ರಸ್ತೆ ಅಪಘಾತ: 24 ಗಂಟೆಗಳಲ್ಲಿ 17 ವಲಸೆ ಕಾರ್ಮಿಕರು ಮೃತ್ಯು

Update: 2020-05-15 03:39 GMT

ಹೊಸದಿಲ್ಲಿ, ಮೇ 15: ಕಳೆದ 24 ಗಂಟೆಗಳಲ್ಲಿ ವಿವಿಧೆಡೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 17 ವಲಸೆ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಇತರ 93 ಮಂದಿ ಗಾಯಗೊಂಡಿದ್ದಾರೆ. ವಲಸೆ ಕಾರ್ಮಿಕರು ಬಸ್, ಟ್ರಕ್ ಅಥವಾ ಕಾಲ್ನಡಿಗೆಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೊದಲ ಘಟನೆಯಲ್ಲಿ ಬುಧವಾರ ತಡರಾತ್ರಿ ಹರ್ಯಾಣದಿಂದ ಬಿಹಾರಕ್ಕೆ ನಡೆದು ಹೋಗುತ್ತಿದ್ದ 16 ಮಂದಿ ವಲಸೆ ಕಾರ್ಮಿಕರ ಮೇಲೆ ಮುಝಾಫರ್‌ ನಗರ- ಸಹರಣಪುರ ರಾಜ್ಯ ಹೆದ್ದಾರಿಯಲ್ಲಿ ಬಸ್ ಹರಿದು ಆರು ಮಂದಿ ಬಲಿಯಾಗಿದ್ದರು.

ಮತ್ತೊಂದು ಘಟನೆಯಲ್ಲಿ 36 ವರ್ಷದ ವಲಸೆ ಕಾರ್ಮಿಕ ಗುರುಗಾಂವ್‌ನಿಂದ 1,200 ಕಿಲೋಮೀಟರದದ ದೂರದ ಬಿಹಾರದ ಸಮಷ್ಟಿಪುರಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ, ದಿಲ್ಲಿ- ಗುರುಗಾಂವ್ ಎಕ್ಸ್‌ಪ್ರೆಸ್‌ವೇ ಮಧ್ಯದ ಝಾರ್ಸಾ ಎಂಬಲ್ಲಿ ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ ಮಹಾರಾಷ್ಟ್ರದಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರಿದ್ದ ಟ್ರಕ್ ಮಧ್ಯಪ್ರದೇಶದ ಗುಣಾ ಬಳಿ ಬಸ್ ಢಿಕ್ಕಿ ಹೊಡೆದು ಆರು ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಮೃತಪಟ್ಟ ಎಲ್ಲರೂ ಉತ್ತರ ಪ್ರದೇಶದ ಉನ್ನಾವೊ ಮತ್ತು ರಾಯ ಬರೇಲಿ ಜಿಲ್ಲೆಯವರಾಗಿದ್ದು, ತಲಾ ,4000 ರೂಪಾಯಿ ಪಾವತಿಸಿ ಹುಟ್ಟೂರಿಗೆ ಟ್ರಕ್‌ನಲ್ಲಿ ವಾಪಸ್ಸಾಗುತ್ತಿದ್ದರು.

ಬಿಹಾರದಲ್ಲಿ ಸಂಭವಿಸಿದ ಮತ್ತೊಂದು ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟು, 24 ಮಂದಿ ತೀವ್ರ ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ. ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸಮಷ್ಟಿಪುರ ಜಿಲ್ಲೆಯ ಶಂಕರ ಚೌಕ್ ಬಳಿ ಟ್ರಕ್‌ಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News