ಮಗಳನ್ನು ಕೊರೋನದಿಂದ ರಕ್ಷಿಸಲು 900 ಕಿ.ಮೀ. ಪಾದಯಾತ್ರೆ ಕೈಗೊಂಡ ಮಹಿಳೆ!

Update: 2020-05-10 05:26 GMT
ಸಾಂದರ್ಭಿಕ ಚಿತ್ರ

ಲಕ್ನೋ: ಕೊರೋನ ವೈರಸ್ ದವಡೆಯಿಂದ ಮಗಳನ್ನು ಪಾರು ಮಾಡುವ ಉದ್ದೇಶದಿಂದ ತಾಯಿಯೊಬ್ಬರು 900 ಕಿಲೋಮೀಟರ್ ಪಾದಯಾತ್ರೆ ಕೈಗೊಂಡ ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ.

ರುಕ್ಸಾನಾ ಎಂಬ 25 ವರ್ಷ ವಯಸ್ಸಿನ ಮಹಿಳೆ ತನ್ನ ಮೂರು ವರ್ಷದ ಕಂದಮ್ಮನನ್ನು ಹೆಗಲಲ್ಲಿ ಕೂರಿಸಿಕೊಂಡು ಈ ಸಾಹಸಯಾತ್ರೆ ಕೈಗೊಂಡವರು. ಕೊರೋನ ಸೋಂಕು ವ್ಯಾಪಕವಾಗಿರುವ ಮಧ್ಯಪ್ರದೇಶದ ಇಂಧೋರ್ ನಿಂದ ಅಮೇಥಿವರೆಗೆ 900 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿರುವ ಮಹಿಳೆ ನಿರ್ಜನ ಹೆದ್ದಾರಿಯಲ್ಲಿ, ಸುಡುಬಿಸಿಲಿನಲ್ಲಿ ಮಗುವಿನೊಂದಿಗೆ ನಡೆಯುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು.

“ನಿನ್ನೆ ರಾತ್ರಿಯಿಂದ ಮಗು ಏನೂ ತಿಂದಿಲ್ಲ; ಆಕೆಯ ಬಗ್ಗೆ ಭಯವಾಗುತ್ತಿದೆ. ನಮಗೆ ಯಾವುದೇ ವಾಹನ ಸಿಗದಿದ್ದರೆ ಪಾದಯಾತ್ರೆ ಮುಂದುವರಿಸುತ್ತೇವೆ” ಎಂದು ಕುಟುಂಬದ ಇತರ ಎಂಟು ಮಂದಿಯ ಜತೆ ತಾಯ್ನೆಲಕ್ಕೆ ಪಾದಯಾತ್ರೆ ಹೊರಟಿರುವ ಅವರು ವಿವರಿಸಿದರು.

ಅಮೇಥಿಯ ಜಗದೀಶ್‍ಪುರ ಮೂಲದ ಇವರ ಪತಿ ಅಕೀಬ್ ಇಂಧೋರ್ ನಲ್ಲಿ ವಾಸವಿದ್ದಾರೆ. ಹೋಟೆಲ್ ಒಂದರಲ್ಲಿ ಅವರು ವೈಟರ್ ಕೆಲಸ ಮಾಡುತ್ತಿದ್ದರೆ, ರುಕ್ಸಾನಾ ಮನೆಗೆಲಸ ಮಾಡುತ್ತಾರೆ. ಪತಿಗೆ ಸಿಗುವ 9,000 ರೂಪಾಯಿಯಲ್ಲಿ ಕುಟುಂಬ ನಿರ್ವಹಣೆ ಮಾಡಿ, ತಾನು ಗಳಿಸುವ 3,000 ರೂಪಾಯಿಗಳನ್ನು ಮಗಳ ಭವಿಷ್ಯಕ್ಕಾಗಿ ಉಳಿಸುತ್ತಿದ್ದಾರೆ. ಮಗಳು ನರ್ಗೀಸ್‍ಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆಯಿಂದ 8ನೇ ತರಗತಿಯಿಂದ ಮುಂದೆ ತಾವು ಓದದೇ ಮನೆಗೆಲಸಕ್ಕೆ ಸೇರಿಕೊಂಡಿದ್ದಾರೆ.

