ಮಗುವಿಗೆ ಜನ್ಮನೀಡಿದ ಕೊರೋನ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ

Update: 2020-05-15 03:50 GMT

ಕರ್ನೂಲ್, ಮೇ 15: ಕೊರೋನ ವೈರಸ್ ಸೋಂಕು ತಗುಲಿದ ಬಳಿಕ ಗಂಡುಮಗುವಿಗೆ ಜನ್ಮನೀಡಿದ ಮಹಿಳೆಯೊಬ್ಬರು ಇದೀಗ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಡೀ ರಾಜ್ಯದಲ್ಲಿ ಗರಿಷ್ಠ (591) ಪ್ರಕರಣಗಳು ದಾಖಲಾದ ಜಿಲ್ಲೆಯಲ್ಲಿ ಗುರುವಾರ ಒಂದೂ ಪ್ರಕರಣಗಳು ದಾಖಲಾಗದ ಖುಷಿಯ ನಡುವೆಯೇ ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಹರ್ಷೋದ್ಗಾರ, ಚಪ್ಪಾಳೆಯ ನಡುವೆ ಮಗುವನ್ನು ಗುರುವಾರ ಮಹಿಳೆಗೆ ಹಸ್ತಾಂತರಿಸಿ, ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ದಿಲ್ಲಿಯಿಂದ ಆಗಮಿಸಿದ್ದ ವ್ಯಕ್ತಿಯ ಜತೆ ಸಂಪರ್ಕದಿಂದಾಗಿ 22 ವರ್ಷದ ಮಹಿಳೆಗೆ ಸೋಂಕು ತಗುಲಿತ್ತು. ಮಾರ್ಚ್ 27ರಂದು ಕೊರೋನ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆಯನ್ನು ಜಿಜಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನವೇ ಇವರಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಮರುದಿನ ಡಾ.ಶ್ರೀಲತಾ ನೇತೃತ್ವದ ವೈದ್ಯರ ತಂಡ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಸೋಂಕಿತ ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದರು.

ತಾಯಿಗೆ ಸೋಂಕು ಇದ್ದ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ಪ್ರತ್ಯೇಕಿಸಿ, ಐಸಿಯುನಲ್ಲಿ ಇಡಲಾಗಿತ್ತು ಹಾಗೂ ಹಸುವಿನ ಹಾಲನ್ನು ಮಗುವಿಗೆ ನೀಡಲಾಗುತ್ತಿತ್ತು. ಮಹಿಳೆಯನ್ನು ಸತತ ಎರಡು ಪರೀಕ್ಷೆ ನಡೆಸಿದಾಗಲೂ ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮಹಿಳೆಗೆ ಮಗುವನ್ನು ಹಸ್ತಾಂತರಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದು ಮಹಿಳೆಯ ಮೊದಲ ಹೆರಿಗೆಯಾಗಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಈ ಮಹಿಳೆಯ ಹೊರತಾಗಿ ಇಬ್ಬರು ಕೋವಿಡ್-19 ಸೋಂಕಿತ ಮಹಿಳೆಯರಿಗೆ ಇಲ್ಲಿ ಹೆರಿಗೆಯಾಗಿದ್ದು, ತಾಯಂದಿರು ಹಾಗೂ ಮಕ್ಕಳು ಆರೋಗ್ಯದಿಂದ ಇದ್ದಾರೆ. ಇವರನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News