ಆಝಾನ್ ಕರೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವುದಿಲ್ಲ: ಅಲಹಾಬಾದ್ ಹೈಕೋರ್ಟ್

Update: 2020-05-15 16:08 GMT

ಹೊಸದಿಲ್ಲಿ, ಮೇ. 15: ಲಾಕ್‌ಡೌನ್ ಅವಧಿಯಲ್ಲಿ ಮಸೀದಿಯ ಮಿನಾರುಗಳಿಂದ ಅಝಾನ್ ಕರೆಯನ್ನು ನೀಡಲು ಉತ್ತರ ಪ್ರದೇಶದಲ್ಲಿಯ ಮುಅಝ್ಝಿನ್‌ಗಳಿಗೆ ಅವಕಾಶ ಕಲ್ಪಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಅಝಾನ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದೆ.

ಆದರೆ ಅಝಾನ್ ಕರೆಯಲು ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಶಶಿಕಾಂತ ಗುಪ್ತಾ ಮತ್ತು ಅಜಿತಕುಮಾರ ಅವರ ಪೀಠವು, ಲೌಡ್‌ಸ್ಪೀಕರ್‌ಗಳು ಅಥವಾ ಮೈಕ್ರೋಫೋನ್‌ಗಳ ಬಳಕೆಯನ್ನು ಇಸ್ಲಾಮಿನ ಅವಿಭಾಜ್ಯ ಅಂಗವೆಂದು ಪರಿಗಣಿಸುವಂತಿಲ್ಲ ಎಂದು ತಿಳಿಸಿತು.

ವಾಸ್ತವದಲ್ಲಿ ಧ್ವನಿವರ್ಧಕಗಳ ಬಳಕೆಯು ಸಂವಿಧಾನದ ವಿಧಿ 19(1)(ಎ) ಅಡಿ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ಶುಕ್ರವಾರ ವಿಚಾರಣೆ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯವು,ಇತರ ಜನರನ್ನು ಬಲವಂತದ ಕೇಳುಗರನ್ನಾಗಿಸಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ. ಯಾರೇ ಆದರೂ ಇತರರ ಪ್ರಾಥಮಿಕ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿಗೆ ವ್ಯತ್ಯಯವನ್ನುಂಟು ಮಾಡುವಂತಿಲ್ಲ ಎಂದು ಹೇಳಿತು.

ಕೇಂದ್ರ ಗೃಹ ಸಚಿವಾಲಯವು ಮಾ.24ರಂದು ಹೊರಡಿಸಿದ್ದ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಎಲ್ಲ ಆರಾಧನಾ ಸ್ಥಳಗಳನ್ನು ಮುಚ್ಚಲು ನಿರ್ದೇಶ ನೀಡಿದೆ,ಹೀಗಾಗಿ ಮಸೀದಿಯಿಂದ ಅಝಾನ್ ಕರೆಯುವುದು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ರಾಜ್ಯ ಸರಕಾರವು ವಾದಿಸಿತ್ತು.

ಈ ವಾದವನ್ನು ತಳ್ಳಿ ಹಾಕಿದ ಪೀಠವು,ಮಸೀದಿಯಲ್ಲಿರುವ ಒಬ್ಬನೇ ವ್ಯಕ್ತಿ ಅಂದರೆ ಮುಅಝ್ಝಿನ್/ಇಮಾಂ ಧ್ವನಿವರ್ಧಕವನ್ನು ಬಳಸದೆ ಅಝಾನ್ ಕರೆಯನ್ನು,ಅದೂ ಮುಸ್ಲಿಮರನ್ನು ಮಸೀದಿಗೆ ಆಹ್ವಾನಿಸದೆ ನೀಡುವುದು ಯಾವುದೇ ಮಾರ್ಗಸೂಚಿಯನ್ನು ಹೇಗೆ ಉಲ್ಲಂಘಿಸುತ್ತದೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ ಎಂದು ಹೇಳಿತು.

ಧ್ವನಿವರ್ಧಕಗಳನ್ನು ಬಳಸದೆ ಮಸೀದಿಯಿಂದ ಅಝಾನ್ ಕರೆ ನೀಡುವುದಕ್ಕೆ ಲಾಕ್‌ಡೌನ್ ನಿಯಮಗಳ ಉಲ್ಲಂಘನೆಯ ನೆಪದಲ್ಲಿ ಯಾವುದೇ ಅಡ್ಡಿಯನ್ನುಂಟು ಮಾಡದಂತೆ ಉಚ್ಚ ನ್ಯಾಯಾಲಯವು ಜಿಲ್ಲಾಡಳಿತಗಳಿಗೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News