ಕೊರೋನ ಸೋಂಕು ಹಾಗೂ ಲಾಕ್‍ಡೌನ್‍ನಿಂದಾಗಿ ಈ ದಂಪತಿ ಉದ್ಯೋಗ ಕಳೆದುಕೊಂಡು, ಉಳಿತಾಯದ ಹಣ ಸ್ವಲ್ಪ ದಿನದಲ್ಲೇ ಕರಗಿತು. ಆದರೆ ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟ ಹಣದಿಂದ ಒಂದು ಪೈಸೆಯನ್ನೂ ರುಕ್ಸಾನಾ ತೆಗೆಯಲಿಲ್ಲ. ಪಟ್ಟಣದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಪ್ರಯಾಣ ಬೆಳೆಸಲು ನಿರ್ಧರಿಸಿದರು.

ಮಗಳಿಗೆ ಸೋಂಕು ತಡೆಯದಂತೆ ಮಾಡಲು ಈ ಊರು ಬಿಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದ ರುಕ್ಸಾನಾ, ಪತಿ ಒಪ್ಪದಿದ್ದರೂ ಸಂಬಂಧಿಕರ ಜತೆ ಕಾಲ್ನಡಿಗೆಯಲ್ಲಿ ಅಮೇಥಿಗೆ ವಾಪಾಸ್ಸಾಗಲು ನಿರ್ಧರಿಸಿದರು. ಒಂದಷ್ಟು ಬಿಸ್ಕೆಟ್, ಜಾಮ್ ಮತ್ತು ಬಟ್ಟೆಯಲ್ಲಿ ಪ್ಯಾಕ್ ಮಾಡಿಕೊಂಡು ಬುಧವಾರ ರಾತ್ರಿ ಇಂಧೋರ್ ನಿಂದ ಪ್ರಯಾಣ ಆರಂಭಿಸಿದರು. ಎರಡು ಸಲ ಟ್ರಕ್ ಹಾಗೂ ಟ್ರ್ಯಾಕ್ಟರ್ ನಲ್ಲಿ ಲಿಫ್ಟ್ ಸಿಕ್ಕಿದ ಬಳಿಕ 24 ಗಂಟೆಗೂ ಹೆಚ್ಚು ನಡೆದು ಶನಿವಾರ ಲಕ್ನೋ ತಲುಪಿದ್ದಾರೆ. ಆದರೆ ಇದೀಗ ಪಾದಯಾತ್ರೆ ಹೊರಟ ಎಲ್ಲರೂ ಬಳಲಿದ್ದಾರೆ.

ಕಾಲಿಗೆ ಆಗಿರುವ ಗಾಯಕ್ಕೆ ಔಷಧಿ ಹಚ್ಚಿ ರಸ್ತೆ ಬದಿ ಒಂದಷ್ಟು ವಿಶ್ರಾಂತಿ ಪಡೆದು ಮತ್ತೆ ಈ ತಂಡ ಹೊರಟಿದೆ. ಸುಡುಬಿಸಿಲಿನಿಂದ ರಕ್ಷಣೆ ಪಡೆಯಲು ಮಗುವಿನ ತಲೆಗೆ ಬಟ್ಟೆಯ ತುಂಡು ಹೊದೆಸಿ, ರುಕ್ಸಾನಾ ನಡಿಗೆ ಮುಂದುವರಿಸಿದ್ದಾರೆ.. ಎಲ್ಲ ಮಗುವಿಗಾಗಿ.. ಮಗುವಿನ ಭದ್ರ ಭವಿಷ್ಯಕ್ಕಾಗಿ...ಅಂದ ಹಾಗೆ ಇಂದು ವಿಶ್ವ ತಾಯಂದಿರ ದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News