ನಂಜನಗೂಡು: ಊರುಗಳಿಗೆ ತೆರಳಲಾಗದೆ ಬೀದಿಗೆ ಬಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರು

Update: 2020-05-10 04:06 GMT

ಮೈಸೂರು,ಮೇ.9: ತಮ್ಮ ತಮ್ಮ ಊರುಗಳಿಗೂ ತೆರಳಲಾಗದೆ ಇಲ್ಲಿಯೂ ಇರಲಾಗದೆ ಅತಂತ್ರ ಸ್ಥಿತಿಗೆ ತಲುಪಿರುವ ನೂರಾರು ಮಂದಿ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದು ದಿನನಿತ್ಯ ನಂಜನಗೂಡಿನ ಪೊಲೀಸ್ ಠಾಣೆಗೆ ಅಲೆಯುವಂತಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ (ಕಿಂಗ್ ಫಿಷರ್) ಕಂಪನಿ ಸೇರಿದಂತೆ ಇತರೆಡೆಗಳಲ್ಲಿ ಕೂಲಿ ಕೆಲಸಕ್ಕೆಂದು ಆಗಮಿಸಿದ್ದ ಉತ್ತರ ಪ್ರದೇಶದ ನೂರಾರು ಕಾರ್ಮಿಕರು ಅತ್ತ ಕಂಪನಿಯ ಸಹಕಾರವೂ ಇಲ್ಲದೆ ಇತ್ತ ಸರ್ಕಾರದ ನೆರವೂ ಇಲ್ಲದೆ ಕಳೆದೆರಡು ದಿನಗಳಿಂದ ಊಟವೂ ಇಲ್ಲದೆ ಕಂಗೆಟ್ಟು ಹೋಗಿದ್ದಾರೆ.

ನಂಜನಗೂಡು ನಗರದ ರಾಷ್ಟ್ರೀಯ ಹೆದ್ದಾರಿ ಗುಂಡ್ಲುಪೇಟೆ ರಸ್ತೆಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದ ಫುಟ್‍ಪಾತ್‍ನಲ್ಲಿ ಕೆಲವರು ಮಲಗಿದ್ದರೆ ಇನ್ನು ಕೆಲವರು ಆಕಾಶವೇ ತಲೆಮೇಲೆ ಬಿದ್ದಂತೆ ಕುಳಿತಿದ್ದರು. ಇವರನ್ನು ಶನಿವಾರ 'ವಾರ್ತಾಭಾರತಿ' ಮಾತನಾಡಿಸಿದಾಗ, ನಮ್ಮನ್ನು ದಯವಿಟ್ಟು ನಮ್ಮ ಊರುಗಳಿಗೆ ಕಳುಹಿಸಿಕೊಡಿ ಎಂದು ಅಂಗಲಾಚಿ ತಮ್ಮ ಕಷ್ಟವನ್ನು ತೋಡಿಕೊಂಡರು.

ರಾಜ್ಯ ಸರ್ಕಾರ 'ಸೇವಾ ಸಿಂಧೂ' ಆಪ್ ಡೌನ್ ಲೋಡ್ ಮಾಡಿಕೊಂಡು ಅಲ್ಲಿ ತಮ್ಮ ಹೆಸರು ಮತ್ತು ಯಾವ ರಾಜ್ಯ ಮತ್ತು ಊರು ಎಂದು ನಮೂದಿಸಿದರೆ ಅಲ್ಲಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆಯಾದರೂ. ಆ 'ಸೇವಾ ಸಿಂಧೂ' ಆಪ್ ಸಂಪರ್ಕ ಮಾತ್ರ ಸಿಗುತ್ತಿಲ್ಲ ಎಂದು ವಲಸೆ ಕಾರ್ಮಿಕರು ಅಳಲು ತೋಡಿಕೊಳ್ಳುತಿದ್ದಾರೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಸುನೀಲ್ ಎಂಬ ವಲಸೆ ಕಾರ್ಮಿಕ ಮಾತನಾಡಿ, ನಾವು ಕಳೆದ ನಾಲ್ಕು ತಿಂಗಳ ಹಿಂದೆ ಯುಬಿ ಕಂಪನಿಗೆ ಕೆಲಸಕ್ಕೆಂದು ಬಂದೆವು. ಅಲ್ಲೆ ಪಕ್ಕದ ಗ್ರಾಮದಲ್ಲಿ ಮನೆಗಳನ್ನು ಮಾಡಿಕೊಂಡು ವಾಸಿಸುತಿದ್ದೆವು. ಲಾಕ್‍ಡೌನ್ ಆದ ಸಂದರ್ಭದಲ್ಲಿ ಸ್ವಲ್ಪ ದಿನ ಕಂಪನಿಯವರು ನಮಗೆ ಊಟ ಕೊಟ್ಟರು. ನಂತರ ಅವರು ಕೈಬಿಟ್ಟರು. ಆದರೂ ನಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ಇಷ್ಟು ದಿನ ಹೊಟ್ಟೆ ತುಂಬಿಸಿದೆವು. ಈಗ ಏನು ಮಾಡಲಾಗದೆ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿಕೊಡುವಂತೆ ದಿನ ನಿತ್ಯ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಗೆ ಅಲೆದು ಅಲೆದು ಪೊಲೀಸರನ್ನು ಗೋಗರೆಯುತ್ತಿದ್ದೇವೆ ಎಂದು ಹೇಳಿದರು.

