ಫ್ಯಾಶಿಸಂ ಪತನದ ಮರೆಯದ ಕತೆ

Update: 2020-05-11 09:39 GMT

ಹಿಟ್ಲರ್ ಜರ್ಮನಿಯ ಜನರನ್ನು ಯಾವ ಪರಿ ಹುಚ್ಚರನ್ನಾಗಿ ಮಾಡಿದ್ದನೆಂದರೆ ಯಹೂದಿಗಳು ನಾಶವಾದರೆ ಎಲ್ಲ ಸಮಸ್ಯೆಗಳು ತನ್ನಿಂದ ತಾನೇ ನಿವಾರಣೆಯಾಗುತ್ತವೆ ಎಂದು ನಂಬಿಸಿದ್ದ. ಈ ಹಿಟ್ಲರನಿಗೆ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ. ಆತ ಆಗಾಗ ಏನು ಹೇಳುತ್ತಿದ್ದನೆಂದರೆ, ‘ಒಂದು ಸುಳ್ಳನ್ನು ನೂರಿ ಬಾರಿ ಹೇಳಿದರೆ ಅದನ್ನು ಜನ ಸತ್ಯವೆಂದು ನಂಬುತ್ತಾರೆ’ ಎನ್ನುತ್ತಿದ್ದ. ಹಿಟ್ಲರ್ ಮತ್ತು ನಾಝಿ ಪಾರ್ಟಿಯ ಬಗ್ಗೆ ಇಂತಹ ಸುಳ್ಳುಗಳನ್ನು ಹೇಳಿ ಜನರನ್ನು ಮೂರ್ಖರನ್ನಾ ಗಿಸುವಲ್ಲಿ ಆತ ಯಶಸ್ವಿಯಾಗಿದ್ದ. ಈಗ ಭಾರತದಲ್ಲಿ ನಡೆಯುತ್ತಿರುವುದು ಅದರ ತದ್ರೂಪ ಮಾದರಿ.

ಜಗತ್ತನ್ನೇ ಆಳುವ ಕನಸು ಕಂಡ ಹಿಟ್ಲರ್ ನಡೆಸಿದ ನರಮೇಧವನ್ನು ಜಗತ್ತು ಎಂದೂ ಮರೆಯಲು ಸಾಧ್ಯವಿಲ್ಲ. ಸುಮಾರು 60 ಲಕ್ಷ ಯಹೂದಿಗಳನ್ನು ಪೈಶಾಚಿಕವಾಗಿ ಕೊಂದು ಹಾಕಿದ. ಮುಗ್ಧ ಕಂದಮ್ಮಗಳನ್ನು ಕೊಚ್ಚಿ ಹಾಕಿದ. ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ ಓಡಾಡಿಸಿ, ಹಿಂಸಿಸಿದ. ಈ ಹಿಟ್ಲರ್ ಮಾಡಿದ ನರಮೇಧಗಳ ಕುರಿತ ಮ್ಯೂಝಿಯಂಗಳು ಜರ್ಮನಿಯಲ್ಲಿವೆ. ಅಲ್ಲಿ ವಿದೇಶದಿಂದ ನೋಡಲು ಹೋದವರೆದುರು ಜರ್ಮನಿಯ ಇಂದಿನ ಪೀಳಿಗೆಯ ಜನ ತಮ್ಮ ದೇಶದಲ್ಲಿ ನಡೆದ ನರಮೇಧದ ಬಗ್ಗೆ ನಾಚಿಕೆಯಿಂದ ನೋವಿನಿಂದ ತಲೆ ತಗ್ಗಿಸುತ್ತಾರೆ. ಹಿಟ್ಲರ್ ನಮ್ಮ ದೇಶದ ಕಪ್ಪು ಚುಕ್ಕೆ ಎಂದು ಹೇಳುತ್ತಾರೆ. ಜರ್ಮನಿಯಲ್ಲಿ ನಡೆದ ಲಕ್ಷಾಂತರ ಜನರ ಹತ್ಯೆಯ ಬಗ್ಗೆ, ಯಾತನಾ ಶಿಬಿರದ ಕುರಿತು ಗ್ಯಾಸ್ ಚೇಂಬರ್ ಬಗ್ಗೆ ಜಗತ್ತಿನಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ. ಕನ್ನಡದಲ್ಲಿ ಗಿರೀಶ್ ಜಕಾಪುರೆ ಅವರ ‘ನಾಝಿ ನರಮೇಧ’ ಮತ್ತು ಪಲ್ಲವಿ ಇಡೂರು ಅವರ ‘ಜೊಲಾಂಟಾ’ ಕೃತಿಗಳು ಓದುಗರ ಗಮನ ಸೆಳೆದಿವೆ.

