68 ವರ್ಷ, 4 ದಿನ, 1,600 ಕಿಮೀ ಪ್ರಯಾಣ, 30 ಕಿ.ಮೀ. ಬಾಕಿ ಇರುವಾಗ ಕುಸಿದು ಸಾವು, ಕೋವಿಡ್ ಪಾಸಿಟಿವ್ !
ನಾಗ್ಪುರ: ತನ್ನ ಮನೆಯನ್ನು ತಲುಪಲು 1600 ಕಿ.ಮೀ. ಕ್ರಮಿಸಿದ್ದ 68 ವರ್ಷದ ವೃದ್ಧರೊಬ್ಬರು ಮನೆ ತಲುಪಲು ಕೇವಲ 30 ಕಿ. ಮೀ. ಇರುವಾಗ ಕೊನೆಯುಸಿರೆಳೆದಿರುವ ಘಟನೆ ಉತ್ತರ ಪ್ರದೇಶದ ಕಬೀರ್ ನಗರ್ ನಲ್ಲಿ ನಡೆದಿದೆ. ಮೃತಪಟ್ಟ ವೃದ್ಧ ವ್ಯಕ್ತಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
68 ವರ್ಷದ ರಾಮ್ ಕೃಪಾಲ್ ಮುಂಬೈಯ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 1600 ಕಿ.ಮೀ. ದೂರದ ತನ್ನ ಊರಿಗೆ ಅವರು ಟ್ರಕ್ ಒಂದರಲ್ಲಿ 4 ದಿನಗಳ ಕಾಲ ಪ್ರಯಾಣಿಸಿದ್ದರು.
ಘಗ್ಗರ್ ನದಿ ತೀರದಲ್ಲಿ ಮೃತ ಕೃಪಾಲ್ ರ ಅಂತ್ಯಕ್ರಿಯೆ ನಡೆಸಲಾಯಿತು. ಮಂಗಳವಾರ ಲಕ್ನೋ-ಗೋರಖ್ ಪುರ ಹೆದ್ದಾರಿಯಲ್ಲಿ ಟ್ರಕ್ ನಲ್ಲಿ ಬಂದಿಳಿದ ನೂರಾರು ವಲಸೆ ಕಾರ್ಮಿಕರ ಗುಂಪಿನಲ್ಲಿ ಒಬ್ಬರಾಗಿದ್ದರು ರಾಮ್ ಕೃಪಾಲ್. ಕೋವಿಡ್ 19 ಸ್ಕ್ರೀನಿಂಗ್ ಗಾಗಿ ಈ ಕಾರ್ಮಿಕರೆಲ್ಲರೂ ಸಂತ ಕಬೀರ್ ಜಿಲ್ಲಾ ಜೈಲಿಗೆ ತೆರಳಿದ್ದರು. ಆದರೆ ಸ್ಕ್ರೀನಿಂಗ್ ಕೇಂದ್ರ ತಲುಪುವ ಮೊದಲೇ ಕೃಪಾಲ್ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.
ರಾಮ್ ಕೃಪಾಲ್ ಅವರಿಗೆ ತನಗೆ ಸೇರಿದ್ದು ಎಂದು ಏನೂ ಇರಲಿಲ್ಲ. ಅವರ ಬಳಿ ಇದ್ದದ್ದು ಮಾತ್ರೆಗಳು ಮತ್ತು ಖಾಲಿ ಬಾಟಲಿ. ಕುಸಿದು ಬೀಳುವುದಕ್ಕೂ ಮೊದಲು ರಾಮ್ ಕೃಪಾಲ್ ‘ನನಗೆ ಸ್ವಲ್ಪ ನೀರು ಕೊಡಿ’ ಎಂದು ಅಂಗಲಾಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿ theprint.in ವರದಿ ಮಾಡಿದೆ.