ಸೇವಾ ಸಿಂಧೂ ಆಪ್ ನಲ್ಲಿ ನಮ್ಮ ದಾಖಲೆಯನ್ನು ನಮೂದಿಸುವಂತೆ ಹೇಳುತ್ತಾರೆ. ಅದು ಸರಿಯಾಗಿ ಕೆಲಸವನ್ನೇ ನಿರ್ವಹಿಸುತ್ತಿಲ್ಲ, ಯಾವಾಗಲೂ ಸರ್ವರ್ ಬ್ಯುಸಿ ಎಂದೇ ಹೇಳುತ್ತಿದೆ. ಇದನ್ನು ಪೊಲೀಸರ ಬಳಿ ಹೇಳಿದರೂ ಅವರು ಸೇವಾ ಸಿಂಧೂ ಆಪ್ ನಲ್ಲಿ ನಮೂದಿಸಿ ನಂತರ ನಿಮ್ಮ ಊರುಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳುತ್ತಾರೆ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು ಎಂಬ ಸ್ಥಿತಿಯಲ್ಲಿದ್ದೇವೆ. ಪ್ರತಿ ದಿನ ನಾವು ಇರುವ ಕಡೆಯಿಂದ ಪೊಲೀಸ್ ಠಾಣೆಗೆ ಹೋಗಿ ಬರಲು 16 ಕೀ.ಮಿ.ಗಳಾಗುತ್ತಿದೆ ಎಂದು ಹೇಳಿದರು.

ಮತ್ತೊಬ್ಬ ಅನಿಲ್ ಎಂಬ ಕಾರ್ಮಿಕ ಮಾತನಾಡಿ, ನಾವು ಸರಿಯಾಗಿ ಊಟ ಮಾಡಿ ಎರಡು ದಿನಗಳಾಗಿವೆ. ನಮಗೆ ಊಟವೂ ಇಲ್ಲ, ಹಣವೂ ಇಲ್ಲ, ಏನು ಮಾಡುವುದು ಎಂಬುದೇ ತೋಚುತ್ತಿಲ್ಲ, ಯಾರ ಬಳಿ ನಮ್ಮ ಕಷ್ಟವನ್ನು ಹೇಳಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದೇವೆ ಎಂದು ನೊಂದು ನುಡಿದರು.

ನಮಗೆ ಇಲ್ಲಿ ಯಾವ ಕೆಲಸವೂ ಬೇಡ, ಇವರು ಕೊಡುವ ಹಣವೂ ಬೇಡ, ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿದರೆ ಸಾಕು. ನಮ್ಮ ನಮ್ಮ ಊರುಗಳಲ್ಲೇ ಹೊಲ ಗದ್ದೆ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ನೆಮ್ಮದಿಯಾಗಿ ಬದುಕುತ್ತೇವೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ರೋಹಿತ್ ಎಂಬ ವ್ಯಕ್ತಿ ದುಖಿಃತನಾದ.