ಕಳೆದ ಶತಮಾನದ ಎರಡನೇ ದಶಕದಲ್ಲಿ ಜರ್ಮನಿ ಮತ್ತು ಇಟಲಿಗಳಲ್ಲಿ ಫ್ಯಾಶಿಸಂ ತಲೆ ಎತ್ತಿತು. ಆಗ ಜರ್ಮನಿ ಔದ್ಯಮೀಕರಣದಲ್ಲಿ ಮುಂದುವರಿದ ದೇಶವಾಗಿತ್ತು. ಆದರೆ, ಮಾರುಕಟ್ಟೆ ವಿಸ್ತರಣೆಗಾಗಿ ಬಂಡವಾಳಶಾಹಿ ದೇಶಗಳಲ್ಲಿ ಪೈಪೋಟಿ ಆರಂಭವಾದಾಗ, ಮೊದಲನೇ ಮಹಾಯುದ್ಧ ನಡೆದು ಜರ್ಮನಿ ಪರಾಭವಗೊಂಡಿತು. ಆಗ ಜರ್ಮನಿಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ನಿರುದ್ಯೋಗ ತಾಂಡವವಾಡತೊಡಗಿತು. ಈ ಸೋಲು ಜರ್ಮನಿಯ ಜನರ ಸ್ವಾಭಿಮಾನಕ್ಕೆ ಚೇತರಿಸಲಾಗದ ಪೆಟ್ಟು ಕೊಟ್ಟಿತು. ಇದನ್ನು ಬಳಸಿಕೊಂಡ ಹಿಟ್ಲರ್ ನಾಝಿ ಪಾರ್ಟಿ ಕಟ್ಟಿ ಹುಸಿ ಸ್ವಾಭಿಮಾನ ಮತ್ತು ಜನಾಂಗೀಯ ಭಾವನೆ ಕೆರಳಿಸಿದ.

ಶುದ್ಧ ಆರ್ಯನ್ ಜನಾಂಗದ ಜರ್ಮನರು ಇಡೀ ಜಗತ್ತನ್ನೇ ಆಳಲು ವಿಧಿ ನಿಯಾಮಕರಾದವರು ಎಂದು ಅವರ ಭಾವನೆಗಳನ್ನು ಬಡಿದೆಬ್ಬಿಸಿದ. ‘ಜರ್ಮನ್ ಜರ್ಮನರಿಗಾಗಿ’ ಎಂದು ಘೋಷಣೆ ಹಾಕಿದ. ಅಲ್ಪಸಂಖ್ಯಾತರಾದ ಯಹೂದಿಗಳ ಮೇಲೆ ದಾಳಿ ನಡೆಸಿ ಸಾವಿರಾರು ಜನರನ್ನು ಗ್ಯಾಸ್ ಚೇಂಬರ್‌ಗೆ ಹಾಕಿ ಸುಟ್ಟು ಬೂದಿ ಮಾಡಿದ. ನಮ್ಮ ದೇಶದ ಹಿಂದೂ ರಾಷ್ಟ್ರ ಕಟ್ಟಲು ಹೊರಟವರಿಗೆ ಸ್ಫೂರ್ತಿಯಾಗಿದ್ದು ಹಿಟ್ಲರ್ ಮತ್ತು ಮುಸ್ಸೋಲಿನಿ.

