ದೇಶಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಾಖಲೆ ಹೆಚ್ಚಳ

Update: 2020-05-17 03:45 GMT

ಹೊಸದಿಲ್ಲಿ, ಮೇ 17: ಕೊರೋನ ವೈರಸ್ ಸೋಂಕು ಭಾರತದಲ್ಲಿ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 4,885 ಪ್ರಕರಣಗಳು ದೃಢಪಟ್ಟಿವೆ. ಗುಜರಾತ್‌ನಲ್ಲಿ ಒಂದೇ ದಿನ 1,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಹ್ಮದಾಬಾದ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಜನರನ್ನು ತೀವ್ರವಾಗಿ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಈ ನಗರದಲ್ಲೇ 709 ಪ್ರಕರಣಗಳು ಬೆಳಕಿಗೆ ಬಂದಿವೆ.

ಮಹಾರಾಷ್ಟ್ರದಲ್ಲಿ ಕೊರೋನ ಅಟ್ಟಹಾಸ ಮುಂದುವರಿದಿದ್ದು, 1,606 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, ಒಂದೇ ದಿನ 67 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90,674 ಆಗಿದ್ದು, ಕೇವಲ ಎರಡು ದಿನಗಳಲ್ಲಿ ಈ ಸಂಖ್ಯೆ 80 ಸಾವಿರದಿಂದ 90 ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ (30,706), ತಮಿಳುನಾಡು (10,585) ಮತ್ತು ಗುಜರಾತ್ (10,989) ರಾಜ್ಯಗಳು 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದ ರಾಜ್ಯಗಳೆನಿಸಿವೆ. ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 348 ಪ್ರಕರಣಗಳು ವರದಿಯಾಗಿದ್ದರೆ, ಉಳಿದ ಪ್ರಕರಣಗಳು ಅಹ್ಮದಾಬಾದ್ ಮಹಾನಗರ ಪಾಲಿಕೆ ಒಂದು ವಾರದ ಅವಧಿಯಲ್ಲಿ ಕೈಗೊಂಡ ಪರೀಕ್ಷೆಯಿಂದ ದೃಢಪಟ್ಟ ಪ್ರಕರಣಗಳಾಗಿವೆ.

ಮಹಾರಾಷ್ಟ್ರದಲ್ಲಿ ಶನಿವಾರ 67 ಮಂದಿ ಕೋವಿಡ್-19 ಸೋಂಕಿತರು ಜೀವ ಕಳೆದುಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 1,135 ಆಗಿದೆ. ಮಹಾರಾಷ್ಟ್ರದಲ್ಲಿ ಸತತ 11ನೇ ದಿನ ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ ಶನಿವಾರ 2,045 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದು, ಒಟ್ಟು 31,873 ಮಂದಿ ಗುಣಮುಖರಾಗಿದ್ದಾರೆ. ಅಂದರೆ ಇದುವರೆಗೆ ದಾಖಲಾದ ಪ್ರಕರಣಗಳ ಪೈಕಿ ಶೇಕಡ 35ರಷ್ಟು ಮಂದಿ ಸೋಂಕುಮುಕ್ತರಾಗಿದ್ದಾರೆ.

ಮಧ್ಯಪ್ರದೇಶದಲ್ಲೂ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದು, ಇಂಧೋರ್ ನಗರದಲ್ಲಿ 92 ಸೇರಿದಂತೆ ಒಟ್ಟು 254 ಪ್ರಕರಣಗಳು ದೃಢಪಟ್ಟಿವೆ. ಭೋಪಾಲ್‌ನಲ್ಲಿ 46 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4928ನ್ನು ತಲುಪಿದೆ,

ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ವಾಪಸ್ಸಾಗಿರುವ ಉತ್ತರ ಪ್ರದೇಶದಲ್ಲಿ 203 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 4264 ಆಗಿದೆ. ಒಂಬತ್ತು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ ಕೂಡಾ ಸತತ ನಾಲ್ಕನೇ ದಿನ 200ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಶನಿವಾರದ 213 ಪ್ರಕರಣಗೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,960ಕ್ಕೇರಿದೆ. ರಾಜ್ಯದಲ್ಲಿ ಒಟ್ಟು 126 ಮಂದಿ ಜೀವ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News