ಈ ರಾಜ್ಯದಲ್ಲಿ 700ಕ್ಕೂ ಅಧಿಕ ಪೊಲೀಸರು ಕೊರೋನ ಪೀಡಿತರು

Update: 2020-05-09 16:38 GMT

ಮುಂಬೈ/ಹೊಸದಿಲ್ಲಿ, ಮೇ 9: ಕೋವಿಡ್-19 ಹಾವಳಿಯಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ 700ಕ್ಕೂ ಅಧಿಕ ಮಂದಿ ಪೊಲೀಸರಿಗೆ ಸೋಂಕು ತಗಲಿದ್ದು, ಅವರಲ್ಲಿ ಈವರೆಗೆ 5 ಮಂದಿ ಸಾವನ್ನಪ್ಪಿದ್ದಾರೆ ರಾಜ್ಯದ ಪೊಲೀಸ್ ಇಲಾಖೆ ಶನಿವಾರ ಪ್ರಕಟಿಸಿದ ದತ್ತಾಂಶಗಳು ತಿಳಿಸಿವೆ.

ಮಾರ್ಚ್ 25ರಂದು ಕೊರೋನ ವೈರಸ್ ಹರಡುವುದನ್ನು ತೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿಕೆಯಾದ ಆನಂತರ ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದ 194 ಪ್ರಕರಣಗಳು ವರದಿಯಾಗಿವೆ ಹಾಗೂ ಇದಕ್ಕಾಗಿ 689 ಮದಿ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಮುಂಬೈಯಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿದ್ದು, 55 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಪೊಲೀಸ್ ಸಿಬ್ಬಂದಿಗಳು ಮನೆಯಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮುಂಬೈ ಮಹಾನಗರದಲ್ಲಿ ಕಳೆದ ತಿಂಗಳು ಕೋವಿಡ್-19ಗೆ ಗಣನೀಯ ಸಂಖ್ಯೆಯ ಸಾವುಗಳು ಸಂಭವಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತನ್ಮಧ್ಯೆ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿ ವರ್ಗದಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದ್ದು, ಪಾಲಿಕೆ ಆಯುಕ್ತ ಪ್ರವೀಣ್ ಪರದೇಶಿ ಅವರನ್ನು ತೆರವುಗೊಳಿಸಲಾಗಿದ್ದು, ಅವರ ಸ್ಥಾನದಲ್ಲಿ ಇಕ್ಬಾಲ್ ಚಹಾಲ್ ಅವರನ್ನು ನೇಮಿಸಲಾಗಿದೆ.

ಮಹಾರಾಷ್ಟದ್ಯಂತ ಒಟ್ಟು19 ಸಾವಿರ ಕೊರೋನಾ ಪ್ರಕರಣಗಳು ವರದಿಯಾಗಿದ್ದರೆ, ಈ ಪೈಕಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 11 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News