ಇಡೀ ಜಗತ್ತು ಈಗ ಕೊರೋನ ವೈರಾಣುವಿನ ಹೊಡೆತದಿಂದ ತತ್ತರಿಸಿದೆ. ಎಲ್ಲ ದೇಶಗಳಲ್ಲಿ ಸಾವಿನ ಸೂತಕದ ವಾತಾವರಣ ಉಂಟಾಗಿದೆ. ಮನುಕುಲವೇ ಎಲ್ಲಿ ನಾಶವಾಗಿ ಹೋಗುತ್ತದೇನೋ ಎಂಬ ಭೀತಿ ಉಂಟಾಗಿದೆ. ಆದರೂ ವಿಷಾದದ ಸಂಗತಿಯೆಂದರೆ ಮನುಷ್ಯರೆಲ್ಲ ಒಂದಾಗಿ ಇದನ್ನು ಎದುರಿಸಬೇಕಾದ ಅನಿವಾರ್ಯತೆಯಿದ್ದಾಗಲೂ ಆತ ತನ್ನ ಸಣ್ಣತನಗಳಿಂದ ಹೊರಗೆ ಬಂದಿಲ್ಲ. ಜಾತಿ, ಜನಾಂಗ ದ್ವೇಷ ಹೆಡೆಯಾಡುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಮೊನ್ನೆ ಶನಿವಾರ ಜಗತ್ತಿನ ಪ್ರಜ್ಞಾವಂತ ಜನ ಜರ್ಮನಿಯಲ್ಲಿ ಹಿಟ್ಲರನ ಫ್ಯಾಶಿಸ್ಟ್ ಸಾಮ್ರಾಜ್ಯವನ್ನು ಮಣ್ಣುಮುಕ್ಕಿಸಿದ ದಿನವನ್ನು ಆಚರಿಸಿದರು.

ಹಿಟ್ಲರನ ನಾಝಿವಾದದಿಂದ ಮತಾಂಧತೆಯ ಮತ್ತೇರಿಸಿಕೊಂಡ ಜನರಿಂದ ಅಪಾಯದ ಅಂಚಿನಲ್ಲಿರುವ ಭಾರತದ ಸರ್ವ ಜನಾಂಗದ ಶಾಂತಿಯ ತೋಟದ ಜನರು ತಮ್ಮನ್ನು ತಾವು ಉಳಿಸಿಕೊಳ್ಳಲು ಸಾವು ಬದುಕಿನ ಸಂಘರ್ಷ ನಡೆಸಬೇಕಾದ ದಿನಗಳಲ್ಲಿ ಜರ್ಮನಿಯ ಕರಾಳ ನಾಜಿ ಸಾಮ್ರಾಜ್ಯ ಕುಸಿದು ಬಿದ್ದ ಚರಿತ್ರೆ ನಮಗೆ ಮಾರ್ಗದರ್ಶಕವಾಗಬೇಕಾಗಿದೆ.

ಹಿಟ್ಲರ್ ಯಶಸ್ವಿಯಾಗಲು ಕಾರಣ ಜರ್ಮನಿಯ ಎಡಪಂಥೀಯ ಪಕ್ಷಗಳಾದ ಜರ್ಮನ್ ಕಮ್ಯುನಿಸ್ಟ್ ಪಾರ್ಟಿ ಮತ್ತು ಸೋಷಲಿಸ್ಟ್ ಪಾರ್ಟಿಗಳ ನಡುವಿನ ಒಡಕು. ಇಂತಹ ಒಡಕುಗಳೇ ಜನ ಹಂತಕ ಫ್ಯಾಶಿಸ್ಟ್ ಪಕ್ಷಗಳು ಅಧಿಕಾರಕ್ಕೆ ಬರಲು ಕಾರಣ. ಜರ್ಮನಿಯ ಕಾರ್ಮಿಕ ವರ್ಗ ಕೂಡ ಹಿಟ್ಲರನ ಜನಾಂಗೀಯ ದ್ವೇಷದ ಮೋಡಿಗೆ ಮರುಳಾಗಿತ್ತು. ಆದರೆ ಕಮ್ಯುನಿಸ್ಟರು, ಎಡಪಂಥೀಯ ಚಿಂತಕರು, ಸಾಹಿತಿಗಳು ಪ್ಯಾಶಿಸಂ ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿ ತ್ಯಾಗ ಬಲಿದಾನ ಮಾಡಿದರು.

