ಉತ್ತರ ಪ್ರದೇಶ: ಕ್ವಾರಂಟೈನ್ ನಲ್ಲಿರುವವರಿಗೆ ಹಳಸಿದ ಅನ್ನ ನೀಡಿದ ಕುರಿತು ವರದಿ; ಪತ್ರಕರ್ತನ ವಿರುದ್ಧ ಎಫ್‍ಐಆರ್

Update: 2020-05-18 12:07 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿನ ಮಹೋಲಿ ತೆಹ್ಸಿಲ್ ಎಂಬಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಹಳಸಿದ ಅನ್ನ ನೀಡಲಾಗುತ್ತಿರುವ ಕುರಿತಂತೆ ಹಾಗೂ ಅಲ್ಲಿನ ಆಡಳಿತದ ನಿರ್ಲಕ್ಷ್ಯ ಕುರಿತಂತೆ ವರದಿ ಮಾಡಿದ ಟುಡೇ-24 ಸುದ್ದಿ ತಾಣದ ಪತ್ರಕರ್ತ ರವೀಂದ್ರ ಸಕ್ಸೇನಾ ಅವರ ವಿರುದ್ಧ ಉತ್ತರ ಪ್ರದೇಶ ಆಡಳಿತ ಎಫ್‍ಐಆರ್ ದಾಖಲಿಸಿದೆ.

ಈ ನಿರ್ದಿಷ್ಟ ಕ್ವಾರಂಟೈನ್ ಕೇಂದ್ರದ ಜನರ ಜತೆ ಸಕ್ಸೇನಾ ಅವರು ಮಾತನಾಡಿದ್ದ ವೀಡಿಯೋ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಈ ವರದಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ದಜನರು ತಮಗೆ  ಹಳಸಿದ ಅನ್ನ ನೀಡಲಾಗಿದೆಯೆಂದು ಆರೋಪಿಸಿದ್ದರು.

“ಕೆಲವೊಂದು ಮಾಹಿತಿಗಾಗಿ ಎಸ್‍ಡಿಎಂ ಶಶಿಭೂಷಣ್ ರೈ ಅವರ ಕಚೇರಿಗೆ ತೆರಳಿದ್ದ ಸಂದರ್ಭ ತಮಗೆ ಹಳಸಿದ ಅನ್ನ ನೀಡಲಾಗುತ್ತಿದೆ ಎಂದು ಆರೋಪಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನೋಡಿದೆವು. ನಂತರ ನಾವು ಕ್ವಾರಂಟೈನ್ ಕೇಂದ್ರಕ್ಕೆ ತೆರಳಿ ವಿಸ್ತೃತ ವರದಿ ಮಾಡಿದ್ದೆವು'' ಎಂದು ಸಕ್ಸೇನಾ ಹೇಳಿಕೊಂಡಿದ್ದಾರೆ.

“ತರಬೇತಿಯಲ್ಲಿರುವ ಪರಿಶಿಷ್ಟ ವರ್ಗದ ಅಕೌಂಟೆಂಟ್ ಒಬ್ಬರ ಮುಖಾಂತರ ನನ್ನ ವಿರುದ್ಧ ದೂರು ದಾಖಲಿಸಲಾಗಿದ್ದು, ಎಫ್‍ಐಆರ್ ಅನ್ನು ಮುಖ್ಯಮಂತ್ರಿಯ ಆದೇಶಾನುಸಾರ ದಾಖಲಿಸಲಾಗಿದೆ'' ಎಂದು ಸಕ್ಸೇನಾ ಹೇಳಿಕೊಂಡರು.

ಈ ಪ್ರಕರಣ ಕುರಿತಂತೆ ಎಸ್‍ಡಿಎಂ ಶಶಿ ಭೂಷಣ್ ಇನ್ನೂ ಪ್ರತಿಕ್ರಿಯಿಸಿಲ್ಲ. ಸರಕಾರ ಕೋವಿಡ್-19 ಸಮಸ್ಯೆ ನಿಭಾಯಿಸಿದ ರೀತಿಯಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿದ ಪತ್ರಕರ್ತರ ವಿರುದ್ಧ ಹಿಮಾಚಲ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಅಂಡಮಾನ್ ಹಾಗೂ ನಿಕೋಬಾರ್‍ನಲ್ಲೂ ಈ ಹಿಂದೆ ಪ್ರಕರಣ ದಾಖಲಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News