ಮಾಸ್ಕ್, ಪಿಪಿಇ ಕಿಟ್ ಒದಗಿಸಿಲ್ಲ ಎಂದು ಮಿಂಚಿನ ಮುಷ್ಕರ ನಡೆಸಿದ ಅಹ್ಮದಾಬಾದ್ ಎಸ್‍ವಿಪಿ ಆಸ್ಪತ್ರೆ ವೈದ್ಯರು

Update: 2020-05-16 12:23 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್ : ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ತಮಗೆ ಎನ್95 ಮಾಸ್ಕ್ ಹಾಗೂ ಪಿಪಿಇ ಒದಗಿಸಲಾಗಿಲ್ಲ ಎಂದು ದೂರಿ ಎಲ್ಲಿಸ್‍ಬ್ರಿಡ್ಜ್ ಪ್ರದೇಶದಲ್ಲಿರುವ ಎಸ್‍ವಿಪಿ ಆಸ್ಪತ್ರೆಯ ಸುಮಾರು ನೂರು ಮಂದಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಇಂದು ಮಿಂಚಿನ ಮುಷ್ಕರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

“ನಿಮ್ಮ ಹಣ ತೆತ್ತು ಎನ್95 ಮಾಸ್ಕ್ ಖರೀದಿಸಿ ಇಲ್ಲವೇ ಎರಡು-ಮೂರು ಸಾಮಾನ್ಯ ಮಾಸ್ಕ್ ಧರಿಸಿ ಕೋವಿಡ್ ವಾರ್ಡ್‍ಗಳಿಗೆ ತೆರಳಿ ಎಂದು ಆಸ್ಪತ್ರೆ ಆಡಳಿತ ಹೇಳುತ್ತಿದೆ. ಇದು ಆಘಾತಕಾರಿ ಹಾಗೂ ಅಸ್ವೀಕಾರಾರ್ಹ,'' ಎಂದು ಮುಷ್ಕರನಿರತ ವೈದ್ಯರೊಬ್ಬರು ಹೇಳಿದ್ದಾರೆ.

ಕೋವಿಡ್ ವಾರಿಯರ್‍ಗಳಿಗೆ ಸಾಕಷ್ಟು ಸುರಕ್ಷಾ ಸಾಧನಗಳಿವೆ ಎಂದು ಹೇಳಿಕೊಳ್ಳುತ್ತಿದ್ದ ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಶನ್ನಿಗೆ ಈ ಮುಷ್ಕರದಿಂದ ತೀವ್ರ  ಮುಜುಗರವುಂಟಾಗಿ ತಕ್ಷಣ  2,000 ಎನ್95 ಮಾಸ್ಕ್‍ಗಳನ್ನು  ವಡೋದರಾದಿಂದ  ತರಿಸಲು ಸೂಚಿಸಿದೆ.

ಅತ್ತ ಆಸ್ಪತ್ರೆ ಸ್ಪಷ್ಟೀಕರಣ ನೀಡಿ “ಯಾವುದೇ ಪಿಪಿಇ ಕೊರತೆಯಿಲ್ಲ,  ಎಲ್ಲಾ ಸಿಬ್ಬಂದಿಗಳಿಗೆ ಮಾರ್ಗಸೂಚಿಯಾನುಸಾರ ಪಿಪಿಇ ಕಿಟ್ ಒದಗಿಸಲಾಗಿದೆ. ವೈದ್ಯರ ಮುಷ್ಕರ ಫೋಟೋಗಳಲ್ಲೂ ಕೆಲವರು ಎನ್95 ಮಾಸ್ಕ್ ಧರಿಸಿರುವುದು ಕಾಣಿಸುತ್ತದೆ,'' ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News