ಕೊನೆಗೆ ಮಿತ್ರ ರಾಷ್ಟ್ರಗಳು ನಾಝಿ ಜರ್ಮನಿಯ ವಿರುದ್ಧ ಸಮರ ಸಾರಿದರೂ ನೇರವಾಗಿ ಕಾರ್ಯಾಚರಣೆಗೆ ಇಳಿದದ್ದು ರಶ್ಯದ ಕೆಂಪುಸೇನೆ. ತೀವ್ರ ಪ್ರತಿಕೂಲ ಸನ್ನಿವೇಶದಲ್ಲಿ ಸಮರಾಂಗಣಕ್ಕೆ ಇಳಿದ ಕೆಂಪು ಸೇನೆ ಜರ್ಮನಿಯ ರಾಜಧಾನಿ

 ಬರ್ಲಿನ್‌ಗೆ ನುಗ್ಗಿ ಅಲ್ಲಿನ ಪಾರ್ಲಿಮೆಂಟ್ ರಿಚ್ ಸ್ಟಾಗ್ ಮೇಲೆ ಕೆಂಬಾವುಟ ಹಾರಿಸಿತು. ಕೆಂಪು ಸೇನೆಯ ಪ್ರವೇಶವಾಗುತ್ತಿದ್ದ ವೇಳೆ ರಹಸ್ಯ ಬಂಕರ್‌ನಲ್ಲಿ ಅಡಗಿ ಕೂತಿದ್ದ ಹಿಟ್ಲರ್ ತನ್ನ ಪ್ರೇಯಸಿಯೊಂದಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಕೆಂಪುಸೇನೆಯ ಈ ಗೆಲುವನ್ನು ಜಗತ್ತು ಸ್ವಾಗತಿಸಿತು.

ಮಹಾತ್ಮಾ ಗಾಂಧೀಜಿ ಕೂಡ ಈ ಗೆಲುವಿಗೆ ಸಂಭ್ರಮಪಟ್ಟರು.

   ಇಡೀ ಜಗತ್ತೇ ಹಿಟ್ಲರನ ಫ್ಯಾಶಿಸಂನಿಂದ ಅಪಾಯ ಎದುರಿಸುತ್ತಿರುವಾಗ ಸಮಾಜವಾದಿ ಸೋವಿಯತ್ ರಶ್ಯದ ಅಧ್ಯಕ್ಷರಾಗಿದ್ದವರು ಜೋಸೆಫ್ ಸ್ಟಾಲಿನ್. ಆಗ ಬ್ರಿಟನ್‌ನಲ್ಲಿ ಚರ್ಚಿಲ್, ಅಮೆರಿಕದಲ್ಲಿ ರೂಸ್ ವೆಲ್ಟ್ ರಾಷ್ಟ್ರಾಧ್ಯಕ್ಷರಾಗಿದ್ದರು. ಅವರ ಸೈದ್ಧಾಂತಿಕ ನಿಲುವುಗಳು ವಿಭಿನ್ನವಾಗಿದ್ದರೂ ಮೂವರು ಮಹಾ ಮುತ್ಸದ್ದಿಯಾಗಿದ್ದರು. ಮನುಕುಲಕ್ಕೆ ಕಂಟಕಕಾರಿಯಾದ ಹಿಟ್ಲರನ ಹುಟ್ಟಡಗಿಸಲು ಮೂವರೂ ಒಂದಾದರು. ಅದು ಆಗ ಅನಿವಾರ್ಯವಾಗಿತ್ತು. ಅಂತಹ ಸನ್ನಿವೇಶದಲ್ಲಿ ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು. ಆಗ ಸ್ವಾತಂತ್ರ ಹೋರಾಟದ ಚುಕ್ಕಾಣಿ ಹಿಡಿದಿದ್ದ ಗಾಂಧೀಜಿಗೆ ಧರ್ಮಸಂಕಟ ಎದುರಾಯಿತು.