ಮತ್ತೊಬ್ಬ ಪವನ್ ಎಂಬ ವ್ಯಕ್ತಿ ಮಾತನಾಡಿ, ನಮಗೆ ಇಲ್ಲಿನ ಭಾಷೆ ಬೇರೆ ಸರಿಯಾಗಿ ಬರುವುದಿಲ್ಲ, ಸಂಬಂಧ ಪಟ್ಟ ಸಚಿವರು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡೋಣ ಎಂದರೆ ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ, ಹಿಂದಿಯಲ್ಲಿ ಹೇಳಿದರೆ ಕೆಲವರು ಸ್ಪಂಧಿಸುತ್ತಾರೆ. ಮತ್ತೆ ಕೆಲವರು ಮಾತನಾಡುವುದೇ ಇಲ್ಲ, ನಮಗೆ ದಯವಿಟ್ಟು ಏನಾದರೂ ದಾರಿ ತೋರಿಸಿ ಎಂದು ಅಲವತ್ತುಕೊಂಡರು.

ಸುರೇಂದ್ರ, ರೋಹಿತ್, ಉಮೇಶ್, ಅನಿಲ್, ಸುನೀಲ್, ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಈ ಸಂದರ್ಭದಲ್ಲಿ ಇದ್ದರು.

ಹೊರ ರಾಜ್ಯಕ್ಕೆ ಹೋಗುವವರಿಗೆ ಅಲ್ಲಿನ ಸರ್ಕಾರಗಳ ಅನುಮತಿ ಸಿಕ್ಕಿಲ್ಲ, ಹಾಗಾಗಿ ಸ್ವಲ್ಪ ತಡವಾಗಿದೆ. ಈಗಾಗಲೇ ಕಂಪನಿಗಳು ಪ್ರಾರಂಭ ಆಗಿದೆ. ಹಾಗಾಗಿ ಇಲ್ಲೇ ಕೆಲಸ ಮಾಡುವುದು ಒಳ್ಳೆಯದು. ಅವರು ಹೋಗಲೇ ಬೇಕು ಎಂದು ಬಯಸಿದರೆ ಯುಬಿ ಕಂಪನಿ ಅವರ ಮೂಲಕವೇ “ಸೇವಾ ಸಿಂಧೂ” ಆಪ್ ಮೂಲಕ ಅರ್ಜಿ ಸಲ್ಲಿಸಿ ಹೋಗಲು ಅವಕಾಶ ಕಲ್ಪಿಸಲಾಗುವುದು.
-ಎ.ಸಿ.ಶಿವಣ್ಣ, ಸಹಾಯಕ ನಿರ್ದೇಶಕರು, ಕಾಮಿರ್ಕಕ ಇಲಾಖೆ, ಮೈಸೂರು

ರಾಜ್ಯ ಸರ್ಕಾರ ನಮ್ಮಂತಹ ಅನೇಕರ ರಕ್ಷಣೆ ನಿಂತು ನಮ್ಮ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಲಿ.

-ಸುರೇಂದ್ರ, ನೊಂದ ವಲಸೆ ಕಾರ್ಮಿಕ

ವಲಸೆ ಕಾರ್ಮಿಕರ ರಕ್ಷಣೆ ನಮ್ಮ ಹೊಣೆ: ತಹಶೀಲ್ದಾರ್ ಮಹೇಶ್ ಕುಮಾರ್
ವಲಸೆ ಕಾರ್ಮಿಕರ ನೆರವಿಗೆ ಆಯಾ ಕಂಪನಿಯವರು ನಿಂತು “ಸೇವಾ ಸಿಂಧು” ಆಪ್ ಮೂಲಕ ಅವರಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದ್ದರೂ ಇಂತಹ ಪ್ರಮಾದಗಳು ನಡೆಯುತ್ತಿರುವುದು ಬೇಸರ ತರಿಸಿದೆ ಎಂದು ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್ ಹೇಳಿದರು. ವಲಸೆ ಕಾರ್ಮಿಕರ ಸ್ಥಿತಿ ಕುರಿತು “ವಾರ್ತಾಭಾರತಿ” ದೂರವಾಣಿ ಮೂಲಕ ಅವರ ಗಮನಕ್ಕೆ ತಂದಾಗ ಈ ಮೇಲಿನಂತೆ ಹೇಳಿದರು.

ವಲಸೆ ಕಾರ್ಮಿಕರ ರಕ್ಷಣೆ ನಮ್ಮ ಹೊಣೆ, ಆ ನಿಟ್ಟಿನಲ್ಲಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುವುದು. ಅವರನ್ನು ಅವರ ಊರುಗಳಿಗೆ ಕಳುಹಿಸಿಕೊಡಲು ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಹೇಳಿದರು.

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News