ಬಳಕೆದಾರರಿಗೆ ಬಿಲ್ ಆಘಾತ: ಆನ್‌ಲೈನ್ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್‌ಗಳ ಕುರಿತು ಟ್ರಾಯ್ ಸೂಚನೆ

Update: 2020-05-11 18:10 GMT

ಹೊಸದಿಲ್ಲಿ, ಮೇ 11: ಪ್ರಮಾದವಶಾತ್ ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಗಳನ್ನು ಡಯಲ್ ಮಾಡುವ ಮೂಲಕ ಆನ್‌ಲೈನ್ ಕಾನ್ಫರೆನ್ಸಿಂಗ್‌ಗಳಲ್ಲಿ ಭಾಗಿಯಾದ ಕೆಲವು ಬಳಕೆದಾರರು ಅಧಿಕ ಬಿಲ್‌ನ ಆಘಾತವನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು,ಆಡಿಯೊ ಕಾಲ್‌ಗಳ ಮೂಲಕ ಆನ್‌ಲೈನ್ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸೇರ್ಪಡೆಗೊಳ್ಳುವಾಗ ಎಚ್ಚರಿಕೆಯನ್ನು ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ನಿರಂತರ ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಜನರು ಆನ್‌ಲೈನ್ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಪ್ಲಾಟ್‌ಫಾರ್ಮ್‌ಗಳು/ಆ್ಯಪ್ ಪ್ರೊವೈಡರ್‌ಗಳ ಇಂತಹ ಸಂಖ್ಯೆಗಳು/ಸಹಾಯವಾಣಿಗಳಿಗೆ ಡಯಲ್ ಮಾಡಿದರೆ ಅನ್ವಯವಾಗುವ ದರಗಳ ಬಗ್ಗೆ ತಿಳಿದುಕೊಳ್ಳುವಂತೆ ಅವರಿಗೆ ಎಚ್ಚರಿಕೆಯನ್ನು ನೀಡುವುದು ಅಗತ್ಯವಾಗಿದೆ. ಇಂತಹ ಕೆಲವು ಸೇವಾ ಪೂರೈಕೆದಾರರ ಕಸ್ಟಮರ್ ಕೇರ್ ಸೆಂಟರ್‌ಗಳು ಪ್ರೀಮಿಯಂ ಅಥವಾ ಅಂತರರಾಷ್ಟ್ರೀಯ ಸಂಖ್ಯೆಗಳನ್ನು ಹೊಂದಿರುವ ನಿದರ್ಶನಗಳೂ ಪ್ರಾಧಿಕಾರದ ಗಮನಕ್ಕೆ ಬಂದಿವೆ ಎಂದು ಟ್ರಾಯ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

 ತಮಗೆ ಗೊತ್ತಿಲ್ಲದೆ ಪ್ರಮಾದವಶಾತ್ ಇಂತಹ ಸೇವೆಗಳನ್ನು ಬಳಸುವ ಜನರು ಪ್ರೀಮಿಯಂ ಅಥವಾ ಅಂತರರಾಷ್ಟ್ರೀಯ ಸಂಖ್ಯೆಗಳಿಗೆ ಅನ್ವಯವಾಗುವ ಐಎಸ್‌ಡಿ ದರಗಳನ್ನು ಪಾವತಿಸಬೇಕಾಗಬಹುದು ಎಂದಿರುವ ಟ್ರಾಯ್, ಆನ್‌ಲೈನ್ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್‌ಗಳು ಒದಗಿಸುವ ಡಯಲ್-ಇನ್ ಸೇವೆಯನ್ನು ಬಳಸುವ ಮುನ್ನ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಇಂತಹ ಪ್ಲಾಟ್‌ಫಾರ್ಮ್‌ಗಳ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಲು ಅನ್ವಯವಾಗುವ ಕರೆದರಗಳು ಮತ್ತು ವಿಧಿಸಬಹುದಾದ ಇತರ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News