್ರಿಪಾಠಿ ವಾಗ್ವಾದ ನಡೆಸಿದ್ದರು. ಎಲ್ಲ ಹತ್ತೂ ಜನರನ್ನು ಬಂಧಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಬಳಿಕ ಅವರಿಗೆ ನೋಟಿಸ್ ಜಾರಿಗೊಳಿಸಿ ಉತ್ತರ ಪ್ರದೇಶಕ್ಕೆ ವಾಪಸ್ ಕಳುಹಿಸಿದ್ದಾರೆ.

ಕೊರೋನ ವೈರಸ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ವತಃ ಆದಿತ್ಯನಾಥ ಅವರೇ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಉತ್ತರಾಖಂಡಕ್ಕೆ ತೆರಳಿರಲಿಲ್ಲ,ಹೀಗಾಗಿ ಆದಿತ್ಯನಾಥ್ ತಂದೆಗಾಗಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂಬ ತ್ರಿಪಾಠಿಯವರ ಹೇಳಿಕೆಯನ್ನು ಉತ್ತರಾಖಂಡ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ತನ್ಮಧ್ಯೆ ಮುಖ್ಯಮಂತ್ರಿಗಳ ಹೆಸರನ್ನು ಬಳಸಿಕೊಂಡಿದ್ದಕ್ಕಾಗಿ ಉ.ಪ್ರ.ಸರಕಾರವು ಹೇಳಿಕೆಯೊಂದರಲ್ಲಿ ತ್ರಿಪಾಠಿಯವರನ್ನು ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News