ದುಪ್ಪಟ್ಟು ಹಣ ಪಡೆದು ವಂಚನೆ: ಪ್ರಶ್ನಿಸಿದ ವಲಸೆ ಕಾರ್ಮಿಕರಿಗೆ ಮಾರಣಾಂತಿಕ ಹಲ್ಲೆಗೈದ ಬಿಜೆಪಿ ಕಾರ್ಯಕರ್ತ; ಆರೋಪ

Update: 2020-05-08 15:01 GMT

ಹೊಸದಿಲ್ಲಿ: ತಮ್ಮ ರಾಜ್ಯಗಳಿಗೆ ಹಿಂದಿರುಗಲು ಕಾಯುತ್ತಿದ್ದ 100ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಂದ ದುಪ್ಪಟ್ಟು ರೈಲು ಟಿಕೆಟ್ ದರ ಪಡೆದ ರಾಜೇಶ್ ವರ್ಮಾ ಎಂಬಾತ ಇದೇ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆ ನಡೆಸಿದ ರಾಜೇಶ್ ವರ್ಮಾ ಸೂರತ್ ಬಿಜೆಪಿ ಘಟಕದ ಸದಸ್ಯ ಎಂದು ಆರೋಪಿಸಲಾಗಿದೆ. ಆದರೆ ಆತ ನಮ್ಮ ಕಾರ್ಯಕರ್ತನಲ್ಲ ಎಂದು ಬಿಜೆಪಿ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.

ಬಿಜೆಪಿ ಕಾರ್ಯಕರ್ತ ಎನ್ನಲಾದ ರಾಜೇಶ್ ವರ್ಮಾ ಎಂಬಾತ ಗುಜರಾತ್ ನಲ್ಲಿ ಸಿಲುಕಿಕೊಂಡಿದ್ದ ವಿವಿಧ ರಾಜ್ಯಗಳ ಕಾರ್ಮಿಕರನ್ನು ನಂಬಿಸಿ ಅವರಿಂದ ರೈಲು ಟಿಕೆಟ್ ಗಾಗಿ ದುಪ್ಪಟ್ಟು ಹಣ ಪಡೆದಿದ್ದ. ಜಾರ್ಖಂಡ್ ಗೆ ತೆರಳಬೇಕಾದ ಕಾರ್ಮಿಕರಿಗಾಗಿ ತಾನು ಫಾರ್ಮ್ ತುಂಬಿಸಿ, ಟಿಕೆಟ್ ಖರೀದಿಸುತ್ತೇನೆ ಎಂದಿದ್ದ.

ರೈಲು ಟಿಕೆಟ್ ದರ 750 ಆಗಿದ್ದರೆ ಈತ ಪ್ರತಿಯೊಬ್ಬ ಕಾರ್ಮಿಕನಿಂದ 2000 ರೂ. ಹಣ ಪಡೆದುಕೊಂಡಿದ್ದ. ಎಲ್ಲಾ ಕಾರ್ಮಿಕರು ಹಣ ಒಟ್ಟು ಮಾಡಿ 1.40 ಲಕ್ಷ ರೂ.ಗಳನ್ನು ನೀಡಿದ್ದರು. ಆದರೆ ನಂತರ ವರ್ಮಾ ಕಾರ್ಮಿಕರ ಬಗ್ಗೆ ವಿಚಾರಿಸಿರಲಿಲ್ಲ. ಇದರಿಂದ ಆತಂಕಗೊಂಡ ಕಾರ್ಮಿಕರು ಆತನ ಕಚೇರಿ ಮುಂದೆ ಜಮಾಯಿಸಿದಾಗ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ನಮ್ಮ ಕಾರ್ಯಕರ್ತನಲ್ಲ: ಬಿಜೆಪಿ

ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ಮಾಧ್ಯಮ ವಕ್ತಾರ ಪ್ರಶಾಂತ್ ವಾಲಾ , ರಾಜೇಶ್ ವರ್ಮಾ ಬಿಜೆಪಿ ಕಾರ್ಯಕರ್ತನಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News