ದೇಶದಲ್ಲಿ ಸತತ ಮೂರನೇ ದಿನವೂ 3,000ಕ್ಕಿಂತ ಅಧಿಕ ಕೊರೋನ ಸೋಂಕು ಪತ್ತೆ

Update: 2020-05-09 03:36 GMT

ಹೊಸದಿಲ್ಲಿ: ದೇಶದಲ್ಲಿ ಸತತ ಮೂರನೇ ದಿನವೂ ಮೂರು ಸಾವಿರಕ್ಕಿಂತ ಅಧಿಕ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 60 ಸಾವಿರದ ಸನಿಹಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

600 ಪ್ರಕರಣಗಳು ಪತ್ತೆಯಾದ ತಮಿಳುನಾಡಿನಲ್ಲೂ ಆತಂಕಕಾರಿ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಗುಜರಾತ್ (390), ದೆಹಲಿ (338)ಯಲ್ಲಿ ಕೂಡಾ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಪಶ್ಚಿಮ ಬಂಗಾಳದಲ್ಲಿ 130 ಹಾಗೂ ಒಡಿಶಾದಲ್ಲಿ 51 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಆ ರಾಜ್ಯದಲ್ಲಿ ಒಂದು ದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,294 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 59,691ಕ್ಕೇರಿರಿದೆ. ಒಟ್ಟು ಸಾವಿನ ಪ್ರಮಾಣ ಕೂಡಾ 2,000 ಸನಿಹದಲ್ಲಿದ್ದು, ನಿಖರ ಸಂಖ್ಯೆ 1983.

ಮಹಾರಾಷ್ಟ್ರದಲ್ಲಿ 1089 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಂದೇ ದಿನ 37 ಮಂದಿ ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಒಟ್ಟು 93 ಸಾವು ಸಂಭವಿಸಿದ್ದು, ಗುಜರಾತ್‍ನಲ್ಲಿ 24, ಪಶ್ಚಿಮ ಬಂಗಾಳದಲ್ಲಿ 9, ಮಧ್ಯಪ್ರದೇಶದಲ್ಲಿ 8 ಹಾಗೂ ರಾಜಸ್ಥಾನದಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ತಲಾ 3, ದೆಹಲಿಯಲ್ಲಿ ಇಬ್ಬರು ಹಾಗೂ ಹರ್ಯಾಣ, ಪಂಜಾಬ್ ಮತ್ತು ಜಮ್ಮು ಕಾಶ್ಮೀರದಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ.
ಸಾವಿನ ಸಂಖ್ಯೆಯಲ್ಲೂ ಮಹಾರಾಷ್ಟ್ರ (731) ಅಗ್ರಸ್ಥಾನಿಯಾಗಿದ್ದರೆ, ಗುಜರಾತ್ (449) ಎರಡನೇ ಸ್ಥಾನದಲ್ಲಿದೆ. ಗುಜರಾತ್‍ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,403ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News