ಹಿಟ್ಲರನ ಫ್ಯಾಶಿಸಂ ವಿರುದ್ಧ ವಿಶ್ವ ಸಮರದಲ್ಲಿ ರಶ್ಯದ ಜೊತೆಗೂಡಿದ್ದ ಬ್ರಿಟಿಷ್ ಸರಕಾರದ ಪರವಾಗಿರಬೇಕೋ ಬೇಡವೋ ಎಂಬ ಹೊಯ್ದಿಟ ನಡೆದಿತ್ತು. ಭಾರತದ ಕಮ್ಯುನಿಸ್ಟರು ಮೊದಲು ಪ್ಯಾಶಿಸಂ ಸೋಲು ನಂತರ ಸ್ವಾತಂತ್ರ ಹೋರಾಟ ಎಂಬ ನಿಲುವು ತಾಳಿದರು. ಕಮ್ಯುನಿಸ್ಟರು ಮಾತ್ರವಲ್ಲ ಡಾ.ಅಂಬೇಡ್ಕರ್ ಅವರು ಕೂಡ ‘ಪ್ರಜಾಪ್ರಭುತ್ವವೋ ನಾಝಿವಾದವೋ, ಎರಡರಲ್ಲಿ ಒಂದನ್ನು ಆರಿಸಿಕೊಳ್ಳಿ’ ಎಂದು ಆಗ್ರಹಿಸಿದರು. ಗಾಂಧೀಜಿಗೆ ಕೂಡ ಫ್ಯಾಶಿಸಂ ಅಪಾಯದ ಅರಿವಿತ್ತು.

 ಹಿಟ್ಲರ್ ಜರ್ಮನಿಯ ಜನರನ್ನು ಯಾವ ಪರಿ ಹುಚ್ಚರನ್ನಾಗಿ ಮಾಡಿದ್ದನೆಂದರೆ ಯಹೂದಿಗಳು ನಾಶವಾದರೆ ಎಲ್ಲ ಸಮಸ್ಯೆಗಳು ತನ್ನಿಂದ ತಾನೇ ನಿವಾರಣೆಯಾಗುತ್ತವೆ ಎಂದು ನಂಬಿಸಿದ್ದ. ಈ ಹಿಟ್ಲರನಿಗೆ ಗೊಬೆಲ್ಸ್ ಎಂಬ ಪ್ರಚಾರ ಮಂತ್ರಿ ಇದ್ದ. ಆತ ಆಗಾಗ ಏನು ಹೇಳುತ್ತಿದ್ದನೆಂದರೆ, ‘ಒಂದು ಸುಳ್ಳನ್ನು ನೂರಿ ಬಾರಿ ಹೇಳಿದರೆ ಅದನ್ನು ಜನ ಸತ್ಯವೆಂದು ನಂಬುತ್ತಾರೆ’ ಎನ್ನುತ್ತಿದ್ದ. ಹಿಟ್ಲರ್ ಮತ್ತು ನಾಝಿ ಪಾರ್ಟಿಯ ಬಗ್ಗೆ ಇಂತಹ ಸುಳ್ಳುಗಳನ್ನು ಹೇಳಿ ಜನರನ್ನು ಮೂರ್ಖರನ್ನಾಗಿಸುವಲ್ಲಿ ಆತ ಯಶಸ್ವಿಯಾಗಿದ್ದ. ಈಗ ಭಾರತದಲ್ಲಿ ನಡೆಯುತ್ತಿರುವುದು ಅದರ ತದ್ರೂಪ ಮಾದರಿ.

