​ಏಳು ಬಾರಿ ಕೊರೋನ ಪರೀಕ್ಷೆಯಲ್ಲೂ ಈ ಯುವಕ ಪಾಸಿಟಿವ್ !

Update: 2020-05-11 03:48 GMT
ಸಾಂದರ್ಭಿಕ ಚಿತ್ರ

ವಡೋದರ: ಕಳೆದ ಒಂದು ತಿಂಗಳಿನಿಂದ ಪ್ರತ್ಯೇಕವಾಗಿ ಇರುವ 19 ವರ್ಷದ ಯುವಕ ಜೈ ಪಂತಿ ಎಂಬಾತನನ್ನು ಏಳು ಬಾರಿ ಕೊರೋನ ವೈರಸ್ ಸೋಂಕಿಗಾಗಿ ಪರೀಕ್ಷೆ ನಡೆಸಿದಾಗಲೂ ಪಾಸಿಟಿವ್ ಫಲಿತಾಂಶ ಬಂದಿದೆ.

ವಡೋದರ ಹೈಸ್ಪೀಡ್ ರೈಲ್ವೆ ತರಬೇತಿ ಸಂಸ್ಥೆಯಲ್ಲಿರುವ ಕೋವಿಡ್-19 ಸೋಂಕಿತರ ಪೈಕಿ ಪಂತಿ ಕೂಡಾ ಒಬ್ಬ. ರೋಗಲಕ್ಷಣ ಕಂಡುಬಾರದ ರೋಗಿಗಳು ಹಾಗೂ ಸೌಮ್ಯ ಲಕ್ಷಣ ಕಂಡುಬಂದ ರೋಗಿಗಳನ್ನು ಇಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಈತನಲ್ಲಿ ರೋಗ ಪತ್ತೆಯಾದಾಗಿನಿಂದಲೂ ಯಾವುದೇ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಕಫ ಇಲ್ಲ; ಬಳಲಿಕೆ ಅಥವಾ ತಲೆನೋವು ಕೂಡಾ ಇಲ್ಲ. ಮೊದಲ ದಿನದಿಂದಲೂ ನಾನು ಚೆನ್ನಾಗಿದ್ದೇನೆ ಎಂದು ತನ್ನ ಕೊಠಡಿಯ ಹೊರಗೆ ಕಾರಿಡಾರ್‌ನಲ್ಲಿ ಆರಾಮವಾಗಿದ್ದ ಪಂತಿ ಹೇಳುತ್ತಾನೆ. ಹಲವು ಬಾರಿ ಟೈಂಪಾಸ್‌ಗಾಗಿ ಕಾರಿಡಾರ್‌ನಲ್ಲಿ ಓಡಾಡುತ್ತಿರುವುದಾಗಿ ವಿವರಿಸುತ್ತಾನೆ.

ಮಾಡಲು ಏನೂ ಕೆಲಸವಿಲ್ಲ; ಕಾರಿಡಾರ್‌ನಲ್ಲಿ ಅಡ್ಡಾಡುತ್ತಾ, ಸಿನಿಮಾ ನೋಡುತ್ತಾ, ಫೋನ್‌ನಲ್ಲಿ ಮಾತನಾಡುತ್ತಾ, ಗೇಮ್ ಆಡುತ್ತಾ ಆರಾಮವಾಗಿದ್ದೇನೆ. ಹೀಗೆ ಹಲವು ದಿನ ಕಳೆದಿದೆ ಎಂದು ಹೇಳುತ್ತಾನೆ. ಮೇ 12ಕ್ಕೆ ಪಂತಿಯ ಸುರಕ್ಷಿತ ಪ್ರತ್ಯೇಕತೆಗೆ ಒಂದು ತಿಂಗಳು ತುಂಬುತ್ತದೆ.

ಏಪ್ರಿಲ್ 12ರಂದು ಪಂತಿ ಹಾಗೂ ಆತನ ಪೋಷಕರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪಕ್ಕದ ಮನೆಯಲ್ಲಿ ಮಗುವೊಂದು ಅಸ್ವಸ್ಥವಾಗಿ ಮೃತಪಟ್ಟ ಬಳಿಕ ಈ ಕುಟುಂಬ ಸ್ವಯಂಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಂಡಿತ್ತು. ಆರಂಭದಲ್ಲಿ ಮಗು ಕೊರೋನ ವೈರಸ್‌ನಿಂದ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿತ್ತು. ಆದರೆ ಬಳಿಕ ಅದು ಡೆಂಗ್ಯೂ ಎಂದು ಖಚಿತವಾಯಿತು.

ವಡೋದರ ಎಂಎಸ್ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಯಾಗಿರುವ ಪಂತಿಯ ಪೋಷಕರು ಕೋವಿಡ್-19 ಹಾಟ್‌ಸ್ಪಾಟ್ ಎನಿಸಿದ ನಗರವಾಡದಲ್ಲಿ ವಾಸವಿದ್ದಾರೆ. ಎಲ್ಲರನ್ನೂ ಗೋತ್ರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ದಿನ ಪಂತಿ ಅಲ್ಲಿದ್ದ. 13 ದಿನಗಳ ಬಳಿಕ ಪೋಷಕರನ್ನು ಪರೀಕ್ಷೆಗೆ ಗುರಿಪಡಿಸಿದಾಗ ಫಲಿತಾಂಶ ನೆಗೆಟಿವ್ ಬಂದಿದೆ. ಈತನಲ್ಲಿ ಯಾವ ರೋಗಲಕ್ಷಣವೂ ಇಲ್ಲದ ಹಿನ್ನೆಲೆಯಲ್ಲಿ ವಾರದ ಹಿಂದೆ ಕ್ವಾರಂಟೈನ್ ವ್ಯವಸ್ಥೆಗೆ ಸ್ಥಳಾಂತರಿಸಲಾಗಿತ್ತು. ನನಗೆ ಪದೇ ಪದೇ ಏಕೆ ಪಾಸಿಟಿವ್ ಫಲಿತಾಂಶ ಬರುತ್ತಿದೆ ಎಂದು ತಾಯಿಗೆ ಚಿಂತೆಯಾಗಿತ್ತು. ಆದರೆ ನನಗೆ ಭಯವಿಲ್ಲ. ಈ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಯುವಕ ಪ್ರಶ್ನಿಸುತ್ತಾನೆ. ಏಳು ದಿನದ ಅಂತರದಲ್ಲಿ ಸತತ ಎರಡು ಬಾರಿ ನೆಗೆಟಿವ್ ಫಲಿತಾಂಶ ಬಂದಲ್ಲಿ ಮಾತ್ರ ರೋಗಿಯನ್ನು ಬಿಡುಗಡೆ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News