ಲಾಕ್‌ಡೌನ್ ಎಫೆಕ್ಟ್: ಪಾತಾಳಕ್ಕಿಳಿದ ಸೇವಾವಲಯ ಎಪ್ರಿಲ್‌ನಲ್ಲಿ ಸೂಚ್ಯಂಕ 5.4ಕ್ಕೆ ಕುಸಿತ

Update: 2020-05-06 17:28 GMT

ಹೊಸದಿಲ್ಲಿ, ಮೇ 6: ಕೊರೋನ ವೈರಸ್ ಹಾವಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್ ಹೇರಿರುವ ಹಿನ್ನೆಲೆಯಲ್ಲಿ ಭಾರತದ ಸೇವಾವಲಯವು ಇತಿಹಾಸದಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿದ್ದು, ಬಹುತೇಕ ಅದರ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಿವೆ ಎಂದು ‘ಐಎಚ್‌ಎಸ್ ಮಾರ್ಕಿಟ್’ ಬುಧವಾರ ಬಿಡುಗಡೆಗೊಳಿಸಿದ ಸಮೀಕ್ಷಾ ವರದಿ ತಿಳಿಸಿದೆ.

 ಮಾರ್ಚ್‌ನಲ್ಲಿ 49.3ರಷ್ಟಿದ್ದ ಸೇವಾವಲಯದ ಉತ್ಪಾದನಾ (ಔಟ್‌ಪುಟ್) ಸೂಚ್ಯಂಕವು ಎಪ್ರಿಲ್‌ನಲ್ಲಿ 5.4ಕ್ಕೆ ಕುಸಿದಿದ್ದು, ಅಧೋಗತಿಗೆ ತಲುಪಿದೆ.

‘‘ಸೇವಾವಲಯದ ಹೆಡ್‌ಲೈನ್ ಸೂಚ್ಯಂಕವು, 40 ಅಂಕಗಳಿಗೂ ಅಧಿಕ ಪತನವನ್ನು ಕಂಡಿದ್ದು, ಕಟ್ಟುನಿಟ್ಟಿನ ಲಾಕ್‌ಡೌನ್ ಕ್ರಮಗಳಿಂದಾಗಿ ಈ ವಲಯವು ಸಂಪೂರ್ಣವಾಗಿ ಸ್ತಬ್ಧಗೊಂಡಿದೆ’’ ಎಂದು ಐಎಚ್‌ಎಸ್‌ ಮಾರ್ಕಿಟ್‌ನ ಅರ್ಥಶಾಸ್ತ್ರಜ್ಞ ಜೋ ಹೇಸ್ ತಿಳಿಸಿದ್ದಾರೆ. ‘‘ಜಿಡಿಪಿ ದತ್ತಾಂಶಗಳೊಂದಿಗೆ ಐತಿಹಾಸಿಕವಾಗಿ ಹೋಲಿಕೆ ಮಾಡಿದಾಗ, ಭಾರತದ ಆರ್ಥಿಕತೆಯು ಎಪ್ರಿಲ್ ವೇಳೆ ವಾರ್ಷಿಕ ದರದ ಶೇ.15ರಷ್ಟು ಸಂಕುಚಿತಗೊಂಡಿದೆ ಎಂದು ಹೇಳಿದ್ದಾರೆ.

 ಈ ಮಧ್ಯೆ ಸೇವೆಗಳು ಹಾಗೂ ತಯಾರಿಕಾ ವಲಯದ ಉತ್ಪಾದನೆಯನ್ನು ಮಾಪನ ಮಾಡುವ ‘ಸಮಗ್ರ ಪಿಎಂಐ ಉತ್ಪಾದನಾ ಸೂಚ್ಯಂಕವು ಮಾರ್ಚ್‌ನಲ್ಲಿ 50.6ರಷ್ಟಿದ್ದರೆ, ಎಪ್ರಿಲ್ ಅಂತ್ಯದ ವೇಳೆಗೆ 7.2ಕ್ಕೆ ಕುಸಿದಿದೆ.

ಕೊರೋನಾ ವೈರಸ್ ಪಿಡುಗಿನಿಂದಾಗಿ ದೇಶ ಉಂಟಾಗಿರುವ ಆರ್ಥಿಕ ಹಾನಿಯು ಅತ್ಯಂತ ತೀವ್ರವಾದುದು ಮತ್ತು ದೂರಗಾಮಿ ಪರಿಣಾಮವನ್ನು ಬೀರುವಂತಹದ್ದಾಗಿದೆ ಎಂದು ಹೇಯ್ಸಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News