ಕೇರಳ: ವಿದೇಶದಿಂದ ಆಗಮಿಸಿದ ಇನ್ನೂ ಮೂವರಲ್ಲಿ ಸೋಂಕು ಪತ್ತೆ

Update: 2020-05-10 18:13 GMT

ಕೊಚ್ಚಿ, ಮೇ.10: ದುಬೈ, ಅಬುದಾಭಿಗಳಿಂದ ಏರ್ ಇಂಡಿಯಾದ ವಿಶೇಷ ವಿಮಾನಗಳಲ್ಲಿ ಗುರುವಾರ ಕೇರಳಕ್ಕೆ ಆಗಮಿಸಿದ 363 ಭಾರತೀಯರ ಪೈಕಿ ಇನ್ನೂ ಮೂರು ಮಂದಿಗೆ ಕೊರೋನ ಸೋಂಕು ಇರುವುದು ರವಿವಾರ ದೃಢಪಟ್ಟಿದೆ.

ಶನಿವಾರ ದುಬೈ ಹಾಗೂ ಅಬುಧಾಬಿಯಿಂದ ಆಗಮಿಸಿದ ಇಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಮತ್ತೆ ಇಂತಹ ಮೂರು ಪ್ರಕರಣಗಳು ವರದಿಯಾಗುವುದರೊಂದಿಗೆ ವಿದೇಶದಿಂದ ಕೇರಳಕ್ಕೆ ಕರೆತಂದವರ ಪೈಕಿ ಸೋಂಕಿತರ ಸಂಖ್ಯೆ 5ಕ್ಕೇರಿದೆ.

ದುಬೈ, ಅಬುದಾಭಿಗಳಿಂದ ವಿಶೇಷ ವಿಮಾನಗಳನ್ನು ಏರುವ ಮುನ್ನ ಅವರನ್ನು ವಿಮಾನನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಆದಾಗ್ಯೂ ಕೇರಳದಲ್ಲಿ ಅವರನ್ನು ಸಮರ್ಪಕವಾಗಿ ಪರೀಕ್ಷಿಸಿದಾಗ ಅವರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಆರಂಭಿಕ ಹಂತದಲ್ಲಿ ಕೊರೋನ ಹಾವಳಿಯಿಂದ ತೀವ್ರವಾಗಿ ತತ್ತರಿಸಿದ ಕೇರಳದಲ್ಲಿ 512 ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಆದರೆ ಕೆಲವೇ ವಾರಗಳಲ್ಲಿ ಅದು ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿ ಯಾಗಿತ್ತು. ಈ ಐದು ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ಕೇರಳದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ 20ಕ್ಕೇರಿದೆ.

ಕೇರಳದಲ್ಲಿ ಕೊರೋನಾ ಸೋಂಕಿನಿಂದ ಈವರೆಗೆ ಕೇವಲ ನಾಲ್ವರು ಮಾತ್ರವೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News