ಇಡೀ ಮನುಕುಲಕ್ಕೆ ಮಾರಕವಾದ ಫ್ಯಾಶಿಸಂ ವಿರುದ್ಧ್ದ ಹೋರಾಡಿದ ಎಷ್ಟೋ ಲೇಖಕರು, ಕವಿಗಳು, ನಾಟಕಕಾರರು ಜೈಲು ಪಾಲಾಗುತ್ತಾರೆ. ರೋಸಾ ಲಕ್ಸಂಬರ್ಗ್ ಅಂತಹವರು ಕೊಲ್ಲಲ್ಪಡುತ್ತಾರೆ. ಅಂಟೊನಿಯ ಗ್ರಾಮ್ಷಿ ಅಂಥವರು ಸರೆಮನೆಯಲ್ಲೇ ಕೊನೆಯುಸಿರೆಳೆಯುತ್ತಾರೆ. ಹಿಟ್ಲರನ ಬಗ್ಗೆ ಚಾರ್ಲಿ ಚಾಪ್ಲಿನ್ ನಿರ್ಮಿಸಿದ ‘ಗ್ರೇಟ್ ಡಿಕ್ಟೆಟರ್’ ಚಿತ್ರ ಇವತ್ತಿಗೂ ಜನರ ಮೆಚ್ಚುಗೆ ಗಳಿಸಿದೆ.

ಇಷ್ಟೆಲ್ಲ ನಡೆದು ಎಪ್ಪತ್ತೈದು ವರ್ಷಗಳಾದವು. ಆದರೆ, ಮನುಷ್ಯ ಇತಿಹಾಸದಿಂದ ಪಾಠ ಕಲಿತ ಉದಾಹರಣೆಗಳು ತುಂಬ ಕಡಿಮೆ. ತಮ್ಮ ಮೈಯಲ್ಲಿ ಹರಿಯುವ ರಕ್ತ ಕೆಂಪುರಕ್ತ ಎಂದು ಗೊತ್ತಿದ್ದರೂ ಮನುಷ್ಯ ಜಾತಿ ಮತಗಳ ಕೃತಕ ತಿಮಿರದಾಳದಿಂದ ಹೊರಗೆ ಬರಲಾಗಲೇ ಇಲ್ಲ. ಈಗ ಹಿಟ್ಲರನ ಭೂತ ಮತ್ತೆ ಅಲ್ಲಲ್ಲಿ ಹಲವರ ಮೈಯಲ್ಲಿ ಹೊಕ್ಕು ಅನಾಹುತ ಮಾಡುತ್ತಿದೆ.

 ಈಗ ಸೋವಿಯತ್ ರಶ್ಯ ಇಲ್ಲ, ಸ್ಟಾಲಿನ್ ಇಲ್ಲ, ಕೆಂಪುಸೇನೆ ಇಲ್ಲ. ಆದರೆ ಆ ಸ್ಫೂರ್ತಿಯ ಇತಿಹಾಸ ನಮ್ಮ ಕಣ್ಣಿನ ಮುಂದಿದೆ. ಕೊರೋನ ಎಂಬ ಮಾರಕ ವೈರಾಣುವಿನ ವಿರುದ್ಧ ಮಾತ್ರವಲ್ಲ ಫ್ಯಾಶಿಸಂ ಎಂಬ ಜನಹಂತಕ ಪಿಡುಗಿನ ವಿರುದ್ಧವೂ ಸಮರ ನಡೆಯಬೇಕಾಗಿದೆ. ಇದು ಸೋಲಿಲ್ಲದ ಬೆಳಕಿನ ಸಮರ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News